ನಾಳೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯುವ ಪೌರತ್ವ ವಿರೋಧಿ ಪ್ರತಿಭಟನೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ : ಹೇಮನಾಥ ಶೆಟ್ಟಿ
ದೇಶ ದಲ್ಲಿ ಕೆಲವು ಮಾರಕವಾದ ಕಾನೂನು ಗಳನ್ನು ತಂದು ಅಭದ್ರತೆ ಸೃಷ್ಟಿಸಿ, ದೇಶದಲ್ಲಿ ಗೊಂದಲ, ಅಲ್ಲದೆ ಸ್ಥಳೀಯವಾಗಿಯೂ ಸಮಸ್ಯೆ ಗಳನ್ನು ಕೇಂದ್ರ ಸರಕಾರ ತಂದೊಡ್ಡಿದೆ ಎಂದು ಪುತ್ತೂರಿನಲ್ಲಿ ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಸುದ್ದಿ ಗೋಷ್ಠಿಯಲ್ಲಿ ಹೇಳಿದರು.
ಕೆಲ ವರ್ಷದ ಹಿಂದೆ ನೋಟ್ ಬ್ಯಾನ್ ಮಾಡಿ ದೇಶದ ಆರ್ಥಿಕ ಪರಿಸ್ಥಿತಿ ಕುಸಿತ ಕಂಡಿದೆ, ಇದೀಗ ಪೌರತ್ವ ಕಾಯಿದೆ ತರುವುದರ ಮೂಲಕ ದೇಶದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕಳೆದ 70 ವರ್ಷಗಳಿಂದ ಪೌರತ್ವದ ತೊಂದರೆಯಾಗಲಿಲ್ಲ, ಆದರೆ ಇಂದು ಅದರ ಅಗತ್ಯತೆ ಏನು ? ಸರಕಾರ ಒಂದು ಸಮುದಾಯವನ್ನು, ಒಂದು ವರ್ಗವನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ. ಸರ್ವಾಧಿಕಾರದ ಆಡಳಿತ ಚಲಾಯಿಸುತ್ತಿದ್ದಾರೆ. ಪ್ರತಿಭಟನಾಕಾರರನ್ನು ಗೋಲಿಬಾರ್ ಮುಖಾಂತರ ಕೊಲ್ಲುವ ರಾಜಕೀಯ ಮಾಡುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಭದ್ರತೆ ನೀಡುವುದು ಸರಕಾರದ ಕೆಲಸ. ಕಾಂಗ್ರೆಸ್ ಪಕ್ಷ ಇಷ್ಟರವರೆಗೆ ಭದ್ರತೆ ನೀಡುವ ಕೆಲಸ ಮಾಡಿದೆ, ಆದರೆ ಇಂದು ಅಭದ್ರತೆ ಉಂಟಾಗುತ್ತಿದೆ.
ಯಾವುದೇ ಸಂದರ್ಭ ರಾಜ್ಯದಲ್ಲಿ ಗಲಭೆಗಳಾದಾಗ ಪ್ರಾಣಹಾನಿಯಾದ ಕುಟುಂಬಗಳಿಗೆ ಪರಿಹಾರ ನೀಡುವುದು ಮಾನವೀಯತೆ, ಆದರೆ ಪರಿಹಾರ ಘೋಷಣೆ ಮಾಡಿ ಅದನ್ನು ವಾಪಸು ಪಡೆದುಕೊಂಡ ಮುಖ್ಯಮಂತ್ರಿ ಗಳು, ಮಂಗಳೂರಿನ ಗಲಭೆಯಲ್ಲಿ ಅಲ್ಪ ಸಂಖ್ಯಾತರು ಎಂಬ ಕಾರಣಕ್ಕಾಗಿ ಇಂತಹ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಯವರರಿಗೆ ನಾಚಿಕೆಯಾಗಬೇಕು ಎಂದು ಟೀಕಿಸಿದರು.
ಈ ಸಮಾಜದಲ್ಲಿ ಎಲ್ಲಾ ವರ್ಗದವರ ಬದುಕಿನ ಜವಾಬ್ದಾರಿ ಸರ್ಕಾರದ್ದಾಗಿದೆ. ಈ ನಿಟ್ಟಿನಲ್ಲಿ ನಾಳೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯುವ ಪೌರತ್ವ ವಿರೋಧಿ ಪ್ರತಿಭಟನೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ. ಜನಸಾಮಾನ್ಯರ ಬದುಕಿನ ಸಮಸ್ಯೆಗಳತ್ತ ಕೇಂದ್ರ ಸರಕಾರದ ಗಮನ ಸೆಳೆಯುವ ಹಾಗೂ ಪೌರತ್ವ ಕಾಯಿದೆಯಿಂದ ಉಂಟಾಗುವ ಸಮಸ್ಯೆಗಳತ್ತ ಸರ್ಕಾರದ ಗಮನ ಸೆಳೆಯುವುದೇ ಈ ಸಮಾವೇಶದ ಉದ್ದೇಶವಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಯು. ಟಿ ತೌಸಿಫ್, ಕಾಂಗ್ರೆಸ್ ಮುಖಂಡರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ, ಹನೀಫ್ ಬಗ್ಗುಮೂಲೆ ಉಪಸ್ಥಿತರಿದ್ದರು.