ಪುತ್ತೂರು ವಿರಾಟ್ ಭಜನೋತ್ಸವ-2020 ಫೆ.8 ರಂದು | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರ ಗದ್ದೆಯಲ್ಲಿ

ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಶ್ರಯದಲ್ಲಿ, ಪುತ್ತೂರು ತಾಲೂಕು ಭಜನಾ ಪರಿಷತ್ ನೇತೃತ್ವದಲ್ಲಿ, ನಾನಾ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಭಜನೋತ್ಸವವನ್ನು 2020ರ ಫೆ.8ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರ ಗದ್ದೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
“ಪುತ್ತೂರು ವಿರಾಟ್ ಭಜನೋತ್ಸವ-2020” ಎಂಬ ಹೆಸರಿನ ಈ ಭಜನೋತ್ಸವ ಇಡೀ ದಿನ ನಡೆಯಲಿದ್ದು, ಜಿಲ್ಲೆಯ ಮೂಲೆ ಮೂಲೆಗಳಿಂದ ಸಾವಿರಕ್ಕೂ ಅಧಿಕ ಭಜನಾ ತಂಡಗಳು ಭಾಗವಹಿಸಲಿವೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ವಿರಾಟ್ ಭಜನೋತ್ಸವ ನಡೆಯಲಿದ್ದು, ಮಂಗಳವಾರ ದೇವಳದ ಶ್ರೀ ನಟರಾಜ ವೇದಿಕೆಯಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು.
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿದರು.

ಜಿಲ್ಲಾಮಟ್ಟದ ಭಜನೋತ್ಸವ ಪುತ್ತೂರಿನಲ್ಲಿ ನಡೆಯುತ್ತಿರುವುದು ಸಂತೋಷದ ವಿಚಾರ. ಅದರಲ್ಲೂ ಶ್ರೀ ಮಹಾಲಿಂಗೇಶ್ವರ ದೇವಳದ ಎದುರು ನಡೆಯುವುದು ದೇವರ ಸಂಕಲ್ಪವಾಗಿದೆ. ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಎಲ್ಲರೂ ಸಹಕರಿಸಬೇಕು. ಎಲ್ಲ ದೇವಸ್ಥಾನ, ದೈವಸ್ಥಾನ, ಭಜನಾ ಸಂಘಗಳು, ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದರು.


Ad Widget

Ad Widget

Ad Widget

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯ ಕಾರ್ಯದರ್ಶಿಗಳೂ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕರೂ ಆದ ಜಯರಾಮ ನೆಲ್ಲಿತ್ತಾಯ ಪ್ತಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಮಟ್ಟದ ಭಜನಾ ಮಹೋತ್ಸವ ಪುತ್ತೂರಿನಲ್ಲಿ ನಡೆಯಬೇಕೆಂಬುದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯವಾಗಿದೆ. ಇದನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದರು.ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷರಾದ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಮಾತನಾಡಿ, ಈ ಮೆಗಾ ಮಹೋತ್ಸವ ನಡೆಸಲು ಪುತ್ತೂರಿಗಿಂತ ಪ್ರಶಸ್ತ ಸ್ಥಳ ಬೇರೊಂದಿಲ್ಲ. ಈ ಮೊದಲು ಉಪ್ಪಿನಂಗಡಿಯಲ್ಲಿ ನಡೆಸಿದ ಭಜನಾ ಮಹೋತ್ಸವ ಕೂಡ ಯಶಸ್ವಿಯಾಗಿತ್ತು. ಇದು ಅದಕ್ಕಿಂತಲೂ ದೊಡ್ಡ ಮಟ್ಟದ್ದು ಎಂದರು.

ಎಸ್‍ಕೆಡಿಆರ್‍ಡಿಪಿ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ತಾಲೂಕು ಯೋಜನಾಧಿಕಾರಿ ಜನಾರ್ದನ್ ಎಸ್., ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಸುಬ್ಬಯ್ಯ ರೈ, ಕಾರ್ಯದರ್ಶಿ ಲೋಕೇಶ್ ಬೆತ್ತೋಡಿ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಮಹಾಬಲ ಶೆಟ್ಟಿ, ತಾಲೂಕು ಪ್ರಗತಿಬಂಧು ಒಕ್ಕೂಟಗಳ ಅಧ್ಯಕ್ಷರಾದ ರಾಮಣ್ಣ ಗೌಡ ಗುಂಡೋಲೆ, ಯೋಜನೆಯ ಮೇಲ್ವಿಚಾರಕಿ ಪಾವನಾ ಉಪಸ್ಥಿತರಿದ್ದರು. ಮುಖಂಡರಾದ ಎನ್.ಕೆ.ಜಗನ್ನಿವಾಸ ರಾವ್, ಪದ್ಮನಾಭ ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ, ಲೋಕೇಶ್ ಹೆಗ್ಡೆ, ಅಮಳ ರಾಮಚಂದ್ರ, ಕೃಷ್ಣ ಪ್ರಸಾದ್ ಆಳ್ವಾ, ಹರಿಣಾಕ್ಷಿ ಜೆ. ಶೆಟ್ಟಿ, ನಯನಾ ರೈ, ಸೀತಾರಾಮ ಗೌಡ ಪೊಸೊಳಿಕೆ ಸೇರಿದಂತೆ ನೂರಕ್ಕೂ ಅಧಿಕ ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರ್ವಹಿಸಿದರು.

ಸಮಿತಿ ರಚನೆ ಫೆ.8ರಂದು ಬೆಳಗ್ಗೆ 9ರಿಂದ ರಾತ್ರಿ 10 ಗಂಟೆಯವರೆಗೆ ಜಿಲ್ಲಾಮಟ್ಟದ ಭಜನೋತ್ಸವ ನಡೆಯಲಿದ್ದು, ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಲು ನಿರ್ಧರಿಸಲಾಯಿತು. ಈ ಸಂದರ್ಭ ವಿರಾಟ್ ಭಜನೋತ್ಸವ ಸಮಿತಿ ರಚಿಸಲಾಯಿತು. ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಗೌರವ ಮಾರ್ಗದರ್ಶಕರಾಗಿ ಇರುತ್ತಾರೆ.

ಗೌರವಾಧ್ಯಕ್ಷರಾಗಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಲ್ಲಿಕಾ ಪ್ರಸಾದ್, ಅಧ್ಯಕ್ಷರಾಗಿ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಕಾರ್ಯಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿಗಳಾಗಿ ದೀಕ್ಷಿತ್ ಹೆಗ್ಡೆ, ಶಿವಪ್ರಸಾದ್, ಲೋಕೇಶ್ ಬೆತ್ತೋಡಿ ಅವರನ್ನು ಆರಿಸಲಾಯಿತು. ಗೌರವ ಸಲಹೆಗಾರರಾಗಿ ಸವಣೂರು ಸೀತಾರಾಮ ರೈ, ಜಯಂತ ನಡುಬೈಲ್, ಪದ್ಮನಾಭ ಶೆಟ್ಟಿ, ಎನ್.ಕೆ. ಜಗನ್ನಿವಾಸ ರಾವ್, ಪ್ರಸಾದ್ ಕೌಶಲ್ ಶೆಟ್ಟಿ, ಜಯಂತ್ ಪುರೋಳಿ, ಲೋಕೇಶ್ ಹೆಗ್ಡೆ, ರಾಮಕೃಷ್ಣ ಕಾಟುಕುಕ್ಕೆ, ಶಶಿಕುಮಾರ್ ರೈ ಬಾಲ್ಯೊಟ್ಟು, ಎನ್. ಸುಧಾಕರ ಶೆಟ್ಟಿ, ಅಶೋಕ್ ಕುಮಾರ್ ರೈ ಕೋಡಿಂಬಾಡಿ, ರಾಜದೀಪಕ್ ಜೈನ್, ಡಾ.ಪ್ರಸಾದ್ ಭಂಡಾರಿ, ಕೋಲ್ಪೆಗುತ್ತು ರಾಜಾರಾಂ ಶೆಟ್ಟಿ, ಶಶಿಧರ ರಾವ್ ಅವರನ್ನು ಆರಿಸಲಾಯಿತು.

ಜಿಲ್ಲಾ ಸಂಚಾಲಕರಾಗಿ ಸಾಜ ರಾಧಾಕೃಷ್ಣ ಆಳ್ವಾ ಮತ್ತು ಸತೀಶ್ ಶೆಟ್ಟಿ, ಕೋಶಾಧಿಕಾರಿಯಾಗಿ ಚಂದ್ರನ್ ತಲಪಾಡಿ ಆಯ್ಕೆಯಾದರು. ಉಳಿದಂತೆ ಜತೆ ಕಾರ್ಯದರ್ಶಿಗಳು, ಉಪ ಸಮಿತಿ ಸಂಚಾಲಕರನ್ನು ನೇಮಿಸಲು ನಿರ್ಧರಿಸಲಾಯಿತು. ಸಮಿತಿಯ ಮುಂದಿನ ಸಭೆಯನ್ನು ಡಿಸೆಂಬರ್ 30ರಂದು ಬೆಳಗ್ಗೆ 10 ಗಂಟೆಗೆ ನಟರಾಜ ವೇದಿಕೆಯಲ್ಲಿ ನಡೆಸಲು ನಿರ್ಧರಿಸಲಾಯಿತು.

Leave a Reply

error: Content is protected !!
Scroll to Top
%d bloggers like this: