ಭೂಮಿಗೆ ತನ್ನ ಗೊಬ್ಬರ ತಾನು ತಯಾರಿಸಿಕೊಳ್ಳುವ ಶಕ್ತಿಯಿದೆ । ನಿಮ್ಮ ಜಮೀನು ಒಂದು ಸ್ವತಂತ್ರ ರಾಷ್ಟ್ರ !! ( ಪಾರ್ಟ್- 2 )

ನ್ಯಾಚುರಲ್ ಫಾರ್ಮರ್ ದಿ.ನಾರಾಯಣ ರೆಡ್ಡಿಯವರ ಸಹಜ ಕೃಷಿ ಪಾಠ .

“ನಾವೇನು ತಿನ್ನುತ್ತಿದ್ದೇವೆಯೋ ಅದೇ ಪರಿಮಾಣದಲ್ಲಿಯೇ ನಾವು ನಮ್ಮ ತೋಟದಲ್ಲಿ ಬಿತ್ತನೆ ಮಾಡಬೇಕು.
ನಮ್ಮ ಊಟದಲ್ಲಿ 60% ಏಕದಳ ಧಾನ್ಯಗಳು, 30% ದ್ವಿದಳ ಧಾನ್ಯಗಳು ಅಂದರೆ ಪಲ್ಸಸ್ ಇರುತ್ತದೆ. ಮತ್ತು ಉಳಿದದ್ದು ಮಸಾಲೆ ಪದಾರ್ಥಗಳು. ಇಷ್ಟೆಲ್ಲವನ್ನೂ ನಾವು ಬೆಳೆಸಿದರೆ ತುಂಬಾ ಒಳ್ಳೆಯದು. ನಮ್ಮ ಊಟ ಮಾಡುವ ಆಹಾರದ ಅನುಪಾತದಲ್ಲೇ ನಮ್ಮ ಬಿತ್ತನೆ ನಡೆಯಬೇಕು.”

” ಈ ತೆಂಗಿನ ನಾರು ಇರುತ್ತಲ್ಲ. ಅದರಲ್ಲಿ 30 ಪರ್ಸೆಂಟ್ ಪೊಟ್ಯಾಷ್ ಇರುತ್ತದೆ. ಅದನ್ನು ತೆಂಗಿನ ಮರದ ಬುಡಕ್ಕೆ ಹಾಕಬಹುದು. ಏನೂ ತೊಂದರೆ ಇಲ್ಲ. ಅದು ಮರದ ಬುಡದಲ್ಲಿ ತೇವಾಂಶ ತುಂಬಾ ಸಮಯ ಹಿಡಿದಿಟ್ಟು ಕಾಪಾಡುತ್ತದೆ. ಒಂದು ಐದಾರು ವರ್ಷದಲ್ಲಿ ಸೂಕ್ಶ್ಮಣು ಜೀವಿಗಳು, ಎರೆಹುಳುಗಳು, ಗೆದ್ದಲು ಮತ್ತು ನೀರು ಸೇರಿಕೊಂಡು ನಿಧಾನವಾಗಿ ಡಿಕಂಪೋಸ್ ಮಾಡಿ ಬಿಡುತ್ತವೆ. ಎರೆಹುಳುಗಳಿಗಳಿಗಿಂತಲೂ ಈ ಗೆದ್ದಲು ಉಂಟಲ್ಲ, ಅದು ಅತ್ಯಂತ ಶ್ರೇಷ್ಠ. ಸಾಸಿವೆಯ ಬೀಜದ ತರ ಇರುತ್ತದೆ. ಸ್ವಲ್ಪಪಾರದರ್ಶಕತೆಯಲ್ಲಿರುತ್ತದೆ. ಅವುಗಳ ಹೊಟ್ಟೆಯೊಳಗೆ ಇರುವ ಪರಾವಲಂಬಿ ಜೀವಿಗಳ ಸಂಖ್ಯೆ ನೋಡಿದರೆ ನೀವು ಆಶ್ಚರ್ಯ ಪಡುತ್ತೀರಿ.”

” ಗೆದ್ದಲಿನ ಹೊಟ್ಟೆಯಲ್ಲಿನ ಮೂರನೆಯ ಎರಡು ಭಾಗ ಇರುವುದು ಶುದ್ಧ ಪರಾವಲಂಬಿ ಜೀವಿಗಳು. ಸುಮಾರು 400 ಕೋಟಿ ಪರಾವಲಂಬಿಗಳು ! ಈ ಪರಾವಲಂಬಿಗಳು ಇಲ್ಲದೆ ಹೋದರೆ ಗೆದ್ದಲು ಬದುಕುವುದಿಲ್ಲ. ಗೆದ್ದಲು ಇಲ್ಲದೆ ಹೋದರೆ ಪರಾವಲಂಬಿಗಳು ಎಲ್ಲಿ ಬದುಕುತ್ತವೆ ? ಗೆದ್ದಲು ತಿನ್ನುವುದಾದರೂ ಏನು ? ಪಾಪ ಗೆದ್ದಲು ತಿನ್ನುವುದೇ ಇಂತಹ ಒಣ ವಸ್ತುಗಳನ್ನು. ಅಥವಾ ಅಲ್ಲಲ್ಲಿ ಸಿಗುವ ಒಣಗಿದ ಸೆಗಣಿಯ ತುಂಡುಗಳನ್ನು. ಹಸಿ ವಸ್ತುಗಳು ಗೆದ್ದಲಿಗೆ ಆಗಿ ಬರುವುದಿಲ್ಲ. ತರಗೆಲೆಗಳು ಗೆದ್ದಲಿಗೆ ಇಷ್ಟವಾದ ತಿಂಡಿ. ಇಂತಹಾ ಒಣ ವಸ್ತುಗಳಲ್ಲಿರುವ ಪೋಷಕಾಂಶಗಳ ಪ್ರಮಾಣವನ್ನು ಕೇಳಿದರೆ ನಿಮಗೆ ಆಶ್ಚರ್ಯ ಆಗಬಹುದು. ಒಂದು ಸಾವಿರದಲ್ಲಿ ಒಂದು ಭಾಗ. ಅಂದರೆ ಸಾವಿರ ಕೆಜಿ ವಸ್ತುವಿನಲ್ಲಿರುವಿರುವ ನೈಟ್ರೋಜೆನ್ ಕೇವಲ ಒಂದು ಕೆಜಿ ಮಾತ್ರ. ಅಂತಹ ವಸ್ತುವನ್ನು ಪುಡಿ ಮಾಡಿ, ಹೊಟ್ಟೆಯಲ್ಲಿರುವ ಕೋಟಿ ಜೀವ ರಾಸಾಯನಿಕ ‘ ಕಂಪನಿಗಳು ‘ ಹೀರಿಕೊಂಡು, ಮತ್ತೆ ಭೂಮಿಗೆ ಬಿಟ್ಟುಕೊಂಡು ಹೀಗೆ ಪರಸ್ಪರ ಪೂರಕ ಬಾಳು ನಡೆಸುತ್ತವೆ.”

ಮಧ್ಯನೀರಿನ ಬಗ್ಗೆ ಮಾತನಾಡುತ್ತಾ ” ಹನಿ ನೀರಾವರಿಯು ಸ್ಪಿಂಕ್ಲರ್ ನೀರಾವರಿಗಿಂತ ಉತ್ತಮ. ಸ್ಪಿಂಕ್ಲರ್ ನೀರಾವರಿಯಲ್ಲಿ ನೀರು ಆವಿ ಮಾತ್ರವಲ್ಲ. ಒಂದು ವೇಳೆ ನೀರು ಗಡುಸು ಇದ್ದಲ್ಲಿ, ಆಗ ನೀರು ಸಸ್ಯದ ಎಲೆಯ ಮೇಲೆ ಮೇಲೆ ಕುಳಿತು ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅಡಚಣೆಯಾಗುತ್ತದೆ ” ಎನ್ನುತ್ತಾ ರೆಡ್ಡಿಯವರು ತಮ್ಮ ತೋಟದಲ್ಲಿ ಮುಂದಕ್ಕೆ ಸಾಗಿದರು.

ಕೃಷಿಯಲ್ಲಿ ಹೊರಗಡೆಯಿಂದ ಏನು ತಂದರೂ ಅದು ಕೆಟ್ಟದ್ದು. ಅವರೊಬ್ಬರು ಮಹಾನುಭಾವರಿದ್ದರು. ಜರ್ಮನಿಯವರು. ಅವರು ಹಾಕುವ ಪುಕುವೋಕಾರನ್ನು ಬಿಟ್ಟರೆ ಸಹಜ ಕೃಷಿಯಲ್ಲಿ ಎರಡನೆಯ ತಂದೆ ಸಮಾನರು. ಅವರು ಪಿಎಚ್ಡಿ ಮಾಡಿ ಸರ್ಕಾರಿ ಕೆಲಸದಲ್ಲಿದ್ದು ಅಲ್ಲಿನ ಅನೈಸರ್ಗಿಕ ಕೃಷಿ ವಿಧಾನವನ್ನು ವಿರೋಧಿಸಿ ಹೊರಬಂದವರು. ಅವರೇ ರುಡಾಲ್ಫ್ ಸ್ಟೀನರ್ ಅಂತ. ಅವರು ಹೇಳಿದ್ದನ್ನು ಅವರು ಹೇಳಿದಂತೆ ಇಂಗ್ಲೀಷಿನಲ್ಲಿ ಮೊದಲು ಕೇಳಿರಿ.

” A farm should be self contained body”
” Nothing shall be come from outside “. ” If at all anything has to come, a new variety of seed at once.”

” ಬೀಜಕ್ಕೆ ಒಂದಷ್ಟು ದುಡ್ಡು, ಸಸಿಗೆ ಇನ್ನೊಂದಷ್ಟು ಹಣ, ರಸಗೊಬ್ಬರಕ್ಕೆ ಮತ್ತೊಂದಷ್ಟು ಕಾಸು, ರೋಗರ್ ದ್ರಾವಣಕ್ಕೆ, ಹ್ಯೂಮಿಕ್ ಆಸಿಡ್ದಿಗೆ, ನುಸಿ ರೋಗಕ್ಕೆ, ಕೊಳೆ ರೋಗಕ್ಕೆ, ಕಳೆ ಕೀಳೋದಿಕ್ಕೆ, ಗುದ್ದಲಿ ಹೊಡೆಯೋದಿಕ್ಕೆ- ಎಲ್ಲಾ ದುಡ್ಡು ಕೇಳುವ ತಂತ್ರಗಳೇ. ಹೊರಗಡೆಯಿಂದ ನಾವು ಏನೇನನ್ನು ತರಬಾರದು. ಬೇಕಾದರೆ ಮೊದಲ ಸಾರಿ ಎಲ್ಲಾದರೂ ಒಂದು ಹೊಸ ಗಿಡ, ಹೊಸ ಬೀಜ ತಂದು ಪ್ಲಾಂಟ್ ಮಾಡಬಹುದು. ಉಳಿದೆಲ್ಲಂತೆ ನಿಮ್ಮತೋಟವು ಯಾರ ಮೇಲೆಯೂ ಡಿಪೆಂಡ್ ಆಗಲಾರದಂತಹಾ ಸ್ವತಂತ್ರ ರಾಷ್ಟ್ರದ ತರಹ ಇರಬೇಕು. ನಿಮ್ಮ ತೋಟದಿಂದ ಏನಾದರೂ ವಸ್ತುಗಳ ರೂಪದಲ್ಲಿ, ಫಲವಸ್ತುಗಳ ರೂಪದಲ್ಲಿ ಹೊರಗೆ ಹೋಗಬಹುದು. ಆದರೆ ಒಳಗಡೆಗೆ ವೀಸಾ ನಿಷಿದ್ಧ ! ರೈತರು ಅವರೇ ತಮಗೆ ಬೇಕಾದ್ದನ್ನು ತಯಾರು ಮಾಡಿಕೊಳ್ಳುವುದನ್ನು ಕಲಿಯಬೇಕು.”

” ನಮ್ಮ ಕೃಷಿ ವಿಶ್ವವಿದ್ಯಾನಿಲಯಗಳು ಹೇಳಿದ್ದನ್ನು ಕೇಳಿದರೆ ನಗು ಬರುತ್ತದೆ. ಒಂದು ಎಕರೆಗೆ 50 ಕೆಜಿ ಸಾರಜನಕ 30 ಕೆಜಿ ಪೊಟ್ಯಾಶ್ ಮತ್ತು 30 ಕೆಜಿ ರಂಜಕ ಕೊಡಬೇಕು ಅಂತ ಹೇಳ್ತಾರೆ. ಅದನ್ನು ಭೂಮಿಗೆ ಹಾಕಿದರೆ ಅದು ಹೀರಿಕೊಳ್ಳುತ್ತದೆ. ನಾನದನ್ನು ಅಲ್ಲಗಳೆಯುವುದಿಲ್ಲ. ಆದರೆ, ಒಂದು ಮಿಂಚು ಸಿಡಿಲು ಭರಿತ ಮಳೆ ಬಂದರೆ ಸಾವಿರಾರು ಟನ್ ಸಾರಜನಕವು NH3 ರೂಪದಲ್ಲಿ ಭೂಮಿಗೆ ಬೀಳುತ್ತದೆ. ಆವಾಗಲೇ ಹೇಳಿದ್ನಲ್ಲ. ಒಂದು ಎಕರೆ ಭೂಮಿಯ ಮೇಲೆ ಆಕಾಶದಲ್ಲಿ 34,500 ಟನ್ ಸಾರಜನಕವಿದೆ N2 ವಿನ ರೂಪದಲ್ಲಿ. ಅಷ್ಟು ಸಾರಾಜನಕಕ್ಕೆ ಸಾವುಕಾರ ನೀವೇ. ಆ ಜಮೀನು ನಿಮ್ಮದಾಗಿದ್ದರೆ ಆ ನೈಟ್ರೋಜೆನ್ ನಿಮ್ಮ ಸ್ವತ್ತು. ಸಸ್ಯಗಳು N2 ವನ್ನು ಬಳಸಿಕೊಳ್ಳಲಾರವು. ಮಿ0ಚಿನ ಬಿಸಿ 2800 ಡಿಗ್ರಿ ಸೆಂಟಿಗ್ರೇಡುಗಳು. ಆ ಬಿಸಿಗೆ N2 ವು NH3 ರೂಪಾಂತರವಾಗುತ್ತದೆ. ಮತ್ತಷ್ಟು ರಾಸಾಯನಿಕ ಕ್ರಿಯೆಗಳು ನಡೆದು ಆಗ ಅದನ್ನು ಭೂಮಿಯಲ್ಲಿರುವ ಸಸ್ಯಗಳು ಹೀರಿಕೊಳ್ಳುತ್ತವೆ “.

” 50:30:30 ಅನುಪಾತದಲ್ಲಿ NPK ಹಾಕಿ ಅಂತ ಕೃಷಿ ವಿಶ್ವವಿದ್ಯಾಲಯಗಳು ಹೇಳಿಕೊಂಡು ಬಂದಿವೆ. ಎಷ್ಟು ಭೂಮಿಯಲ್ಲೇ ನೈಟ್ರೋಜೆನ್ ಮತ್ತಿತರ ವಸ್ತುಗಳು ದೊರೆಯುತ್ತವೆಂಬುದು ಗೊತ್ತಿಲ್ಲದುದರಿಂದ ಖಚಿತ ಪ್ರಮಾಣದ ಇಷ್ಟೇ ಸಾರಜನಕ ಗೊಬ್ಬರ ಹಾಕಿ ಅಂತ ಹೇಗೆ ಹೇಳುತ್ತಾರೆ ? ಒಟ್ಟಾರೆಯಾಗಿ ಭೂಮಿಯನ್ನು ಅದರ ಫಲವತ್ತತೆಯನ್ನು ಹಾಳು ಮಾಡುವುದೇ ಇದರ ಉದ್ದೇಶ. ಮತ್ತು ಬಡ ರೈತರು ದುಡಿದ ದುಡ್ಡು ಬಹುರಾಷ್ಟ್ರೀಯ ಕಂಪನಿಗಳ ಕೈಸೇರುವಂತೆ ನೋಡುವ ಪ್ರಯತ್ನ “.

” ನಮ್ಮ ಭೂಮಿಯಲ್ಲಿ ಇನ್ನು ಇಪ್ಪತ್ತು ವರ್ಷಕ್ಕೆ ಸಾಕಾಗುವಷ್ಟು ರಂಜಕ ಹೇರಳವಾಗಿದೆ. ಅವೆಲ್ಲಾ ನಮ್ಮ ಪ್ರಾಣಿಗಳು ತಮ್ಮ ಕಳೇಬರದ ಮೂಲಕ ಬಿಟ್ಟು ಹೋದದ್ದು. ಪ್ರಾಣಿಗಳ ಎಲುಬು, ಕೃಷಿ ತ್ರಾಜ್ಯ ಮುಂತಾದುವುಗಳಿಂದ ಬಳಕೆಯಾಗದೆ ಉಳಿದ ರಂಜಕವಿದೆ. ಆದರೆ ದುರದೃಷ್ಟವಶಾತ್ ಆ ರಂಜಕವನ್ನು ಕರಗಿಸಿಕೊಂಡು ಸಸ್ಯಗಳು ಅದನ್ನು ಹೀರಿಕೊಂಡು ಬೆಳೆಯುವಂತೆ ಮಾಡಲು ಅದಕ್ಕೊಂದು ಸೂಕ್ಷ್ಮಾಣುಜೀವಿ ಬೇಕಾಗುತ್ತದೆ. ಅದು ಫಾಸ್ಪರಸ್ ಸಾಲ್ವಿಬಿಲೈಝಿ೦ಗ್ ಮೈಕ್ರೋಬ್ಸ್ ಅಂತ.”

” ಆದರೆ ಅದನ್ನು ನಾವು ಕೊಂದುಬಿಟ್ಟಿದ್ದೇವೆ : ಎಲ್ಲಿಂದ ರಂಜಕವನ್ನು ಸಸ್ಯಗಳು ಹೀರಿಕೊಳ್ಳುತ್ತವೆ ? ಈಗ ಅದಕ್ಕೊಂದು ಬಯೋ ಫರ್ಟಿಲೈಜರ್ ಕೊಡುತ್ತಿದ್ದಾರೆ. ಈ ಕಡೆಯಿಂದ PSM ಅಂತ ಕೊಡೋದು, ಆ ಕಡೆಯಿಂದ DAP ಅಂತ ಹಾಕ್ಸೋದು. ಇದರಿಂದ ಏನು ಭೂಮಿಗೆ ಏನೇನೂ ಉಪಯೋಗವಿಲ್ಲ. ಸರ್ಕಾರದ ಖಜಾನೆ ಲೂಟಿ ಆಗುತ್ತದೆ. ರೈತರಿಗೆ ಅನಗತ್ಯ ದುಡ್ಡು ಮತ್ತು ಶ್ರಮ ವ್ಯಯ. ರಸಗೊಬ್ಬರ ಕಂಪನಿಗಳಿಗೆ ಭರ್ಜರಿ ಆದಾಯ. ಹಾಗೇ ಸುಮ್ಮನೆ ಬಿಟ್ಟಿದ್ದರೂ ಆಗಿರೋದು. ಶೇಮ್ ಶೇಮ್ ವಿಶ್ವವಿದ್ಯಾನಿಲಯ !” ದುಷ್ಟ ವ್ಯವಸ್ಥೆಯೆಡೆಗೆ ವ್ಯಗ್ರರಾದರು ರೆಡ್ಡಿಯವರು.

ಮುಂದುವರಿಯುವುದು…

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.