ಜಿಗರ್ ಟಗರ್ ಸಿದ್ದರಾಮಯ್ಯ ಈಗ ‘ಹೌದ್ ಹುಲಿಯಾ’
ಮೊನ್ನೆಯಷ್ಟೇ ಸಿದ್ದರಾಮಯ್ಯ ತಮ್ಮ ಎಂದಿನ ಟಗರು ಸ್ಟೈಲ್ನಲ್ಲಿ ಮತ್ತು ಅದಕ್ಕೊಪ್ಪುವ ವಾಯ್ಸಿನಲ್ಲಿ ಕಾಗೆವಾಡದ ಉಪಚುನಾವಣೆಯ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದರು. ಮಾತು ಮುಂದುವರಿಸುತ್ತಾ, ‘ ದೇಶಕ್ಕೆ ಇಂದಿರಾ ಗಾಂಧೀ ಏನು ಮಾಡಿದರು? , ಇಡೀ ದೇಶಕ್ಕಾಗಿ ಪ್ರಾಣ ಕೊಡಲಿಲ್ಲವೇ” ಅಂತ ಕೇಳಿದರು. ಅಲ್ಲೇ ಮುಂದಿನ ಸಾಲಿನಲ್ಲಿ ಕುಳಿತಿದ್ದ, ಜೋಳದ ರೊಟ್ಟಿ ಆಗ ತಾನೆ ತಟ್ಟಿ ತಿಂದು ಬಂದವನೊಬ್ಬಥೇಟು ಜವಾರಿ ಸ್ಟೈಲ್ ನಲ್ಲಿ ಸರಕ್ಕನೆ ” ಹೌದು ಹುಲಿಯಾ “ ಅಂತ ಅಂದುಬಿಟ್ಟಿದ್ದಾನೆ. ಇಡೀ ಸಭೆ ಗೊಳ್ಳೆಂದು ದೊಡ್ಡದಾಗಿ ಬಾಯಗಲಿಸಿ ನಕ್ಕಿದೆ.
ಸಿದ್ದರಾಮಯ್ಯನವರಿಗೆ ಎಂದಿನಂತೆ ಕೋಪ ಬಂದಿದೆ. ” ಹೇ, ಯಾರಲ್ಲಿ, ಕಲಿಸ್ರಿ ಆಚೆ, ಕುಡ್ಕೊಂಡು ಬೆಲ್ ಬೆಲ್ಗೆನೆ ಬಂದಿದಾನಲ್ಲ ” ಅಂತ ರೇಗಿಕೊಂಡಿದ್ದಾರೆ. ಈಗ ಹೌದು ಹುಲಿಯಾ ಅಂದ ವ್ಯಕ್ತಿ ಕರ್ನಾಟಕದಲ್ಲಿ ಸಕತ್ ವರ್ಲ್ಡ್ ಫೇಮಸ್ ಆಗಿದ್ದಾನೆ. ವಾಟ್ಸ್ ಅಪ್, ಫೇಸ್ ಬುಕ್, ಟಿಕ್ ಟಾಕ್ ಮುಂತಾದುವುಗಳಲ್ಲಿ ಹಳದಿ ರುಮಾಲಿನ ಹುಲಿಯನದ್ದೇ ಅಬ್ಬರ.’
ಹುಲಿಯಾ ಯಾರು ?
ಹುಲಿಯಾ ಅನ್ನುವುದೊಂದು 1996 ರಲ್ಲಿ ದೇವರಾಜ್ ನಟಿಸಿದ ಟ್ರಾಜೆಡಿ ಸಿನಿಮಾದ ದುರಂತ ಹೀರೋ. ಸಾಕಷ್ಟು ಯಶ ಕಂಡ ಅಷ್ಟೇ ಅಲ್ಲ, ಜಮೀನುದಾರಿಕೆ ರಾಜಕೀಯ ಮುಂತಾದುವುಗಳನ್ನು ಹಸಿ ಹಸಿ ಕಟ್ಟಿ ಕೊಟ್ಟು ಮೈಮೇಲೆ ಮುಳ್ಳಿಬ್ಬಿಸುವಂತಹ ಚಿತ್ರ.
ಅದೆಲ್ಲ ಸರಿ. ಆದರೆ ಯಾಕೆ ಸಿದ್ದು ಇಂತದ್ದಕ್ಕೆಲ್ಲ ಕೋಪಿಸ್ಕೊತಾರೆ ಅಂತಾನೆ ಅರ್ಥ ಆಗುತ್ತಿಲ್ಲ. ತಮಾಷೆಯ ಸನ್ನಿವೇಶದಲ್ಲಿ ಒರಟುತನ ಯಾಕೆ ಬೇಕು? ಎಲ್ಲರ ಜತೆ ತಾನೂ ಸ್ವಲ್ಪ ನಕ್ಕಿದ್ದರೆ, ಅವರಿಗೆ ಆಗಬಹುದಾದ ಲಾಸ್ ಏನು? ಸಿದ್ದುವಿನದ್ದು ಇದೇನೂ ಮೊದಲನೆಯದ್ದಲ್ಲ. ಹಿಂದೆ ಎಷ್ಟೋ ಸಂದರ್ಭಗಳಲ್ಲಿ, ಅವರು ಸಾರ್ವಜನಿಕರನ್ನು ಮತ್ತು ತನ್ನ ಅತ್ಯಾಪ್ತರನ್ನೂ ಅವಮಾನಿಸುವುದಿದೆ.
ಇದ್ಕೇನಾ ಜನ ಸಿದ್ದೂನ ಟಗರು ಅಲಿಯಾಸ್ ಹುಲಿಯಾ ಅನ್ನೋದು ?
ಸುದರ್ಶನ್ ಬಿ.ಪ್ರವೀಣ್, ಬೆಳಾಲು