Notice: Trying to access array offset on value of type bool in /home/hosakannadanews/public_html/wp-content/themes/hosakannada/includes/libs/bs-theme-core/theme-helpers/template-content.php on line 1164

Notice: Trying to access array offset on value of type bool in /home/hosakannadanews/public_html/wp-content/themes/hosakannada/includes/libs/bs-theme-core/theme-helpers/template-content.php on line 1165

Notice: Trying to access array offset on value of type bool in /home/hosakannadanews/public_html/wp-content/themes/hosakannada/includes/libs/bs-theme-core/theme-helpers/template-content.php on line 1166

Notice: Trying to access array offset on value of type bool in /home/hosakannadanews/public_html/wp-content/themes/hosakannada/includes/libs/bs-theme-core/theme-helpers/template-content.php on line 1177

ಜಪಾನಿನ ಕೃಷಿ ಸಂತ, ಸಹಜ ಕೃಷಿಯ ಮಸನೊಬು ಫುಕುವೋಕಾ

ಜಪಾನಿನ ರೈತ, ತತ್ವಜ್ಞಾನಿ ಮತ್ತು ಕೃಷಿ ಸಂತ ಮಸನೊಬು ಫುಕುವೋಕಾ ಪ್ರಚುರಪಡಿಸಿದ ಕೃಷಿಯನ್ನು ನ್ಯಾಚುರಲ್ ಕೃಷಿ, ಸಹಜ ಕೃಷಿ, ಅರಣ್ಯಮಾದರಿ ಕೃಷಿ, ಮತ್ತು ತೀರಾ ಇತ್ತೀಚಿಗೆ ಅದನ್ನು ಶೂನ್ಯಭಂಡವಾಳದ ಕೃಷಿ ಎಂದೂ ಕರೆಯುತ್ತಾರೆ. ಇದನ್ನು ಮಸನೊಬು ಫುಕುವಾಕಾ 1975 ರಲ್ಲಿ ಬರೆದ ಪುಸ್ತಕ ‘ ದಿ ಒನ್ ಸ್ಟ್ರಾ ಕ್ರಾಂತಿ’ ಯಲ್ಲಿ ವಿಶ್ವಕ್ಕೆ ಪರಿಚಯಿಸಲಾಯಿತು. ಇದನ್ನು “ಫುಕುವೋಕಾ ವಿಧಾನ” ಎಂದೂ ಕರೆಯಲಾಗುತ್ತದೆ.

ಸಹಜ ಕೃಷಿ ಪದ್ದತಿಯಲ್ಲಿ, ಭೂಮಿಯನ್ನು ಉಳದೆ, ಗೊಬ್ಬರ ಹಾಕದೆ, ಕ್ರಿಮಿನಾಶಕಗಳನ್ನು ಸಿಂಪಡಿಸದೆ, ಕಳೆ ಕೀಳದೆ, ಸಸ್ಯದ ಮರ ಗೆಲ್ಲುಗಳನ್ನು ಕಟಾವು ಮಾಡದೆ – ಒಟ್ಟು ಏನೇನೂ ಮಾಡದೆ, ಭೂಮಿಗೇನೇ ತನ್ನ ಬೆಳೆ ಬೆಳೆದುಕೊಳ್ಳುವ ಅವಕಾಶ ನೀಡುವ ಕೃಷಿ ಪದ್ಧತಿ. ಈ ಭೂಮಿ, ಮನುಷ್ಯ ಮತ್ತು ಸಕಲ ಜೀವರಾಶಿಗಳಿಗೆ, ಅನಾದಿಕಾಲದಿಂದಲೂ ಆಹಾರ ನೀಡುತ್ತಾ ಬಂದಿದೆ. ಇವತ್ತಿಗೂ ಕಾಡಿನಲ್ಲಿನ ಸಸ್ಯಾಹಾರಿ ಪ್ರಾಣಿಗಳು, ಪಕ್ಷಿಗಳು ಕೃಷಿ ಮಾಡ್ತಾವ? ಕಾಡಿಗೆ ಯಾರು ಗೊಬ್ಬರ ಹಾಕ್ತಾರೆ? ಇಲ್ಲವಲ್ಲ. ಈ ಪರಿಸರ ತಂತಾನೇ ಗೊಬ್ಬರ ಉತ್ಪತ್ತಿ ಮಾಡಿಕೊಳ್ಳುತ್ತದೆ. ಭೂಮಿಗೆ ತನ್ನಷ್ಟಕ್ಕೆ ಆಹಾರ ಬೆಳೆದುಕೊಳ್ಳಬಲ್ಲ ತಾಕತ್ತಿದೆ. ಹೇಗೆ ಸಸ್ಯ ತನ್ನ ಆಹಾರ ಉತ್ಪತ್ತಿ ಮಾಡಿಕೊಳ್ಳುತ್ತದೆ ? ಇದೇ ಮುಂತಾದ ವಿಚಾರಗಳೇ ಪುಕುವೋಕಾರ ‘ಒನ್ ಸ್ಟ್ರಾ ರೆವೊಲ್ಯೂಷನ್ ‘ ನ ಪುಸ್ತಕದ ಹೂರಣ.

ಫುಕುವೋಕಾರು ಕೃಷಿಯನ್ನು ಆಹಾರವನ್ನು ಉತ್ಪಾದಿಸುವ ಸಾಧನವಾಗಿ ಮತ್ತು ಜೀವನಕ್ಕೆ ಸೌಂದರ್ಯ ಮತ್ತು ಆಧ್ಯಾತ್ಮಿಕ ವಿಧಾನವಾಗಿ ನೋಡಿದರು. ನೈಸರ್ಗಿಕ ಕೃಷಿ ಎನ್ನುವುದು ಒಂದು ಮುಚ್ಚಿದ ವ್ಯವಸ್ಥೆಯಾಗಿದ್ದು ( ಕ್ಲೋಸ್ಡ್ ಸಿಸ್ಟಮ್ ), ಇದು ಕೃಷಿಯಲ್ಲಿ ಮಾನವನ ಅನವಶ್ಯಕ ಹಸ್ತಕ್ಷೇಪವನ್ನು ವಿರೋಧಿಸುತ್ತದೆ. ಮತ್ತು ಒಟ್ಟಾರೆಯಾಗಿ ಕೃಷಿಗೆ ಬೇಕಾಗುವ ಬೀಜದಿಂದ ಹಿಡಿದು ಮತ್ತು ಪ್ರತಿಯೊಂದು ವಸ್ತುವಿನ ಒಳ ಹರಿವನ್ನು ನಿಷೇಧಿಸುತ್ತದೆ.
ಆಧುನಿಕ ಕೃಷಿ ಸಂಪ್ರದಾಯಗಳನ್ನು ಫುಕುವೋಕಾ ಅವರ ಆಲೋಚನೆಗಳು ಆಮೂಲಾಗ್ರವಾಗಿ ಪ್ರಶ್ನಿಸಿದವು; ಪೋಷಕಾಂಶಗಳು ಮತ್ತು ರಾಸಾಯನಿಕಗಳ ಆಮದನ್ನು ಉತ್ತೇಜಿಸುವ ಬದಲು, ಸ್ಥಳೀಯ ಪರಿಸರದ ಲಾಭವನ್ನು ಪಡೆಯುವ ವಿಧಾನವನ್ನು ಅವರು ಸೂಚಿಸಿದರು. ನೈಸರ್ಗಿಕ ಕೃಷಿಯನ್ನು ಸಾವಯವ ಕೃಷಿಯ ಉಪವಿಭಾಗವೆಂದು ಪರಿಗಣಿಸಲಾಗಿದ್ದರೂ, ಇದು ಸಾಂಪ್ರದಾಯಿಕ ಸಾವಯವ ಕೃಷಿಯಿಂದ ಬಹಳ ಭಿನ್ನವಾಗಿದೆ. ಸಾವಯವ ಕೃಷಿ ಕೂಡ ಪ್ರಕೃತಿಯನ್ನು ಕೆಡಿಸಬಲ್ಲದೆಂದು ಫುಕುವೋಕಾರು ಪರಿಗಣಿಸುತ್ತಿದ್ದರು.

ಸಹಜ ಕೃಷಿಯನ್ನು ಭಾರತದಲ್ಲಿ ಅಳವಡಿಸಿಕೊಂಡ, ಪ್ರಚಾರಮಾಡಿದ, ಪ್ರಯೋಗಕ್ಕೆ ಒಡ್ಡಿಕೊಂಡ ಹಲವಾರು ಮಹಾನುಭಾವರು ನಮ್ಮ ಭಾರತದಲ್ಲಿದ್ದಾರೆ. ಅಂತವರಲ್ಲಿ ನಮ್ಮ ಕರ್ನಾಟಕದವರೇ ಆದ ದಿ. ಎಲ್. ನಾರಾಯಣ ರೆಡ್ಡಿಯವರೊಬ್ಬರು. ರೆಡ್ಡಿಯವರು, ಏಕಲವ್ಯನಂತೆ ಪುಕುವೋಕಾರನ್ನು ಪೂಜಿಸಿ ನೈಸರ್ಗಿಕ ಕೃಷಿ ಸಾಧನೆ ಪಡೆದುಕೊಂಡವರು. ಖುದ್ದು ಫುಕುವೋಕಾರು ಖುದ್ದಾಗಿ 90 ರ ದಶಕದಲ್ಲಿ ನಾರಾಯಣ ರೆಡ್ಡಿಯವರ ಫಾರ್ಮ್ ಗೆ ಭೇಟಿ ನೀಡುತ್ತಾರೆ. ಧನ್ಯವಾಯಿತು ಕನ್ನಡ ಕೃಷಿ ಭೂಮಿ.

ಎಲ್. ನಾರಾಯಣರೆಡ್ಡಿಯವರ ಮಾತು, ಬರಹ ಬದುಕು ಮುಂತಾದ ಹಲವು ವಿಚಾರಗಳು ನಿರಂತರವಾಗಿ ನಿಮ್ಮ ಹೊಸಕನ್ನಡ ದಲ್ಲಿ ಧಾರಾವಾಹಿಯಾಗಿ ಮೂಡಿ ಬರಲಿದೆ. ಆ ಮೂಲಕ ಪುಕುವೋಕಾರ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ರೆಡ್ಡಿಯವರು ಕೈಗೊಂಡ ಕನಸನ್ನು ನೆರವೇರಿಸುವಲ್ಲಿ ನಮ್ಮದೂ ಒಂದು ಪ್ರಯತ್ನ ಇರಲಿದೆ.

ಸುದರ್ಶನ್ ಬಿ.ಪ್ರವೀಣ್, ಬೆಳಾಲು

Leave A Reply