ಬೀಳದಿರಿ ಪಿಗ್ಗಿ : ಬಂದಿದ್ದಾನೆ ‘ಈಶ ಫೌಂಡೇಶನ್’ನ ಜಗ್ಗಿ, 10164 ಕೋಟಿ ಕೇಳಿಕೊಂಡು!
ಈಶ ಫೌಂಡೇಶನ್ ,ಜಗ್ಗಿ ವಾಸುದೇವ್ ಅಲಿಯಾಸ್ ಸಧ್ಗುರು ಜಗ್ಗಿ ವಾಸುದೇವ್ ‘ಕಾವೇರಿ ಕೂಗು’ ಎಂಬ ಅಭಿಯಾನದ ಮೂಲಕ 242 ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಿದೆ. ಇದರ ಉದ್ದೇಶ ಕಾವೇರಿ ನದಿ ರಕ್ಷಣೆ. ಕಾವೇರಿ ನದಿಯ ಜಲಾನಯನ ಪ್ರದೇಶಗಳಲ್ಲಿ ಗಿಡ ನೆಟ್ಟು ಮರ ಮಾಡಿ ಸಾಕುವ ಪ್ರೋಗ್ರಾಮ್ ಇದು.
ಗಿಡ ನೆಟ್ಟು ವನಮಹೋತ್ಸವ ಮಾಡುವ ಉದ್ದೇಶ ಒಳ್ಳೆಯದೇ! ಆದರೆ ಜಗ್ಗಿ ಹಾಕಿದ ಪ್ರಾಜೆಕ್ಟ್ ಆದರೂ ಎಂತದ್ದು?
ಒಂದು ಗಿಡ ನೆಡಲು ನಿಮ್ಮಿಂದ 42 ರೂಪಾಯಿ ಆತ ಈಶ ಫೌಂಡೇಶನ್ ನ ಮೂಲಕ ಕಲೆಕ್ಟ್ ಮಾಡುತ್ತಾನೆ. ಲೆಕ್ಕ ಹಾಕಿ. ನಿಮ್ಮಗಣಿತ ಚೆನ್ನಾಗಿದ್ದರೆ ಅದು 10164 ಕೋಟಿ ರೂಪಾಯಿಗಳಾಗುತ್ತವೆ!
ಈಗ ಇಷ್ಟು ದೊಡ್ಡ ಮೊತ್ತದ ಹಣವನ್ನು ಸಾರ್ವಜನಿಕರಿಂದ ವಸೂಲು ಮಾಡುವುದಕ್ಕೆ ವಿರೋಧ ಬಂದಿದೆ.
ವಕೀಲ ಎ.ವಿ. ಅಮರನಾಥ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯು ಕರ್ನಾಟಕದ ಮ್ಹಾನ್ ಕೋರ್ಟಿಗೆ ಸಲ್ಲಿಕೆಯಾಗಿದೆ. ಅರ್ಜಿಯ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಎ.ಎಸ್ .ಓಕಾ ಹಾಗೂ ನ್ಯಾಯ ಮೂರ್ತಿ ಎಸ್.ಆರ್ ಕೃಷ್ಣಕುಮಾರ್ ಅವರಿದ್ದ ನ್ಯಾಯ ಬಂದಿತ್ತು. ಮಂಗಳವಾರವೇ ವಿಚಾರಣೆ ನಡೆಯಬೇಕಿತ್ತು. ಇಂತಹ ಸಂದರ್ಭದಲ್ಲಿ ನ್ಯಾಯ ಮೂರ್ತಿ ಎಸ್.ಆರ್ ಕೃಷ್ಣಕುಮಾರ್ ರವರು, ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ . ಆದುದರಿಂದ ವಿಚಾರಣೆ ಮುಂದಕ್ಕೆ ಹೋಗಿದೆ; ಮತ್ತೊಂದು ನ್ಯಾಯಪೀಠಕ್ಕೆ ವರ್ಗಾವಣೆಯಾಗುವ ತನಕ.
ಆದರೆ, ಒಂದಂತೂ ಸತ್ಯ. ಈಗಾಗಲೇ,ಭಾರತ ಹಲವು, ವಿವಿಧ ಪ್ಲಾನ್, ಸ್ಕೀಮ್, ಪ್ರಾಜೆಕ್ಟ್ ಗಳನ್ನೂ, ಅವು ಜನರಿಗೆ ಇತ್ತ ಬತ್ತಿ ನೋಡಿದ್ದೇವೆ, ನೋಡುತ್ತಿದ್ದೇವೆ. ಮತ್ತೆ ಮತ್ತೆ ಪಿಗ್ಗಿ ಬೀಳಲು ಒಂದಷ್ಟು ಇದ್ದೇ ಇರುತ್ತಾರೆ. ಒಂದು ಗಿಡಕ್ಕೆ ಕೇವಲ ನಲವತ್ತು ರೂಪಾಯಿ ಅಲ್ಲವಾ, ಎಲ್ಲೋ ಟೀ-ತಿಂಡಿ ತಿಂದು ಖರ್ಚಾಗಿ ಹೋಗುತ್ತದೆ ಎಂದು ನೀವಂದುಕೊಳ್ಳಬಹುದು. 42 ರೂಪಾಯಿ ಅಂತ ನೆಗ್ಲೆಕ್ಟ್ ಮಾಡುವಂತಿಲ್ಲ. ಈಶ ವೆಬ್ ಸೈಟ್ ನ ಪ್ರಕಾರ ಕನಿಷ್ಠ 20 ಗಿಡಗಳನ್ನು ಸಾಕಲು ನೀವು ದುಡ್ಡು ಕೊಡಬೇಕು. ಅಂದರೆ 840 ರೂಪಾಯಿ, ಕನಿಷ್ಠ ಹೂಡಿಕೆ!
ನಮ್ಮ ಸರ್ಕಾರಗಳು ಕೂಡ ಏನು ಮಾಡುತ್ತಿವೆಯೋ ಅರ್ಥವಾಗುತ್ತಿಲ್ಲ. ಅವರೆಲ್ಲ ಜಗ್ಗಿಯ ಮಾತಿಗೆ ಮರುಳಾದಂತೆ ಕಾಣುತ್ತಿದೆ.
ಇಂತಹ ಮಲ್ಟಿ ಕ್ರೋರ್ ಪ್ರಾಜೆಕ್ಟ್ ಗೆ ಖಂಡಿತವಾಗಿಯೂ ಪ್ರಜ್ಞಾವಂತರು ಅಡ್ಡಿ ಬರುತ್ತಾರೆಂದು ತಿಳಿದುಕೊಳ್ಳಲಾರದಷ್ಟು ದಡ್ಡನಲ್ಲ ಜಗ್ಗಿ. ಅದಕ್ಕೆ ಘಟಾನುಘಟಿ ಸೆಲೆಬ್ರಿಟಿಗಳನ್ನ ಕಾವೇರಿ ಕೂಗು ಅಭಿಯಾನದ ಪ್ಯಾನೆಲ್ ನಲ್ಲಿ ತಂದು ಕೂರಿಸಿದ್ದಾನೆ.
ಕಾವೇರಿ ಕಾಲಿಂಗ್ ಯೋಜನೆಯ ಮೇಲ್ವಿಚಾರಣೆಗೆ ಈಶ ಔಟ್ ರೀಚ್ ಬೋರ್ಡ್ ಮಂಡಳಿಯು ನೇಚರ್-ಇಂಡಿಯಾದ ವರ್ಲ್ಡ್ ವೈಡ್ ಫಂಡ್ ಸಿಇಒ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀ ರವಿ ಸಿಂಗ್ ಅವರನ್ನು ಒಳಗೊಂಡಿದೆ. ಉಳಿದ ಬೋರ್ಡ್ ಮೆಂಬರುಗಳು :ನ್ಯಾಯಮೂರ್ತಿ ಅರಿಜಿತ್ ಪಸಾಯತ್, ನಿವೃತ್ತ ನ್ಯಾಯಾಧೀಶರು, ಭಾರತದ ಸುಪ್ರೀಂ ಕೋರ್ಟ್; ಬಯೋಕಾನ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀಮತಿ ಕಿರಣ್ ಮಜುಂದಾರ್-ಶಾ; ಶ್ರೀ ಶಶಿ ಶೇಖರ್, ಭಾರತ ಸರ್ಕಾರದ ಜಲಸಂಪನ್ಮೂಲ ಮಾಜಿ ಕಾರ್ಯದರ್ಶಿ; ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ.ಎ.ಎಸ್. ಕಿರಣ್ ಕುಮಾರ್; ಶ್ರೀ ಪ್ರವೀಶ್ ಶರ್ಮಾ, ಭಾರತ ಸರ್ಕಾರದ ಸಣ್ಣ ರೈತರ ಕೃಷಿ-ವ್ಯವಹಾರ ಒಕ್ಕೂಟದ ಮಾಜಿ ಕಾರ್ಯದರ್ಶಿ ಮತ್ತು ಎಂಡಿ; ಟಾಟಾ ಸ್ಟೀಲ್ ಮಾಜಿ ಅಧ್ಯಕ್ಷರಾದ ಶ್ರೀ ಬಿ ಮುತ್ತುರಾಮನ್, ಭಾರತೀಯ ಕೈಗಾರಿಕೆಗಳ ಒಕ್ಕೂಟದ ಮಹಾನಿರ್ದೇಶಕ ಶ್ರೀ ಚಂದ್ರಜಿತ್ ಬ್ಯಾನರ್ಜಿ ಮತ್ತು ಕರ್ನಾಟಕ ಸರ್ಕಾರದ ಮಾಜಿ ಕಾರ್ಯದರ್ಶಿ ನಿವೃತ್ತ ಐಎಎಸ್ ಶ್ರೀ ನರಸಿಂಹ ರಾಜು ಮುಂತಾದವರು ಪ್ಯಾನೆಲ್ಲಿನಲ್ಲಿದ್ದಾರೆ.
ಪ್ಯಾನೆಲ್ಲಿನಲ್ಲಿರುವ ಹಿರಿಯರು, ಒಳ್ಳೆಯ ಹೆಸರು ಗಳಿಸಿಕೊಂಡ ಬೋರ್ಡ್ ಮೆಂಬರುಗಳು ಎಚ್ಚರ ವಹಿಸುವುದು ಅತ್ಯಗತ್ಯ. ನಿಮ್ಮ ಹೆಸರು ಹಾಳಾಗದಂತೆ ಮತ್ತು ಜನರ ದುಡ್ಡು ಪೋಲಾಗದೆ ಜಗ್ಗಿಯ ಖಜಾನೆ ಸೇರದಂತೆ!
ಸುದರ್ಶನ್ ಬಿ.ಪ್ರವೀಣ್, ಬೆಳಾಲು