ರಾನು ಮಂಡಲ್ ಎಂಬ ಕಾಡ ಪುಷ್ಪ
ಕಾಡ ಪುಷ್ಪದ ಘಮ ಕಾಡು -ಕಣಿವೆ ದಾಟಿ ಈಗ ನಾಡು ತಲುಪಿದೆ. ಪ್ರಪಂಚ ಪೂರ್ತಿ ಹರಡುತ್ತಿದೆ.
ಈ ಆಗಸ್ಟ್ ತಿಂಗಳ ಮೊದಲವಾರದವರೆಗೆ ಅವಳಲ್ಲಿ ಇತ್ತಾದರೂ ಏನು? ಪಶ್ಚಿಮ ಬಂಗಾಳದ ರಾಣಾಘಾಟ್ ರೈಲ್ವೆ ನಿಲ್ದಾಣದಲ್ಲಿ ಬೀಳುವ ಚಿಲ್ಲರೆ ದುಡ್ಡು ಮತ್ತು ತುಂಡು ಬಿಸ್ಕೆಟ್ಟಿಗಾಗಿ ಹಾಡುತ್ತ ಕುಳಿತಿದ್ದಳು ಓವ್ರ ಹೆಂಗಸು. ರೈಲು ನಿಲ್ದಾಣಕ್ಕೆ ಎಷ್ಟೋ ಜನರು ಬರುತ್ತಾರೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಹಾದು ಹೋಗುವ ಜನನಿಭಿಡ ರೈಲು ನಿಲ್ದಾಣದಲ್ಲಿ ಹೀಗೆ ಭಿಕ್ಷಾವಸ್ತ್ರ ಹರಡಿಕೊಂಡು ತನ್ನದೇ ಲೋಕದಲ್ಲಿ, ಅರೆ ಹುಚ್ಚಿಯಂತೆ-ಪೂರ್ತಿ ಭಿಕ್ಷುಕಿಯಂತೆ ಹಾಡುತ್ತಿದ್ದ ರಾಣಾ ಮಂಡಲ್ ರಾತ್ರಿ ಬೆಳಗಾಗುವುದರೊಳಗೆ ಜನಪ್ರಿಯತೆಯ ಉತ್ತುಂಗಕ್ಕೇರುತ್ತಾಳೆ.
ಥ್ಯಾಂಕ್ಸ್ ಟು ಸೋಶಿಯಲ್ ಮೀಡಿಯಾ!
ಇಷ್ಟರಲ್ಲಾಗಲೇ ಆಕೆಗೆ 59 ವರ್ಷ ವಯಸ್ಸಾಗಿತ್ತು. ಇನ್ನೇನು ಅಕ್ಟೊಬರ್ ಗೆ ಆಕೆಗೆ 60 ತುಂಬಬೇಕು. ರಾಣುವಿಗೆ ಚಿಕ್ಕವಯಸ್ಸಿಗೆ ಬಬೂಲ್ ಮಂಡಲ್ ಎಂಬವನೊಂದಿಗೆ ಮದುವೆಯಾಗಿರುತ್ತದೆ. ಆವಾಗ ಆಕೆ ತನ್ನ ಗಂಡನ ಜತೆ ಬರೋಬ್ಬರಿ 2100 ಕಿಲೋಮೀಟರು ಗಳ ದೂರದ ಮುಂಬೈಗೆ ಹೊರಟುನಿಲ್ಲುತ್ತಾಳೆ. ಮುಂಬೈಯಲ್ಲಿ ತನ್ನ ಗಂಡನಿಗೆ ಆರ್ಥಿಕವಾಗಿ ಸಹಾಯವಾಗಲು ಕ್ಲಬ್ ಒಂದರಲ್ಲಿ ಕೆಲಸಕ್ಕೆ ಸೇರುತ್ತಾಳೆ ರಾನು. ಅಲ್ಲಿ ಆಕೆಗೆ ಹಾಡುವ ಕೆಲಸ. ಆಕೆಗೆ ಅಲ್ಲಿ ಬಾಬಿ ಮಂಡಲ್ ಎಂಬ ಮರು ನಾಮಕರಣವಾಗುತ್ತದೆ. ಆದರೆ ಅವಳು ಆ ರೀತಿ ಕ್ಲಬ್ಬಿನಲ್ಲಿ ದುಡಿಯುವುದು ಅವಳ ಕುಟುಂಬಕ್ಕೆ ಇಷ್ಟವಾಗುವುದಿಲ್ಲ. ಆವಾಗ ಆಕೆ ಕೆಲಸ ಬಿಟ್ಟು ಬಿಡುತ್ತಾಳೆ. ಅವಳ ಗಂಡ ತೀರಿಕೊಳ್ಳುವುದರೊಂದಿಗೆ ಆಕೆಯ ಪ್ರಾರಂಭವಾಗುತ್ತದೆ.ಅಷ್ಟರಲ್ಲೇ ಆಕೆಯ ಮಗಳು ದೊಡ್ಡವಳಾಗಿ ಅವಳ ಮದುವೆಯು ಕೂಡ ನಡೆದುಹೋಗಿರುತ್ತದೆ.ಆದ್ದರಿಂದ ರಾನು ವಾಪಾಸ್ ತನ್ನ ಹುಟ್ಟೂರಾದ ರಾನಮಂಡಲ್ ಗೆ ಬರುತ್ತಾಳೆ. ಕುಟುಂಬದಲ್ಲಿ ಬೇರೆ ಗಮನಿಸಿಕೊಳ್ಳುವವರು ಇಲ್ಲದ ಕಾರಣ ಮತ್ತು ಆಕೆಗೆ ಬೇರೇನೂ ಕೂಡ ಕೆಲಸ ಮಾಡಲು ಗೊತ್ತಿಲ್ಲದ ಕಾರಣ ಆಕೆಯು ಹೀಗೆ ರೈಲು ನಿಲ್ದಾಣದಲ್ಲಿ ಹಾಡು ಹಾಡುತ್ತ ಬೀಳುವ ಭಿಕ್ಷೆಯಲ್ಲಿ ಜೀವನ ಸಾಗಿಸುತ್ತಿರುತ್ತಾಳೆ. ಮಗಳಿಗೆ ತನ್ನಮ್ಮ ಈ ರೀತಿಯಾಗಿ ಭಿಕ್ಷಾರ್ಥಿಯಾಗಿ ರೈಲುನಿಲ್ದಾಣದಲ್ಲಿರುವುದು ಇಷ್ಟವಿರುವುದಿಲ್ಲ. ಹಾಗಾಗಿ ತಾಯಿ ಮಗಳ ಸಂಭಂದವು ಕೂಡ ಹಳಸಿ ಹೋಗುತ್ತದೆ.
ಹೀಗೆ ಸುಮಾರು 10 ವರ್ಷಗಳಷ್ಟು ಸುಧೀರ್ಘವಾಗಿ ಗಾಯನ-ಭಿಕ್ಷಾ ವೃತ್ತಿಯಲ್ಲಿ ತೊಡಗಿರುತ್ತಾಳೆ ರಾನು. ವಾಹನಗಳ ಹೊಗೆ,ಎಂದು ಗಿಜಿಗಿಡುವ ಜನದಟ್ಟಣೆಯ ಪ್ರದೇಶ,ಧೂಳು ಮಯ ಅನಾರೋಗ್ಯಕರ ವಾತಾವರಣ, ಅಪೌಷ್ಟಿಕತೆ -ಮುಂತಾದುವುಗಳಿಂದ ರಾನು ಮಂಡಲಿನ ದೇಹ ಕೃಶವಾಗಿ ನಿಸ್ತೇಜವಾಗಿಯೋ ಹೋಗಿರುತ್ತದೆ.
ಆದರೆ ಪ್ರತಿಭೆಗೆ ಎಲ್ಲಿಯ ವಯಸ್ಸು?ಅದಕ್ಕೆಲ್ಲಿಯ ನಿಸ್ತೇಜತೆ? ಹಳೆಯ 1970-1980 ರ ದಶಕದ ಸಿನಿಮಾ ಹಾಡುಗಳನ್ನು ತನ್ನದೇ ತಾದ್ಯಾತ್ಮತೆಯಿಂದ,ಯಾರನ್ನೋ ಒಪ್ಪಿಸಬೇಕೆಂಬ ಹಂಗಿಲ್ಲದೆ,ಮಾರ್ಕು ಪಡೆಯುವ ಆಶೆಯಿಲ್ಲದೆ, ಡೇ೦ಜರ್ ಝೋನಿಗೆ ಹೋಗಿಬಿಡುತ್ತೇನೆಂಬ ಭಯವಿಲ್ಲದೆ, ಹಾಡುವುದೊಂದನ್ನು ತನ್ನ ಸಹಜ ಕ್ರಿಯೆಯೆಯಷ್ಟೇ ಸಹಜವೆಂಬಂತೆ ಹಾಡುತ್ತ ಬಂದಳು. ಕಷ್ಟಕ್ಕೆ ಭಾವಬೆರೆಸಿ ಹಾಡಿದಳು.
ಆದಿನ ಕೂಡ ಎಂದಿನಂತೆಯೇ ಇತ್ತು. ಅದೇ ಮಾಲಿನ್ಯಭರಿತ ಪರಿಸರ. ಆಕೆ ಅದೇ ತನ್ನ ಇಂದಿನ ತಾದ್ಯಾತ್ಮತೆಯಿಂದ ಲತಾ ಮಂಗೇಶ್ಕರ್ 1979 ರಲ್ಲಿ “ಶೋರ್” ಸಿನಿಮಾಗೆ ಹಾಡಿದ ‘ಏಕ್ ಪ್ಯಾರ್ ಕಾ ನಗ್ಮಾ ಹೈ, ಮೌಜೋನ್ ಕಿ ರವಾನೀ ಹೈ’ ಹಾಡನ್ನು ಕಣ್ಣು ಮುಚ್ಚಿಕೊಂಡು, ಕಿವಿ ಬಂದ್ ಮಾಡಿಕೊಂಡು, ಈ ಲೋಕದಲ್ಲಿ ತಾನಿಲ್ಲವೇನೋ ಎಂಬಂತೆ ಹಾಡುತ್ತಿದ್ದಳು. ಆ ಹೊತ್ತಿನಲ್ಲಿ ಕಲ್ಕತ್ತದಲ್ಲಿ ವಾಸವಾಗಿರುವ ಅತಿಂದ್ರ ಚಕ್ರವರ್ತಿ ರೈಲು ನಿಲ್ದಾಣಕ್ಕೆ ಬರುತ್ತಾನೆ. ಆಕೆಯ ಉನ್ಮತ್ತ ದುಃಖಭರಿತ ಹಾಡಿಗೆ ಆತ ಮಾರುಹೋಗುತ್ತಾನೆ. ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆದ ಆತ ಅವಳ ಹಾಡಿನಿಂದ ಪ್ರೇರಿತನಾಗಿ ತನ್ನ ಫೇಸ್ ಬುಕ್ಕಲ್ಲಿ ಅವಳ ಹಾಡನ್ನು ಚಿತ್ರೀಕರಿಸಿಕೊಂಡು ಹಾಕುತ್ತಾನೆ. ಅಷ್ಟೇ!
ಮುಂದಿನದೆಲ್ಲಾ ಸೊಷಿಯಲ್ಸ್ ಗಳ ಕೆಲಸ!
ನೋಡನೋಡುತ್ತಿದ್ದನಂತೆ ಜ್ವರದಂತೆ, ಥೆರ್ಮೋಮೀಟರ್ ನ ಪಾದರಸದಂತೆ ಏರುತ್ತವೆ ಲೈಕುಗಳು, ಷೇರುಗಳು!
ಸೋನಿ ಟಿವಿ ತನ್ನ ಸೂಪರ್ ಸ್ಟಾರ್ ರಿಯಾಲಿಟಿ ಶೋ ಗೆ ಈಕೆಯನ್ನು ಅಹ್ವಾನಿಸುತ್ತದೆ. ಸೆಲೆಬ್ರಿಟಿ ಸಂಗೀತ ನಿರ್ದೇಶಕ ಹಿಮೇಶ್ ಇವಳ ಇಂಪಾದ ಕಂಠವನ್ನು ಗುರುತಿಸುತ್ತಾರೆ ಮತ್ತು ತಮ್ಮ “ಹ್ಯಾಪಿ,ಹಾರ್ಡಿ & ಹೀರ್” ಸಿನಿಮಾದ ಹಾಡಿಗೆ ಆಕೆ ದನಿಯಾಗುತ್ತಾಳೆ. ಅಷ್ಟರಲ್ಲಿ ಒಬ್ಬೊಬ್ಬರಾಗಿ ನಿರ್ದೇಶಕರುಗಳು ಆಕೆಯ ಜತೆ ಒಪ್ಪಂದ ಮಾಡಿಕೊಳ್ಳುತ್ತವೆ. ಹಿಮೇಶ್ ರು ಆಕೆಯಾ ಸ್ವರದಲ್ಲೊಂದು ಬದಲಿ ಲತಾ ಮಂಗೇಶ್ಕರ್ ನ ಗುರುತಿಸುತ್ತಾರೆ ಮತ್ತು ಆಕೆಯಲ್ಲೊಂದು ಲೌಕಿಕ ಶಕ್ತಿಯಿದೆಯೆಂದು ಹೇಳುತ್ತಾರೆ. ಅದೃಷ್ಟದ ಬಾಗಿಲು ಆಕೆಯ ಪಾಡಿಗೆ ಆಗಾಗಲೇ ತೆರೆದುಕೊಂಡಾಗಿತ್ತು.
ಇತ್ತ ಅಮ್ಮನ ಸಕ್ಸಸ್ ನೋಡಿದ ಮಗಳಿಗೆ ತನ್ನಮ್ಮನ ಮೇಲೆ ಸಡನ್ ಆಗಿ ಪ್ರೀತಿ ಉಕ್ಕಿ ಹರಿದು ಅಮ್ಮನನ್ನು ಕೂಡಿಕೊಳ್ಳುತ್ತಾಳೆ. ಅದು ಅಮ್ಮನ ಮೇಲಿನ ಪ್ರೀತಿಗೊ, ಇಷ್ಟು ದಿನ ತನ್ನ ಸ್ವಂತ ಗೋಜಲುಗಳ ಮದ್ಯೆ ತನ್ನಮ್ಮನ್ನ ಗಮನಿಸಿಕೊಳ್ಳಲಾಗಿಲ್ಲವಲ್ಲ ಎಂಬ ನೋವೀಗಾ ಅಥವಾ, ಈ ದಿನ ತನ್ನಮ್ಮ ಓರ್ವ ಸೆಲೆಬ್ರಿಟಿ, ಚಿನ್ನದ ಮೊಟ್ಟೆಯ ಕೋಳಿ ಎಂದಾ ಗೊತ್ತಿಲ್ಲ. ಏನೇ ಆಗಲಿ ತಾಯಿ ಮಗಳ ಮುಲಾಖಾತ್ ಒಳ್ಳೆಯ ಬೆಳೆವಣಿಗೆಯೇ!
ಇವತ್ತು ಮಗಳು ಸ್ವಾತಿಯ ಬಗ್ಗೆ ಸೋಶಿಯಲ್ ಚರ್ಚೆಗಳಾಗುತ್ತಿವೆ. ಮಗಳು ತನ್ನಮ್ಮನನ್ನು ನೆಗ್ಲೆಕ್ಟ್ ಮಾಡಿದ್ದಾಳೆ, ಈಗ ತನ್ನಮ್ಮನಿಗೆ ಅನುಕೂಲ ಬಂದಾಗ ಅಮ್ಮನನ್ನು ಸೇರಲು ಬಂದಳೆಂದುಕೊಂಡಿದ್ದರು. ಇದು ಭಾಗಶಃ ಸತ್ಯವು ಇರಬಹುದು. ಆದರೆ ಮಗಳಾದರೂ ಅಲ್ಲಿ ನೆಮ್ಮದಿಯಾಗಿದ್ದಾಳಾ? ಅದೂ ಇಲ್ಲ. ಅವಳ ಗಂಡನೂ ಆಕೆಯನ್ನು ಬಿಟ್ಟು ನಡೆದಿದ್ದ. ಆಕೆಗೆ ಡೈವೋರ್ಸಾಗಿತ್ತು. ಇರೋ ಒಬ್ಬ ಮಗನನ್ನು ಮತ್ತು ತನ್ನನ್ನು ತಾನು ಸಾಕಿಕೊಳ್ಳಬೇಕು, ಮಗನನ್ನು ಓದಿಸಬೇಕು. ಅದಕ್ಕಾಗಿಯೇ ಆಕೆ ಕಿರಾಣಿ ಅಂಗಡಿಯೊಂದನ್ನು ನಡೆಸುತ್ತಿದ್ದಳು.
ನಾವು ಪಾಸಿಟಿವ್ ಆಗಿ ಯೋಚಿಸೋಣ. ರಾನು ಮಗಳು, ತನ್ನ ಕಷ್ಟಕಾರ್ಪಣ್ಯಗಳ ಕಾರಣದಿಂದಾಗಿ ತನ್ನಮ್ಮನನ್ನು ಸರಿಯಾಗಿ ಗಮನಿಸಿಕೊಳ್ಳಲಾಗಿಲ್ಲವೆಂದು ನಂಬೋಣ.
ಇತ್ತ ನಟ ಸಲ್ಮಾನ್ ಖಾನ್, ಆತನ ಮುಂದಿನ ಹಾಡಿಗೆ ರಾನುವಿಗೆ 55ಲಕ್ಷ ರುಪಾಯಿಯ ಫ್ಲಾಟ್ ಒಂದನ್ನು ನೀಡಿದ್ದಾರೆಂಬ ಸುದ್ದಿ ಇದೆ.
ರಾಣುವಿನ ಬದುಕೇನೋ ಬದಲಾಗಿ ಹೋಯಿತು. ಇನ್ನು ಒಂದು ನೆಮ್ಮದಿ, ಒಂದು ಭದ್ರತೆ, ಒಂದು ಸಾರ್ಥಕ್ಯ ಆಕೆಯಲ್ಲಿ ಮೂಡಿ ನಿಲ್ಲಲಿದೆ. ಆದರೆ ನಮ್ಮ ಸುತ್ತ ಮುತ್ತ ಅದೆಷ್ಟೋ ಪ್ರತಿಭೆಗಳು ರಾನುಮಂಡಲ್ ನಷ್ಟೇ ನಿಕೃಷ್ಟವಾಗಿ ಬದುಕುತ್ತಿರಬಹುದು. ಅವಳಷ್ಟೇ ಪ್ರತಿಭೆ ಅವರಲ್ಲಿ ಕೂಡ ಇರಬಹುದು. ಪ್ರತಿಭೆಎನ್ನುವುದೇ ಬರೆಯ ಹಾಡು, ಕುಣಿತ ಮಾತ್ರ ಆಗಿರಲಾರದು. ಒರ್ವನಲ್ಲಿ ಅದ್ಭುತ ಕ್ರೀಡಾ ಕ್ಷಮತೆಯಿದ್ದರೆ,ಮತ್ತೊಬ್ಬಾಕೆಯಲ್ಲಿ ಚಿತ್ರಕಲೆ,ಇನ್ನೋರ್ವನಲ್ಲಿ ಯಾರೂ ಊಹಿಸದ ಮೆಂಟಲ್ ಅಬಿಲಿಟಿ ಇರಬಹುದು. ಯಾರಿಗೆ ಗೊತ್ತು-ಯಾವ ಹುತ್ತದಲ್ಲಿ ಗುಪ್ತ ನಿಧಿ ಅಡಗಿದೆಯೆಂದು? ಸಾಟಿ ವ್ಯಕ್ತಿಗಳನ್ನುಎತ್ತಿಹಿಡಿಯಲು ಆತ/ಆಕೆಯಲ್ಲಿರುವ ಪ್ರತಿಭೆಗೇ ಕಾದು ಕೂರಬೇಕಿಲ್ಲ: ಮನುಷ್ಯತ್ವಕ್ಕಿಂತಲೂ ಪ್ರತಿಭೆಯೆನೂ ದೊಡ್ಡದಲ್ಲವಲ್ಲ?!
ಸುದರ್ಶನ್ ಬಿ. ಪ್ರವೀಣ್, ಬೆಳಾಲು