

ಬಂಟ್ವಾಳ:ಇಲ್ಲಿನ ಪರಂಗಿಪೇಟೆ ಬಳಿಯಲ್ಲಿ ತಡರಾತ್ರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿ ತಲವಾರು ಝಳಪಿಸಿದ ಘಟನೆ ಬೆಳಕಿಗೆ ಬಂದು, ಮುಂದುವರಿದ ತನಿಖೆಯಲ್ಲಿ ಇಂದು ಆರೋಪಿಯ ಮನೆಯಲ್ಲಿ ಶೋಧ ನಡೆಸಿದ ಪೊಲೀಸರು ತಲವಾರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಘಟನೆಯು ಅಕ್ಟೋಬರ್ 14ರ ತಡರಾತ್ರಿ ನಡೆದಿದ್ದು, ಘಟನೆಯ ಬೆನ್ನಲ್ಲೇ ಶಾಸಕರು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು,ಮಾಧ್ಯಮಗಳಲ್ಲಿ ವರದಿಯ ಸಹಿತ ಜಿಲ್ಲೆಯಾದ್ಯಂತ ಭಾರೀ ಸುದ್ದಿಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಜಿಲ್ಲಾ ಪೊಲೀಸರು ಸಂಜೆ ವೇಳೆಗಾಗಲೇ ಆರೋಪಿ ಸಹಿತ ಕಾರನ್ನು ವಶಕ್ಕೆ ಪಡೆದಿದ್ದು, ಬಳಿಕ ಯಾವುದೇ ತಲವಾರು ದಾಳಿ ನಡೆದಿಲ್ಲ ಎಂದು ಸ್ಪಷ್ಟನೆ ಪಡಿಸಿದ್ದರು.
ಇದಾಗಿ ಕೆಲ ಹೊತ್ತಿನಲ್ಲೇ ಶಾಸಕರಿಗೆ ತೀವ್ರ ಮುಖಬಂಘವಾಗಿದೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚುನಾವಣೆಯ ಹಿನ್ನೆಲೆಯಲ್ಲಿ ನಡೆದ ಪ್ರಚಾರ ಎಂಬಂತೆಲ್ಲಾ ಭಾರೀ ಚರ್ಚೆಗೂ ಕಾರಣವಾಗಿತ್ತು.
ಇಂದು ಜಿಲ್ಲಾ ಪೊಲೀಸ್ ಅಧಿಕ್ಷಕ ರಿಷಿಕೇಶ್ ಸೋನಾವಣೆ ಆದೇಶದ ಮೇರೆಗೆ , ಹಿರಿಯ ಅಧಿಕಾರಿಗಳ ನೇತೃತ್ವದ ಪೊಲೀಸರ ತಂಡ ಆರೋಪಿಯ ಮನೆಯಲ್ಲಿ ಶೋಧ ನಡೆಸಿದ್ದು, ಈ ವೇಳೆ ತಲವಾರು ಸಹಿತ ಎರಡು ಮೊಬೈಲ್ ಫೋನ್ ಗಳು ಪತ್ತೆಯಾಗಿದೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗವಾಗಲಿದೆ.
.













