

Chimpanzee :ಮಕ್ಕಳು ತಪ್ಪು ಮಾಡುವುದು ಸಹಜ. ತಪ್ಪು ಮಾಡಿದಾಗ ತಿದ್ದಿ, ಬುಧ್ಧಿವಾದ ಹೇಳುವುದು ಹೆತ್ತವರು ಅಥವಾ ದೊಡ್ಡವರ ಕರ್ತವ್ಯ. ಇದು ಮನುಷ್ಯನ ಹುಟ್ಟುಗುಣ. ಆದರೆ ಇಂತಹ ಗುಣ ಪ್ರಾಣಿಗಳಲ್ಲೂ ಇರುತ್ತದೆಯಾ ಎಂದು ನೀವೇನಾದರೂ ಯೋಚಿಸ್ತಿದ್ದೀರಾ? ಯಾಕೆಂದ್ರೆ ಇಲ್ಲೊಂದು ಚಿಂಪಾಂಜಿ ತಪ್ಪು ಮಾಡುವ ತನ್ನ ಮರಿಗೆ ಪೆಟ್ಟಿನ ಮೂಲಕ ಬುದ್ಧಿವಾದ ಹೇಳೋ ವಿಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ಧು ಮಾಡುತ್ತಿದೆ.
ಸಾಮಾನ್ಯವಾಗಿ ಪ್ರಾಣಿಗಳಿಗೆ ಬುದ್ಧಿ ಇಲ್ಲ ಎಂದೇ ಬಹುತೇಕ ಮಾನವರು ಭಾವಿಸುತ್ತಾರೆ. ಆದರೆ ಕೆಲವೊಂದು ಸನ್ನಿವೇಶಗಳು ಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತರು ಎಂಬುದನ್ನು ತೋರ್ಪಡಿಸುತ್ತವೆ. ಅದೇ ರೀತಿ ಇಲ್ಲೊಂದು ಕಡೆ ವೈರಲ್ ಆದ ಮೃಗಾಲಯವೊಂದರ ವಿಡಿಯೋ ಇದನ್ನು ಸಾಭೀತುಪಡಿಸುತ್ತದೆ.
ಅಂದಹಾಗೆ ಭಾರತೀಯ ಅರಣ್ಯ ಸೇವೆಯ (Indian Forest Officer) ಅಧಿಕಾರಿ ಸುಶಾಂತ್ ನಂದಾ (sushanth nanda) ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ 13 ಸೆಕೆಂಡ್‌ಗಳ ಈ ವೀಡಿಯೋದಲ್ಲಿ ಅನೇಕ ಚಿಂಪಾಜಿಗಳು (Chimpanzee) ದೊಡ್ಡದಾದ ಬಂಡೆಯ ಮೇಲೆ ಕುಳಿತುಕೊಂಡಿದ್ದು, ವಿಡಿಯೋದ ಹಿನ್ನೆಲೆಯಲ್ಲಿ ಪ್ರವಾಸಿಗರ ಸ್ವರ ಕೇಳಿ ಬರುತ್ತಿದೆ. ನೋಡುಗರ ಬೊಬ್ಬೆ ಕೇಳಿ ಮರಿ ಚಿಂಪಾಂಜಿಗೆ ಏನನಿಸಿತೋ ಏನೋ ಬಂಡೆಯ (Rock) ಮೇಲಿದ್ದ ಸಣ್ಣ ಪುಟ್ಟ ಕಲ್ಲುಗಳನ್ನು ಹೆಕ್ಕಿ ಪ್ರವಾಸಿಗರತ್ತ ಎಸೆದಿದೆ. ನಂತರ ಮತ್ತಷ್ಟು ಕಲ್ಲುಗಳನ್ನು ಎಸೆಯಲು ನೆಲದತ್ತ ಬಗ್ಗಿದೆ. ಈ ವೇಳೆ ಪಕ್ಕದಲ್ಲೇ ಇದ್ದ ತಾಯಿ ಅಲ್ಲೇ ಇದ್ದ ಕೋಲೊಂದನ್ನು ತೆಗೆದುಕೊಂಡು ಚಿಂಪಾಂಜಿ ಮರಿಗೆ ಸರಿಯಾಗಿ ಬಾರಿಸಿದೆ. ಇದು ನೋಡುಗರಿಗೆ ಅಚ್ಚರಿ ಮೂಡಿಸಿದೆ.
ವಿಡಿಯೋ ಪೋಸ್ಟ್ ಮಾಡಿದ ಸುಶಾಂತ್ ಅವರು ‘ಮಕ್ಕಳು ಪ್ರವಾಸಿಗರ ಮೇಲೆ ಕಲ್ಲೆಸೆಯುತ್ತಿವೆ. ಅವುಗಳು ಕೂಡ ನಮ್ಮಂತೆಯೇ, ಇವು ನಿಜವಾಗಿಯೂ ಮಕ್ಕಳಿಗೆ ಪೋಷಕರು ಕಲಿಸಬೇಕಾದ ನಿಜವಾದ ನಡತೆ’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.
ಈ ವಿಡಿಯೋ ಪ್ರಾಣಿಗಳು ಕೂಡ ಹೀಗಿರಲು ಸಾಧ್ಯವೇ ಎಂದು ಯೋಚಿಸುವಂತೆ ಮಾಡುವುದಲ್ಲದೇ, ಮನುಷ್ಯರಿಗೆ ಬುದ್ಧಿ ಹೇಳುವಂತಿದೆ. ತಪ್ಪು ಮಾಡುವಾಗ ಶಿಕ್ಷಿಸಿ ಬುದ್ಧಿ ಹೇಳ ಬೇಕಾಗಿರುವುದು ಪೋಷಕರ ಕರ್ತವ್ಯ. ಅದರ ಬದಲು ಸಣ್ಣವರೆಂದು ತಪ್ಪು ಮಾಡಿದಾಗಲೆಲ್ಲಾ ಸಮರ್ಥಿಸಿಕೊಳ್ಳುತ್ತಾ ಬಂದರೆ ನಂತರ ಮಕ್ಕಳು ದೊಡ್ಡವರಾದಾಗ ಪಶ್ಚಾತ್ತಾಪ ಪಡುವಂತಹ ಸ್ಥಿತಿ ನಿರ್ಮಾಣವಾಗುವುದು. ಪ್ರಾಣಿಗಳು ತಮ್ಮ ಮರಿಗಳಿಗೆ ಬುದ್ಧಿ ಕಲಿಸುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಆಗಾಗ ವೈರಲ್ ಆಗುತ್ತಿರುತ್ತವೆ.













