Home Karnataka State Politics Updates ಮಡಿಕೇರಿಯಲ್ಲಿ ಸಿದ್ದರಾಮಯ್ಯನವರನ್ನು ಆಟಕಾಯಿಸಿಕೊಂಡ ‘ ನಾಟಿ ಕೋಳಿ ‘ – ಮೀನು, ಮೊಟ್ಟೆ, ಕೋಳಿ ಸೇರಿಕೊಂಡು...

ಮಡಿಕೇರಿಯಲ್ಲಿ ಸಿದ್ದರಾಮಯ್ಯನವರನ್ನು ಆಟಕಾಯಿಸಿಕೊಂಡ ‘ ನಾಟಿ ಕೋಳಿ ‘ – ಮೀನು, ಮೊಟ್ಟೆ, ಕೋಳಿ ಸೇರಿಕೊಂಡು ಸಿದ್ದು ಮೇಲೆ ಕಾಳಗ !

Hindu neighbor gifts plot of land

Hindu neighbour gifts land to Muslim journalist

ಮಡಿಕೇರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಬಿದ್ದ ಪ್ರಕರಣದ ನಡುವೆಯೇ ಈಗ ಮಡಿಕೇರಿಯಲ್ಲಿ ಅವರನ್ನು ನಾಟಿಕೋಳಿ ಆಟಕಾಯಿಸಿಕೊಂಡ ಘಟನೆ ನಡೆದಿದೆ. ಬಹುಶಃ ಸಿದ್ದರಾಮಯ್ಯನವರಿಗೆ ಮೀನು ಕೋಳಿ ,ಮೊಟ್ಟೆ ಹೇಗೆ ಇಷ್ಟವೋ, ಹಾಗೆಯೇ ಆ ಇಷ್ಟದ ಅವೇ ಉತ್ಪನ್ನಗಳು ಅವರಿಗೆ ಒಂದಲ್ಲ ಒಂದು ಸಂಕಷ್ಟವನ್ನು ತಂದಿಡುತ್ತಿವೆ. ಮೊನ್ನೆ ಬೀಸಿದ ಮೊಟ್ಟೆ ನೆಲಕ್ಕೆ ಬಿಟ್ಟು. ಈಗ ನಾಟಿ ಕೋಳಿ ಎದ್ದು ಕೂತಿದೆ !!!

ಮೊನ್ನೆ ಕೊಡಗಿನಲ್ಲಿ ನಾಟಿಕೋಳಿ ಸಾರು ತಿಂದು ಸಿದ್ದರಾಮಯ್ಯನವರು ದೇವಾಲಯಕ್ಕೆ ಭೇಟಿ ನೀಡಿರುವುದಾಗಿ ಹೇಳಲಾಗುತ್ತಿದೆ. ಮಡಿಕೇರಿಯ ಅತಿಥಿಗೃಹದಲ್ಲಿ ಕಳೆದ 18ನೇ ತಾರೀಖು ಮಧ್ಯಾಹ್ನ ಗಡದ್ದು ಊಟ ಮಾಡಿದ್ದರು ಸಿದ್ದರಾಮಯ್ಯನವರು. ಅಲ್ಲಿನ ಅತಿಥಿ ಗೃಹದಲ್ಲಿ ಸಿದ್ದರಾಮಯ್ಯಗೆ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಅವರಿಂದ ಊಟದ ವ್ಯವಸ್ಥೆ ಮಾಡಿದ್ದರು. ನಂತರ ಸಿದ್ದು ಅಲ್ಲಿಂದ ದೇವಾಲಯಕ್ಕೆ ಭೇಟಿ ನೀಡಿದ್ದರು.

ಸಿದ್ದರಾಮಯ್ಯನವರಿಗೆ ಬಳು ಪ್ರೀತಿ ಎನ್ನುವ ಕಾರಣಕ್ಕೆ ನಾಟಿ ಕೋಳಿ ಸಾರು, ರಾಗಿ ಮುದ್ದೆ, ಮತ್ತು.ಬಿದಿರಿನ ಚಿಗುರು ಕಣಿಲೆ, ಅನ್ನ ತರಕಾರಿ ಸಾಂಬಾರಿನ ವ್ಯವಸ್ಥೆ ಮಾಡಲಾಗಿತ್ತು. ಸಿದ್ದರಾಮಯ್ಯನವರು ತಮ್ಮ ನೆಚ್ಚಿನ ನಾಟಿ ಕೋಳಿ ತುಂಡು ಚೀಪಿ, ಸಾರನ್ನು ಸರ್ರನೆ ಹೀರಿ ತಿಂದಿದ್ದರು. ಊಟದ ಬಳಿಕ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರು ಎನ್ನಲಾಗುತ್ತಿದೆ.

ಇದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಊಟ ಮಾಡಿದ ಫೋಟೋ, ದೇವಸ್ಥಾನಕ್ಕೆ ಹೋದ ವಿಡಿಯೋ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದೂ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಈ ಬಗ್ಗೆ ಭಾರಿ ಆಕ್ರೋಶ ಹೊರಹಾಕುತ್ತಿದ್ದರೆ, ಕಾಂಗ್ರೆಸ್ ಬೆಂಬಲಿಗರು ಮಾತ್ರ ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಮಾಂಸಾಹಾರ ಸೇವನೆ ಮಾಡಿ ದೇವಾಲಯಕ್ಕೆ ಪ್ರವೇಶ ಮಾಡಬಾರದು ಎನ್ನುವ ಕಾನೂನು ಎಲ್ಲಿದೆ ಎನ್ನುವುದು ಅವರ ಪ್ರಶ್ನೆ.

2017ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಸಿದ್ದರಾಮಯ್ಯನವರು ಮಾಂಸಾಹಾರ ಸೇವನೆ ಮಾಡಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಇದರ ಬಗ್ಗೆ ಹಲವರು ಟೀಕೆ ಮಾಡಿದ್ದರು. ಆಗ ಸಿದ್ದರಾಮಯ್ಯನವರು ಹೌದು ನಾನು ಮೀನು ಮಾತ್ರವಲ್ಲ, ಚಿಕನ್ ಕೂಡ ಸೇವನೆ ಮಾಡಿದ್ದೇನೆ, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದರು. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಕರೆದಿದ್ದರಿಂದ ಅಲ್ಲಿಗೆ ಹೋಗಿದ್ದೆ. ಹೋಗುವಾಗ ಮೀನು, ಚಿಕನ್ ತಿಂದಿದ್ದೆ ಎಂದಿದ್ದರು. ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ನಾನು ಗರ್ಭಗುಡಿಗೆ ಪ್ರವೇಶಿಸಿರಲಿಲ್ಲ ಎಂದಿದ್ದರು.

ಈಗ ಮತ್ತೆ ನಾಟಿ ಕೋಳಿ ಸಿದ್ದರಾಮಯ್ಯನವರಿಗೆ ಅಡ್ಡ ಬಂದಿದೆ. ಈಗ ಇದೊಂದು ವಿವಾದ ಸೃಷ್ಟಿಸುತ್ತಲೇ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯನಾನು ಸಿದ್ದರಾಮಯ್ಯನವರಿಗಾಗಿ ನಾಟಿಕೋಳಿನ ಸಾರು ಮಾಡಿಸಿದ್ದು ನಿಜ. ಅವರಿಗೆ ನಾಟಿ ಕೋಳಿ ಸಾರು ತುಂಬಾ ಪ್ರೀತಿ ಎನ್ನುವ ಕಾರಣಕ್ಕೆ ಮಾಡಿಸಿದ್ದೆ. ಆದರೆ ಅವರು ಅದನ್ನು ತಿಂದಿಲ್ಲ, ಕೇವಲ ತರಕಾರಿ ಸಾಂಬಾರು ಸೇವಿಸಿ ಹೋಗಿದ್ದರು ಎಂದು ಯಾರೂ ನಂಬದ ಸುಳ್ಳು – ಸತ್ಯ ಮಿಕ್ಸ್ ಮಾಡಿ ಹೇಳಿದ್ದರು.

ಆದರೆ ಈ ಬಗ್ಗೆ ಸಿದ್ದರಾಮಯ್ಯನವರು ಹೇಳುತ್ತಿರುವುದೇ ಬೇರೆ. ಮಾಧ್ಯಮ ಪ್ರತಿನಿಧಿಗಳು ಈ ಪ್ರಶ್ನೆ ಕೇಳುತ್ತಲೇ ಗರಂ ಆದ ಸಿದ್ದರಾಮಯ್ಯ, “ಏನೀಗ? ದೇವರು ಇಂಥದ್ದೇ ತಿನ್ನಬೇಕು ಅಂತ ಏನಾದ್ರೂ ಹೇಳಿದ್ದಾನಾ..? ಹ… ಹೇಳಪ್ಪ ?” ಎಂದು ಪ್ರಶ್ನಿಸಿದ್ದಾರೆ. ” ನೀವು ರಾತ್ರಿ ಮಾಂಸ ತಿಂದು, ಬೆಳಗ್ಗೆ ಹೋಗೋದಂತೆ, ಮಧ್ಯಾಹ್ನ ತಿಂದು ಸಂಜೆ ಹೋದ್ರೆ ತಪ್ಪೇನಯ್ಯಾ? “ಎಂದು ಪ್ರಶ್ನಿಸಿದ್ದಾರೆ. ” ದೇವರು ಇದನ್ನು ತಿನ್ನು ಇದನ್ನು ತಿನ್ನೇಡ ಅಂತ ಏನಾದ್ರೂ ಹೇಳಿದ್ದಾನಾ? ಆ ಬಿಜೆಪಿಯವರಿಗೆ ಸುಮ್ಮನೇ ಮೊಸರಿನಲ್ಲಿ ಕಲ್ಲು ಹುಡುಕೋ ಕೆಲಸ. ಎಲ್ಲಿ ಚೆನ್ನಾಗಿದ್ಯೋ ಅಲ್ಲಿ ಬೆಂಕಿ ಹಾಕೋದು, ವಿಷ ಹಾಕೋದು ಕೆಲ್ಸ. ಈಗ ಇದನ್ನೇ ದೊಡ್ಡ ವಿವಾದ ಮಾಡ್ತಿದ್ದಾರೆ” ಎಂದು ಸಿದ್ದರಾಮಯ್ಯನವರು ಕಿಡಿ ಕಾರಿದ್ದಾರೆ. ಒಟ್ಟಾರೆ ನೀನು ಕೋಳಿ ಮೊಟ್ಟೆಗಳೇ ಸಿದ್ದರಾಮಯ್ಯನವರಿಗೆ ಅಡ್ಡಗಾಲು ಹಾಕುತ್ತಿವೆ.