

ಬೆಂಗಳೂರು: ರಾಜ್ಯದ ಶಾಲಾ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸರಕಾರಿ ನೌಕರರಿಗೆ ಋತುಚಕ್ರ ರಜೆ ಸೌಲಭ್ಯ ಸೌಲಭ್ಯ ಕಲ್ಪಿಸಿ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಸುರಳ್ಳರ್ ವಿಕಾಸ್ ಕಿಶೋರ್ ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರ ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿ ಅವರ ಮನೋಸ್ಥೆರ್ಯ ಹೆಚ್ಚಿಸಲು ಮಾಸಿಕ ಋತುಚಕ್ರದ ಸಂದರ್ಭದಲ್ಲಿ ಪ್ರತಿ ಮಾಸಿಕ ಒಂದು ದಿನದ ರಜೆಯಂತೆ ವಾರ್ಷಿಕ 12ದಿನಗಳ ವೇತನ ಸಹಿತ ರಜೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಮಹಿಳಾ ನೌಕರರು ಆಯಾ ತಿಂಗಳ ಋತುಚಕ್ರ ರಜೆಯನ್ನು ಆಯಾ ತಿಂಗಳಲ್ಲಿಯೇ ಬಳಸಿಕೊಳ್ಳಬೇಕು. ಹಿಂದಿನ ತಿಂಗಳ ಋತುಚಕ್ರ ರಜೆಯನ್ನು ಮುಂದಿನ ತಿಂಗಳಿಗೆ ವಿಸ್ತರಿಸಲು ಅವಕಾಶವಿರುವುದಿಲ್ಲ. ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆ ಪಡೆಯಲು ಮಹಿಳಾ ನೌಕರರು ಯಾವುದೇ ವೈದ್ಯಕೀಯ ಪ್ರಮಾಣಪತ್ರ ಒದಗಿಸುವ ಅವಶ್ಯಕತೆ ಇರುವುದಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟ ಸೂಚನೆ ನೀಡಲಾಗಿದೆ.













