

ಕೋಟ (ಉಡುಪಿ): ಟೋಲ್ ವಿನಾಯಿತಿ ಬಗ್ಗೆ ಅಧಿಕೃತ ಪತ್ರವಿದ್ದರೂ ನಿವೃತ್ತ ಸೈನಿಕ ಶ್ಯಾಮ್‌ರಾಜ್ ಅವರನ್ನು ನಿಂದಿಸಿ ಅವಮಾನಿಸಿದ ಘಟನೆ ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ನಡೆದಿದ್ದು, ಈ ಸಂಬಂಧ ಕೋಟದ ಮಾಜಿ ಸೈನಿಕರ ಸಂಘ ಠಾಣೆಯಲ್ಲಿ ದೂರು ನೀಡಿದೆ.
ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಿವೃತ್ತ ಸೈನಿಕರು, ಸ್ಥಳೀಯ ಪ್ರಮುಖರು ಮಂಗಳವಾರ ಸಭೆ ನಡೆಸಿ ದೂರು ನೀಡಲು ನಿರ್ಧರಿಸಿದರು. ಆರ್ಮಿ 21 ಪ್ಯಾರಾ ಕಮಾಂಡೋ ಗ್ರೂಪ್‌ನ ನಿವೃತ್ತ ಯೋಧ ಶ್ಯಾಮರಾಜ್ ಅವರಿಗೆ ಅವಮಾನ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.
ಶ್ಯಾಮರಾಜ್ ಅವರ ಪತ್ನಿ ಮಿಲಿಟರಿ ನರ್ಸಿಂಗ್ ಸೇವೆಯಲ್ಲಿದ್ದು, ವರ್ಗಾವಣೆ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಕಾಸರಗೋಡಿನಿಂದ ಕಾರವಾರಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಟೋಲ್ ವಿನಾಯಿತಿ ಪತ್ರವಿದ್ದರೂ ಸಾಸ್ತಾನ ಟೋಲ್ ಸಿಬ್ಬಂದಿ ವಿನಾಯಿತಿ ನೀಡಲು ನಿರಾಕರಿಸಿ, ನಿಂದಿಸಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಾಸ್ತಾನ ಟೋಲ್ ಯೋಜನಾ ಪ್ರಾಧಿಕಾರದ ಅಬ್ದುಲ್ ಜಾವೀದ್, ಜಗನ್ ಮೋಹನ್ ರೆಡ್ಡಿ, ಟೋಲ್ ಮ್ಯಾನೇಜರ್ ಬಾಬು, ತಿಮ್ಮಯ, ಸಿಬ್ಬಂದಿ ಸುರೇಶ್, ಶಿವನಾಗ ಎಂಬವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಕೋಟ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.













