

ನಿನ್ನೆ ದೇಶದಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕೊರೋನಾ ನಿಯಮಗಳನ್ನು ಪಾಲಿಸುತ್ತಾ ಜನತೆ ಸಂಭ್ರಮದಿಂದ ಅಮೃತ ಮಹೋತ್ಸವವನ್ನು ಆಚರಿಸಿದರು. ಈ ನಡುವೆ ದಕ್ಷಿಣ ಕನ್ನಡದ ಒಂದು ಸ್ವಾತಂತ್ರ್ಯ ದಿನಾಚರಣೆಯ ಫೋಟೊ ಭಾರಿ ಸದ್ದು ಮಾಡುತ್ತಿದೆ.
ಹೌದು, ಕೂಲಿಕಾರ್ಮಿಕ ಮಹಿಳೆಯೊಬ್ಬರು ಚಪ್ಪಲಿ ತೆಗೆದು, ಗಾಳಿಯಲ್ಲಿ ಸ್ವಚ್ಚಂದವಾಗಿ ಹಾರಾಡುತ್ತಿರುವ ತ್ರಿವರ್ಣ ಧ್ವಜಕ್ಕೆ ಸಲ್ಯೂಟ್ ಹೊಡೆಯುತ್ತಿರುವ ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅನೇಕ ರಾಜಕೀಯ ನಾಯಕರು ಈ ಫೋಟೊವನ್ನು ಶೇರ್ ಮಾಡಿ ಇದು ಭಾರತದ ನಿಜವಾದ ಸಂಸ್ಕೃತಿ ಎಂದು ಕೊಂಡಾಡುತ್ತಿದ್ದಾರೆ.
ಅಂದಹಾಗೆ, ಈ ಮಹಿಳೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಏಣಗುಡ್ಡೆಯಲ್ಲಿ ವಾಸವಿರುವ ಕೂಲಿಕಾರ್ಮಿಕ ಮಹಿಳೆ ಎಂದು ತಿಳಿದುಬಂದಿದೆ. ಸುಳ್ಯದ ಗಾಂಧಿ ವಿಚಾರ ವೇದಿಕೆ ಏಣಗುಡ್ಡೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಗಣ್ಯರೆಲ್ಲರೂ ಕಾರ್ಯಕ್ರಮ ಮುಗಿಸಿ ತೆರಳಿದ್ದರು.
ಇನ್ನು ತನ್ನ ಮನೆ ಕೆಲಸ ಮುಗಿಸಿ ಅದೇ ದಾರಿಯಾಗಿ ಕೂಲಿಗೆ ಹೊರಟಿದ್ದ ಈ ಮಹಿಳೆ ಧ್ವಜವನ್ನು ಕಂಡು, ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಿದ್ದಾರೆ. ಚಪ್ಪಲಿ ಕಳಚಿಟ್ಟು, ಧ್ವಜಕ್ಕೆ ಸಲ್ಯೂಟ್ ಮಾಡಿದ್ದಾರೆ. ಸ್ಥಳದಲ್ಲಿದ್ದ ಯುವಕರು ಮಹಿಳೆ ಸಲ್ಯೂಟ್ ಮಾಡುವ ಫೋಟೊವನ್ನು ಸೆರೆ ಹಿಡಿದಿದ್ದಾರೆ. ಈಗ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.













