Home latest ಹೆಂಡತಿಯ ಕೈ ಕಾಲು ಕಟ್ಟಿ, 4ನೇ ಮಹಡಿಯಿಂದ ದೂಡಿದ ನೀಚ ಗಂಡ!

ಹೆಂಡತಿಯ ಕೈ ಕಾಲು ಕಟ್ಟಿ, 4ನೇ ಮಹಡಿಯಿಂದ ದೂಡಿದ ನೀಚ ಗಂಡ!

Hindu neighbor gifts plot of land

Hindu neighbour gifts land to Muslim journalist

ಗಂಡ ಮತ್ತು ಆತನ ಮನೆಯವರು ಸೇರಿ ಫ್ಯಾಷನ್ ಬ್ಲಾಗರ್ ಆದ ಹೆಂಡತಿಯನ್ನು ಚಿತ್ರಹಿಂಸೆ ನೀಡಿ ಕೈ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿಹಾಕಿ ನಾಲ್ಕನೇ ಮಹಡಿಯಿಂದ ಕೆಳಕ್ಕೆ ನೂಕಿದ ದಾರುಣ ಘಟನೆಯೊಂದು ಕಳೆದ ವಾರ ನಡೆದಿತ್ತು. ಈ ಘಟನೆ ಆಗ್ರಾದಲ್ಲಿ ನಡೆದಿತ್ತು.

ಫ್ಯಾಷನ್ ಬ್ಲಾಗರ್ ಆಗಿರುವ ರಿತಿಕಾ ಸಿಂಗ್ (30) ಗಂಡನ ಮನೆಯವರ ಮೂಲಕ ಕೊಲ್ಲಲ್ಪಟ್ಟ ಸಂತ್ರಸ್ಥೆ. ಈ ಪ್ರಕರಣದ ಮರಣೋತ್ತರ ಪರೀಕ್ಷೆ ವರದಿಯೊಂದು ಈಗ ಬಂದಿದೆ. ಇದರಲ್ಲಿ ಆಘಾತಕಾರಿ ಅಂಶಗಳು ಹೊರಬಂದಿವೆ. ಮರಣೋತ್ತರ ವರದಿಯ ಪ್ರಕಾರ ಆಕೆಯ ಮೈಮೇಲೆ ಹಲವು ಸುಟ್ಟ ಗಾಯಗಳು ಮತ್ತು ಪಕ್ಕೆಲುಬು ಮುರಿದಿತ್ತು. ರಿತಿಕಾ ಸಿಂಗ್ ಗಂಡ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ರಿತಿಕಾ ಸಿಂಗ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು ಜತೆಗೆ ಫ್ಯಾಷನ್ ಬ್ಲಾಗ್ ನಡೆಸುತ್ತಿದ್ದಳು. ಇದೇ ಆದಾಯದಿಂದ ಗಂಡ ಮತ್ತು ಆತನ ಮನೆಯವರನ್ನು ಸಾಕುತ್ತಿದ್ದಳು.

ಇತ್ತೀಚೆಗೆ ಗಂಡನ ಮನೆಯವರ ಕಾಟ ವಿಪರೀತವಾದಾಗ ರಿತಿಕಾ ಮನೆಯಿಂದ ಸ್ನೇಹಿತನೊಬ್ಬನ ಮನೆಗೆ ಶಿಫ್ಟ್ ಆಗಿದ್ದಾಳೆ. ರಿತಿಕಾ ಗಂಡನ ಮನೆ ಇರುವುದು ಗಾಜಿಯಾಬಾದಿನಲ್ಲಿ. ಆದರೆ ಆಕೆ ಕೆಲ ತಿಂಗಳುಗಳ ಹಿಂದೆ ಆಗ್ರಾಗೆ ಶಿಫ್ಟ್ ಆಗಿದ್ದಳು. ಗಂಡನ ಮನೆಯವರ ಕಾಟದಿಂದ ಮನಶಾಂತಿಗಾಗಿ ದೂರ ಬಂದರೂ ಗಂಡನ ಮನೆಯವರ ಕಾಟ ತಪ್ಪಿರಲಿಲ್ಲ. ಆಗಾಗ ಆಗ್ರಾದ ಮನೆಗೆ ಬಂದು ದುಡ್ಡಿಗಾಗಿ ಪೀಡಿಸುತ್ತಲೇ ಇದ್ದರು. ಕಳೆದ ವಾರ ರಿತಿಕಾ ಗಂಡ ಆಕಾಶ್ ಇಬ್ಬರು ಮಹಿಳೆಯರು ಮತ್ತು ಇಬ್ಬರು ಯುವಕರನ್ನು ಕರೆದುಕೊಂಡು ಆಗ್ರಾದ ಓಂ ಶ್ರೀ ಪ್ಲಾಟಿನಮ್ ಅಪಾರ್ಟ್‌ಮೆಂಟ್‌ಗೆ ಬಂದಿದ್ದ. ಬಂದವರು ದುಡ್ಡು ಕೇಳಿದ್ದಾರೆ ನಂತರ ರಿತಿಕಾ ಮೇಲೆ ಹಲ್ಲೆ ಮಾಡಿದ್ದಲ್ಲದೇ ರಿತಿಕಾ ಸ್ನೇಹಿತ ವಿಪುಲ್ ಮೇಲೂ ಹಲ್ಲೆ ಮಾಡಲಾಗಿದೆ. ನಂತರ ವಿಪುಲ್‌ನನ್ನು ಬಾತ್‌ರೂಮಲ್ಲಿ ಕೂಡಿಹಾಕಿ ರಿತಿಕಾ ಮೇಲೆ ಹಲ್ಲೆ ಮುಂದುವರೆಸಿದ್ದಾರೆ.

ರಿತಿಕಾ ಹಣ ಕೊಡುವುದಿಲ್ಲ ಎಂದಾಗ, ಇಬ್ಬರ ನಡುವೆ ವಾಗ್ವಾದ ಆರಂಭವಾಗಿದೆ. ಆಕಾಶ್ ಜೊತೆ ಬಂದಿದ್ದ ಯುವಕರು ಕೂಡಾ ಹಣಕ್ಕಾಗಿಯೇ ಬಂದಿದ್ದರು. ನಂತರ ಮಾತು ಬೆಳೆದು ಹಲ್ಲೆ ಮಾಡಲು ಆರಂಭಿಸಿದ್ದಾರೆ ಎಂದು ವಿಪುಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ತನಿಖಾ ತಂಡ ಆಕಾಶ್ ಮತ್ತು ಆತನ ಜತೆಗಿದ್ದ ಕಾಜಲ್ ಮತ್ತು ಕುಸುಮಾ ಎಂಬ ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ. ಆಕಾಶ್ ಮತ್ತು ರಿತಿಕಾ ಇಬ್ಬರ ಮೊಬೈಲ್ ಕೂಡ ಇನ್ನೂ ಪತ್ತೆಯಾಗಿಲ್ಲ. ಪೊಲೀಸರ ಸಂಶಯದ ಅನ್ವಯ ಮೊಬೈಲ್ ಫೋನನ್ನು ಜತೆಗಿದ್ದ ಯುವಕರ ಕೈಗೆ ಕೊಟ್ಟು ಆಕಾಶ್ ಕಳಿಸಿದ್ದಾನೆ. ಘಟನೆಯ ವಿಡಿಯೋ ಮಾಡಿರುವ ಸಾಧ್ಯತೆಯೂ ಇದೆ, ವಿಡಿಯೋ ಪೊಲೀಸರಿಗೆ ಸಿಗಬಾರದು ಎಂಬ ಕಾರಣಕ್ಕೆ ಮೊಬೈಲ್ ಸಾಗಿಸಲಾಗಿದೆ. ಪರಾರಿಯಾಗಿರುವ ಆರೋಪಿಗಳು ಪತ್ತೆಯಾದರೆ ಮೊಬೈಲ್ ಫೋನ್ ಕೂಡ ಸಿಗುವ ಸಾಧ್ಯತೆಯಿದೆ ಎಂದು ಪೊಲೀಸರು ನಂಬಿದ್ದಾರೆ.

ರಿತಿಕಾಳನ್ನು ಬಾತ್‌ರೂಮ್‌ನಲ್ಲಿ ಕೂಡಿಹಾಕಿದ ನಂತರ ವಿಪುಲ್ ಅಕ್ಕಪಕ್ಕದವರನ್ನು ಅಲರ್ಟ್ ಮಾಡಿದ್ದಾನೆ. ಆದರೆ ಏನೂ ಪ್ರಯೋಜನವಾಗಿಲ್ಲ. ಹಲ್ಲೆ ಮಾಡುತ್ತಿದ್ದ ಆಕಾಶ್ ಆಕೆಯ ಕೈಕಾಲು ಕಟ್ಟಿ ಬಾಲ್ಕನಿಯಿಂದ ಕೆಳಗೆ ಬಿಸಾಕಿದ್ದಾನೆ. ಬಿದ್ದ ರಭಸಕ್ಕೆ ರಿತಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಅಪಾರ್ಟ್‌ಮೆಂಟ್‌ನ ನಿವಾಸಿಗಳು ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಶವವಾಗಿ ಬಿದ್ದಿದ್ದ ರಿತಿಕಾ ಸ್ಥಿತಿಯನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಿತಿಕಾ ತಂದೆ ತಾಯಿ ಮತ್ತು ಸಹೋದರ ಪೊಲೀಸರಿಗೆ ದೂರು ನೀಡಿ, ಎಲ್ಲಾ ಘಟನೆ ವಿವರಿಸಿದ್ದಾರೆ. ಅವರ ಪ್ರಕಾರ, “ಆಕಾಶ್ ಒಬ್ಬ ನಿರುದ್ಯೋಗಿ. 2014ರಲ್ಲಿ ರಿತಿಕಾ ಮತ್ತು ಆಕಾಶ್ ಮದುವೆಯಾದರು. ಆತ ಎಂದಿಗೂ ಕೆಲಸಕ್ಕೆ ಹೋದವನೇ ಅಲ್ಲ. ಅವನ ಇಡೀ ಮನೆಯನ್ನು ರಿತಿಕಾ ದುಡಿದು ಸಾಕಿದ್ದಾಳೆ. ಹಣಕ್ಕಾಗಿ ಪತಿ ಆಕಾಶ್ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟಿದ್ದಾನೆ. ಈಗ ಜೀವವನ್ನೇ ಕಿತ್ತುಕೊಂಡು ಬಿಟ್ಟ” ಎಂದು ರಿತಿಕಾ ಸಹೋದರ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.