Home News Soujanya Protest: ಸಾಕ್ಷಿಗಳೇ ಅಲ್ಲದ ಡಾಕ್ಯುಮೆಂಟ್ಸ್ ತೋರಿಸಿ ಯಾಮಾರಿಸಿದ Power Tv । ಸತ್ಯ ಬಹಿರಂಗ...

Soujanya Protest: ಸಾಕ್ಷಿಗಳೇ ಅಲ್ಲದ ಡಾಕ್ಯುಮೆಂಟ್ಸ್ ತೋರಿಸಿ ಯಾಮಾರಿಸಿದ Power Tv । ಸತ್ಯ ಬಹಿರಂಗ !!!

Hindu neighbor gifts plot of land

Hindu neighbour gifts land to Muslim journalist

Soujanya Protest: ಸೌಜನ್ಯ ಪ್ರಕರಣದಲ್ಲಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಒಂದು ಕಣ್ಣು ಇಟ್ಟಿರುವ ನೀವೆಲ್ಲರೂ ಈಗ ‘ಸೆಟಲೈಟ್ ಟಿವಿ’ ಯಲ್ಲಿ ನಡೆಯುತ್ತಿರುವ ಹಲವಾರು ವಿದ್ಯಮಾನಗಳನ್ನು ನೋಡಿದ್ದೀರಿ ಅಂತ ಭಾವಿಸುತ್ತೇವೆ. ಅಲ್ಲಿ ಪವರ್ ಟಿವಿಯು ಒಟ್ಟು 5 ಪ್ರಮುಖ ಎಂದು ಹೇಳುವ ಸಾಕ್ಷಿಗಳನ್ನು ಮಂಡಿಸಿದೆ. ಟಿವಿ ಕೊಟ್ಟ ಈ ಸಾಕ್ಷಿಗಳ ಪ್ರಕಾರ ಪ್ರತಿಷ್ಠಿತ ಕುಟುಂಬದ ವ್ಯಕ್ತಿಯ ತಮ್ಮನ ಮಗ ಭಾರತದಲ್ಲಿ ಇರಲೇ ಇಲ್ಲ ಅನ್ನುತ್ತಿದೆ. ಈ ಸಾಕ್ಷಿಗಳು ಪ್ರಭಾವಿಯ ಕುಟುಂಬದ ಹುಡುಗ ಭಾರತದಲ್ಲಿ ಇದ್ದನೇ ಇರಲಿಲ್ಲವೇ, ಎನ್ನುವುದಕ್ಕೆ ಪೂರಕ ಸಾಕ್ಷಿಗಳು ಆಗುತ್ತಾ ಇಲ್ಲವೇ ಎನ್ನುವುದನ್ನು ನೋಡುವ ಮೊದಲು, ಪವರ್ ಟಿವಿ ಹೇಳುತ್ತಿರುವ ಆ 5 ಸಾಕ್ಷಿಗಳು (ದಾಖಲೆಗಳು) ಏನು ಅನ್ನೋದನ್ನ ಮೊದಲು ನೋಡೋಣ.

ಏನಾ ದಾಖಲೆಗಳು ?

ದಾಖಲೆ-1: ಪ್ರಭಾವಿಯ ಕುಟುಂಬದ ವ್ಯಕ್ತಿಯ ವೀಸಾ ಅಪ್ಲೈ ಮಾಡಬೇಕಾದರೆ ಬಳಸುವ 797 ಫಾರ್ಮ್ ತುಂಬಲು ಅದಕ್ಕೆ 200 ಡಾಲರ್ ಅನ್ನು ಕಟ್ಟಬೇಕಿರುತ್ತದೆ. ಅದಕ್ಕೆ ದುಡ್ಡು ಕಟ್ಟಿದ ರಿಸೀಪ್ಟ್ ಇಲ್ಲಿದೆ ನೋಡಿ ಎಂದು ಟಿವಿ ತೋರಿಸಿದೆ. ಜುಲೈ 30, 2012 ರಂದು ಡಾಲರ್ ನಲ್ಲಿ ದುಡ್ಡು ಕಟ್ಟಿದ ರಿಸಿಪ್ಟ್ ಅನ್ನು ಟಿವಿಯು ಪ್ರಸ್ತುತಪಡಿಸಿದೆ.
ದಾಖಲೆ- 2: ಪ್ರಭಾವಿ ವ್ಯಕ್ತಿಯ ಮಗ ಕಾಲೇಜು ಫೀಸ್ ಪೇ ಮಾಡಿದ ಬಗೆಗಿನ ಸಾಕ್ಷಿ. ಇದು ಪ್ರಭಾವಿ ಪುತ್ರನ ಅಪ್ಪನ ವಿಜಯ ಬ್ಯಾಂಕ್ ಸ್ಟೇಟ್ ಮೆಂಟ್ ಆಗಿದ್ದು, ಇಲ್ಲಿ 21.08.2012 ರಂದು Easygo ಟೂರ್ಸ್ ಅಂಡ್ ಟ್ರಾವೆಲ್ಸ್ ಗೆ ಹಣ ವರ್ಗಾವಣೆ ಮಾಡಿದ ಬಗ್ಗೆ ಸಾಕ್ಷಿ ಇದೆ. ಅಲ್ಲಿ ಅಂದು 4,14,400 ಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದು ಪ್ರಭಾವಿಯ ಕುಟುಂಬದ ಪುತ್ರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೇರಿಕಾಕ್ಕೆ ತೆರಳಲು ಬೇಕಾದ ಹಣದ ವ್ಯವಸ್ಥೆಯ ಪುರಾವೆ ಎನ್ನುತ್ತಿದೆ ಟಿವಿ.
ದಾಖಲೆ- 3: 10 ವರ್ಷಗಳ ಹಿಂದೆ ಪ್ರಭಾವಿಯು ಅಂದು ವೀಸಾದಲ್ಲಿ ಹೇಳಿದ ಡೇಟ್ 21.08.2012 ಗೂ, ಈ ಹಣ ಪಾವತಿ ಮಾಡಿದ ದಿನಾಂಕಕ್ಕೂ ಹೊಂದಾಣಿಕೆ ಆಗುತ್ತೆ ಅನ್ನೋದು ಟಿವಿಯ ವಾದ.
ದಾಖಲೆ- 4: ಅಮೇರಿಕಾದ ಬ್ರೂಕ್ಲಿನ್ ನಲ್ಲಿರುವ ನ್ಯೂಯಾರ್ಕ್ ವಿವಿಯು ” ಕಂಗ್ರಾಜುಲೇಷನ್ಸ್ ನೀವು ಸಕ್ಸೆಸ್ ಫುಲ್ಲಾಗಿ ಡಿಗ್ರಿ ಕಂಪ್ಲೀಟ್ ಮಾಡಿದ್ದೀರಿ ಎಂದು ಪ್ರಭಾವಿಯ ಪುತ್ರನಿಗೆ ಆಗಸ್ಟ್ 2014 ದಿನದಂದು ಈ ಮೇಲ್ ಕಳಿಸುತ್ತೆ. ಆದರೆ ಅದರಲ್ಲಿ ಸದರಿ ಪ್ರಭಾವಿ ಮಗನ ಹೆಸರಿಲ್ಲ. (ಇದು ಸಾಮಾನ್ಯವಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಕಳಿಸುವ ಕವರಿಂಗ್ ಲೆಟರ್ ಆದ ಕಾರಣ ಪ್ರತಿಯೊಬ್ಬರ ಹೆಸರು ಅಲ್ಲಿ ನಮೂದಾಗುವುದು ಸಾಧ್ಯವಿಲ್ಲ, ನಾವು ಒಪ್ಪಿಕೊಳ್ಳಲೇಬೇಕು.)
ದಾಖಲೆ- 5: ಅಮೇರಿಕಾದ ಬ್ರೂಕ್ಲಿನ್ ನಲ್ಲಿರುವ ನ್ಯೂಯಾರ್ಕ್ ವಿಶ್ವವಿದ್ಯಾಲಯ ನೀಡಿರುವ ಡಿಗ್ರಿ ಸರ್ಟಿಫಿಕೇಟ್. ಮೇ 2014 ನಂದು ಆ ಸರ್ಟಿಫಿಕೇಟ್ ಅನ್ನು ಪ್ರಭಾವಿ ಮಗನಿಗೆ ನೀಡಲಾಗಿದೆ. ಮತ್ತು ಆತ ‘ಮಾಸ್ಟರ್ ಆಫ್ ಸೈನ್ಸ್ ಇನ್ ಮ್ಯಾನೇಜ್ ಮೇಂಟ್ ‘ ಎಂಬ ವಿಷಯದಲ್ಲಿ ವಿಧ್ಯಾಭ್ಯಾಸ ಮಾಡಿದ್ದರು ಎನ್ನುವ ಮಾಹಿತಿ ಅದರಲ್ಲಿದೆ.

ಅನಗತ್ಯ ದಾಖಲೆಗಳನ್ನು ಸಾಕ್ಷಿ ಎನ್ನುವ ಟಿವಿ:
ಅತ್ಯಾಚಾರ ಮತ್ತು ಕೊಲೆ ನಡೆದ ದಿನ ಅಕ್ಟೋಬರ್ 9 2012. ಟಿವಿ ಪ್ರಸ್ತುತಪಡಿಸಿದ ಈ ಎಲ್ಲಾ ಸಾಕ್ಷಿಗಳು ಸೌಜನ್ಯಳ ಕೊಲೆ ನಡೆದ 3 ವಾರಗಳ ಅಂದರೆ 20 ದಿನಗಳ ಹಿಂದಿನ ಘಟನೆಗಳು. ಇಲ್ಲಿ ಕೆಲವು ದಾಖಲೆಗಳು ಪ್ರಭಾವಿಯ ಮಗ ಮತ್ತು ಆತನ ಕುಟುಂಬ ಮಾಡಿದ ಬ್ಯಾಂಕ್ ವ್ಯವಹಾರದ ಡೀಟೈಲ್ಸ್ . ಮತ್ತು ಕೆಲವು ದಾಖಲೆಗಳು ಮುಂದಿನ 2 ವರ್ಷಗಳ ವರ್ಷಗಳಲ್ಲಿ, ಅಲ್ಲಿ ವಿಶ್ವವಿದ್ಯಾಲಯ ಆತನಿಗೆ ನೀಡಿದ ಸರ್ಟಿಫಿಕೇಟ್ ನೀಡಿದ ವಿಷಯವಾಗಿರುತ್ತದೆ.
ಸೌಜನ್ಯಾಳ ಕಿಡ್ನಾಪ್ ಅತ್ಯಾಚಾರ ಮತ್ತು ಕೊಲೆ ಆದದ್ದು ಅಕ್ಟೋಬರ್ 9, 2012 ರಂದು. ಅದಕ್ಕಿಂತ 20 ದಿನಗಳ ಕೆಳಗೆ ಪ್ರಭಾವಿಯ ಅಪ್ಪನ ಅಕೌಂಟಿನಿಂದ ಟ್ರಾವೆಲ್ ಏಜೆನ್ಸಿಗೆ ದುಡ್ಡು ಹೋಯಿತು, ಆಮೇಲೆ ವಿಜಯ ಬ್ಯಾಂಕಿನಲ್ಲಿ ಕಾಲೇಜ್ ಫೀಸ್ ಕಟ್ಟಿದ್ರು, ಇದೆಲ್ಲ ದಾಖಲೆಗಳು ಆತ ಕೊಲೆ ನಡೆದ ಧರ್ಮಸ್ಥಳ ಗ್ರಾಮದಲ್ಲಿ ಇಲ್ಲ ಅನ್ನುವುದನ್ನು ಪ್ರೂವ್ ಮಾಡಲ್ಲ.
ಕೊಲೆ ನಡೆದ ದಿನ, ಅಂದರೆ ಅಕ್ಟೋಬರ್ 9 2012 ನೇ ತಾರೀಕಿನ ದಾಖಲೆಗಳು ಮಾತ್ರ ತನಿಖೆಯಲ್ಲಿ ಮುಖ್ಯ ಆಗುತ್ತೆ. ಅದು ಬಿಟ್ಟು 20 ದಿನಗಳ ಹಿಂದೆ ಬ್ಯಾಂಕಲ್ಲಿ ಹೋಗಿ ದುಡ್ಡು ಕಟ್ಟಿದ ದಾಖಲೆಗೆ ಯಾವುದೇ ಮಹತ್ವ ಇಲ್ಲ.

ಇನ್ನು ಅಮೆರಿಕಾದ ಬ್ರೂಕ್ಲಿನ್ ವಿಶ್ವವಿದ್ಯಾಲಯ ನೀಡಿದ ಸರ್ಟಿಫಿಕೇಟ್ ವಿಷಯಕ್ಕೆ ಬರೋಣ. ಸರ್ಟಿಫಿಕೇಟ್ ನೀಡಿದ್ದು ಮೇ 2014 ಕ್ಕೆ. ಆದರೆ ಚರ್ಚೆಯಲ್ಲಿರುವ ವಿಷಯ ಸೌಜನ್ಯ ಕೊಲೆಯಾದ ದಿನಾಂಕ ಅಂದರೆ, ಅಕ್ಟೋಬರ್ 9, 2012. ಈ ದಿನದ ಮಾಹಿತಿ ನೀಡುವುದು ಬಿಟ್ಟು ಎರಡು ವರ್ಷದ ನಂತರದ, ಅಂದ್ರೆ ಆತನಿಗೆ ನ್ಯೂಯಾರ್ಕ್ ಬ್ರೂಕ್ಲಿನ್ ವಿಶ್ವವಿದ್ಯಾಲಯವು ಪದವಿ ಪ್ರಮಾಣ ಪತ್ರ ನೀಡಿದ ಮೇ 2014 ರ ಅನಗತ್ಯ ಮಾಹಿತಿಯನ್ನು ಟಿವಿಯಲ್ಲಿ ನೀಡಲಾಗಿದೆ. ಇವೆಲ್ಲ ತನಿಖೆಗೆ ಅನಗತ್ಯ ದಾಖಲೆಗಳು ಅಥವಾ ಮಾಹಿತಿಗಳು. ಈ ದಾಖಲೆಗಳು ಕೊಲೆ ನಡೆದ ಸಂದರ್ಭ ಆತ ಧರ್ಮಸ್ಥಳ ಗ್ರಾಮದಲ್ಲಿ ಇರಲಿಲ್ಲ ಎಂದು ಪ್ರೂವ್ ಮಾಡಲ್ಲ.

ಅಂದರೆ, ಟಿವಿ ನಿನ್ನೆ ತೋರಿಸಿದ ಎಲ್ಲಾ ದಾಖಲೆಗಳು ಅತ್ಯಾಚಾರ ಕೊಲೆ ನಡೆಯುವ ತೀರಾ ಹಿಂದಿನ ದಿನಗಳ ದಾಖಲೆಗಳು ಮತ್ತು ಕೆಲವು ಕೊಲೆ ಘಟಿಸಿದ 2 ವರ್ಷದ ನಂತರದ ದಾಖಲೆಗಳು. ಹಾಗಾಗಿ ಟಿವಿಯಲ್ಲಿ ತೋರಿಸಿದ ಯಾವುದೇ ದಾಖಲೆಗಳು ಪ್ರಭಾವಿಯ ಮಗ ಧರ್ಮಸ್ಥಳ ಗ್ರಾಮದಲ್ಲಿ ಇಲ್ಲ ಎಂದು ತೋರಿಸುವುದಿಲ್ಲ. ಹೀಗಾಗಿ ಈ ದಾಖಲೆಗಳನ್ನು ಆತ ಧರ್ಮಸ್ಥಳದಲ್ಲಿ ಇಲ್ಲ ಅನ್ನಲಿಕ್ಕೆ ಮತ್ತು ಆತ ಅಮೆರಿಕದಲ್ಲಿ ಇದ್ದ ಅನ್ನುವುದಕ್ಕೂ ಪೂರಕ ದಾಖಲೆಗಳಾಗಿ ಪರಿಗಣಿಗೆ ತೆಗೆದುಕೊಳ್ಳಲು ಆಗುವುದಿಲ್ಲ.

ಜನರನ್ನು ದಾರಿ ತಪ್ಪಿಸುವ ಮಾರ್ಗ:
ಉದಾಹರಣೆ ನಾವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದೆವು ಅಂದುಕೊಳ್ಳಿ. ಅರ್ಜಿ ಹಾಕಿ, ನಮಗೆ ರಿಸಿಪ್ಟ್ ಸಿಕ್ಕ ತಕ್ಷಣ ನಾವು ಫಲಾನುಭವಿಗಳು ಅಲ್ಲ. ನಮಗೆ ಗೃಹಲಕ್ಷ್ಮೀ ದುಡ್ಡು ಬಂದಿರುವುದಿಲ್ಲ. ನಾವು ಹಾಕಿದ್ದು ಅರ್ಜಿ ಅಷ್ಟೇ. “ನೋಡಿ, ಹದಿನೈದು ದಿನಗಳ ಹಿಂದೆ ಅರ್ಜಿ ಹಾಕಿದ್ದೀನಿ- ಅಂತ ತೋರಿಸಿದ ಹಾಗಿದೆ, ನಿನ್ನೆಯ ಹಾಸ್ಯಾಸ್ಪದ ಅನ್ನಿಸುವ ಟಿವಿಯ ದಾಖಲೆಗಳು.

ಅಲ್ಲದೆ, ಪ್ರಭಾವಿ ಪುತ್ರನ ಕುಟುಂಬದವರಿಂದ ಬ್ಯಾಂಕಿನಲ್ಲಿ 4.14 ಲಕ್ಷ ರೂಪಾಯಿ ಹಣ EasyGo ಟ್ರಾವೆಲ್ ಸಂಸ್ಥೆಗೆ ಸಂದಾಯ ಆಗಿದ್ದು ನಿಜ ಅಂದುಕೊಳ್ಳೋಣ. ಅದು 21.08.2012 ರಂದು ಹಣ ಸಂದಾಯವಾಗಿದೆ. ಹಣ ಸಂದಾಯ ಆದ ಕೂಡಲೇ ಅದು ಯಾವ ಕಾರಣಕ್ಕೆ ಹಣ ಆಗಿದೆ ಎಂದು ನೋಡಬೇಕಾಗುತ್ತದೆ. ಈ ಬಗ್ಗೆ ಡಾಕ್ಯುಮೆಂಟ್ ನಲ್ಲಿ ಯಾವುದೇ ಮಾಹಿತಿ ಸಿಗುವುದಿಲ್ಲ. ಬೇರೆ ಯಾವುದೋ ಉದ್ದೇಶಕ್ಕೂ ಕೂಡ ಸಂದಾಯ ಆಗಿರಬಹುದು. ಅವರದು ದೊಡ್ಡ ಸಂಸ್ಥೆ. ದಿನನಿತ್ಯ ಒಂದಲ್ಲ ಒಂದು ವ್ಯವಹಾರ ನಡೆಯುತ್ತಲೇ ಇರುತ್ತದೆ. ಯಾವುದೋ ಬೇರೆ ಕಾರಣಗಳಿಗೆ ಹಣ ಸಂದಾಯ ಆಗಿರಬಹುದು.

ಹಣ ಕಟ್ಟಿದ ರಿಸೀಪ್ಟ್ ದಾಖಲೆ ಆಗಲ್ಲ:

ಇರಲಿ, ಹಣ ಪಾವತಿ ಆದುದು ಪ್ರಭಾವಿ ವ್ಯಕ್ತಿಯ ಮಗ ಅಮೆರಿಕದಲ್ಲಿ ವಿದ್ಯಾಭ್ಯಾಸಕ್ಕೆ ಹೋಗಲಿಕ್ಕೇ ಎಂದು ಅಂದುಕೊಳ್ಳೋಣ. ಈಗ ಇಲ್ಲಿ ಯಾರೂ ಆತ ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡಿಯೇ ಇಲ್ಲ ಅಂತ ಅಪನಂಬಿಕೆ ವ್ಯಕ್ತಪಡಿಸಿಲ್ಲ. ಅದನ್ನು ಯಾರೂ ಕೂಡಾ ಸುಳ್ಳು ಅಂತ ಹೇಳುತ್ತಿಲ್ಲ. ಆದರೆ ಕೊಲೆ ನಡೆದ ಸಂದರ್ಭದಲ್ಲಿ, ಅಂದರೆ ಮತ್ತಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ ಕೊಲೆ ನಡೆದ ದಿನ ಅಂದರೆ 9 ನೇ ಅಕ್ಟೋಬರ್ ಆತ ಎಲ್ಲಿದ್ದ? ಧರ್ಮಸ್ಥಳ ಗ್ರಾಮದಲ್ಲಿ ಇದ್ದನೇ ಅಥವಾ ಅಮೆರಿಕದಲ್ಲಿದ್ದನೆ ? ಅನ್ನುವುದು ಈಗ ಬಗೆ ಹರಿಯಬೇಕಾದ ಪ್ರಶ್ನೆ. ದುಡ್ಡು ಸಂದಾಯ ಆಯ್ತು ಅಂದ ತಕ್ಷಣ, ಆತ ಭಾರತದಲ್ಲಿ ಇರಲಿಲ್ಲ, ಅಮೆರಿಕಕ್ಕೆ ಹೋಗಿದ್ದ ಅಂತ ಅನ್ನಲು ಆಗುವುದಿಲ್ಲ. ಎಷ್ಟೋ ಸಲ ನಾವು ಅಡ್ವಾನ್ಸ್ ಆಗಿ ದುಡ್ಡು ಕಟ್ಟಿ ಅಗತ್ಯ ಕೆಲಸಗಳನ್ನು ಬುಕ್ ಮಾಡಿರುತ್ತೇವೆ. ಉದಾಹರಣೆಗೆ, ಮಕ್ಕಳಿಗೆ ಫಸ್ಟ್ ಪಿಯುಸಿ, ಇಂಜಿನಿಯರಿಂಗ್ ಮೆಡಿಕಲ್ ಮುಂತಾದ ಪ್ರಮುಖ ಜೀವನದ ಘಟ್ಟಗಳಲ್ಲಿ ಆರು ತಿಂಗಳಿಗಿಂತ ಮುಂಚೆಯೇ ಸೀಟು ಬುಕಿಂಗ್ ಮಾಡಿ ಇಟ್ಟುಕೊಳ್ಳುವುದುಂಟು. ಹಾಗಾಗಿ ಹಣ ಪಾವತಿ ಮಾಡಿದ ಕಾರಣದಿಂದ ಪ್ರಭಾವಿಯ ಮಗ ಭಾರತದಲ್ಲಿ ಇರಲಿಲ್ಲ ಎನ್ನಲು ಸಾಕ್ಷಾಧಾರ ಆಗಲ್ಲ. ಹಾಗಾಗಿ ಈ ದಾಖಲೆಗಳು ಕೇವಲ ಜನರನ್ನು ದಾರಿ ತಪ್ಪಿಸುವ ಸಾಕ್ಷಿಗಳು ಮಾತ್ರ ಎನ್ನುವುದು ಅತ್ಯಂತ ಸ್ಪಷ್ಟ.

ಪೊಲೀಸ್ ತನಿಖೆಗೆ ತಮ್ಮನ್ನು ಒಡ್ಡಿಕೊಳ್ಳುವ ಬದಲು ಖಾಸಗಿ ಟಿವಿ ತನಿಖೆಗೆ ಒಡ್ಡಿಕೊಳ್ಳುವುದೇಕೆ ?

ಟಿವಿ ಹೇಳುತ್ತೆ: ನಿಮಗೆ ಯಾರಿಗಾದರೂ ಡೌಟ್ ಇದ್ರೆ, ನೀವು ಬ್ಯಾಂಕ್ ಆಫ್ ಬರೋಡಕ್ಕೆ ಹೋಗಿ, ಅಲ್ಲಿಂದ ಬ್ಯಾಂಕ್ ಸ್ಟೇಟ್ಮೆಂಟ್ ಕಲೆಕ್ಟ್ ಮಾಡಿಕೊಳ್ಳಿ ಅಂತ. ಬಹುಶ: ಬ್ಯಾಂಕಿಂಗ್ ಅನುಭವ ರಾಕೇಶ್ ಶೆಟ್ಟಿಗೆ ಕಡಿಮೆ ಅನ್ಸುತ್ತೆ. ಯಾವುದೋ ಎಕ್ಸ್ ವೈ ಝೆಡ್ ವ್ಯಕ್ತಿ, ಟಿವಿಯ ಮಾತಿನಲ್ಲಿ ಹೇಳಬೇಕಾದರೆ – ಕಾಗಕ್ಕ ಗುಬ್ಬಕ್ಕ- ಬ್ಯಾಂಕಿಗೆ ಹೋಗಿ ಪ್ರಭಾವಿ ವ್ಯಕ್ತಿಯ ಅಥವಾ ಯಾರದೇ ವ್ಯಕ್ತಿಯ ಬ್ಯಾಂಕ್ ಸ್ಟೇಟ್ಮೆಂಟ್ ತಗೊಳ್ಳಕ್ಕೆ ಆಗಲ್ಲ. ಅದು ಬ್ಯಾಂಕ್ ನಿರ್ಮಿಸಿದ ರೂಲ್ಸ್ ! ಯಾರಾದ್ರೂ ಹೋಗಿ ಚೆಕ್ ಮಾಡಬಹುದು ಅನ್ನೋ ಟಿವಿಯವರ ಮಾತಿಗೆ ಯಾವುದೇ ಮಾನ್ಯತೆ ಕೊಡೋದಿಕ್ಕೆ ಆಗಲ್ಲ. ಅತ್ಯಂತ ಸ್ಪಷ್ಟವಾಗಿ ಹೇಳಬೇಕೆಂದರೆ ಬ್ಯಾಂಕಿಂಗ್ ಮತ್ತು ಇತರ ವೈಯಕ್ತಿಕ ದಾಖಲೆಗಳನ್ನು ಮೂರನೆಯ ವ್ಯಕ್ತಿ ಪಡೆದುಕೊಳ್ಳುವಂತೆಯೇ ಇಲ್ಲ. ಅದನ್ನು ಆಯಾ ವ್ಯಕ್ತಿ ಅಥವಾ ಕುಟುಂಬವೇ ನೀಡಬೇಕಾಗುತ್ತದೆ. ಆದರೆ ಸರ್ಕಾರದ ತನಿಖಾ ಸಂಸ್ಥೆಗಳಿಗೆ ಮಾತ್ರ ಯಾರದ್ದೇ ಡಾಕ್ಯುಮೆಂಟ್ ನ್ನು ಬ್ಯಾಂಕುಗಳಿಂದ ಅಥವಾ ಇತರ ಸರ್ಕಾರಿ ದಾಖಲೆಗಳಿಂದ ಪಡೆಯುವ ಅಧಿಕಾರ ಇರುತ್ತದೆ. ಈ ಎಲ್ಲಾ ದಾಖಲಾತಿಗಳನ್ನು ಟಿವಿಗೆ ನೀಡಿದವರು ಯಾರು ಎನ್ನುವ ಪ್ರಶ್ನೆ ಇಲ್ಲಿ ಉದ್ಭವಿಸದೆ ಇರೋದಿಲ್ಲ. ನಿಜ ಹೇಳಬೇಕೆಂದರೆ, ಪ್ರಭಾವಿಗಳಿಗೆ ಈಗ ದೊಡ್ಡ ಮಟ್ಟದಲ್ಲಿ ‘ಪುಕುಪುಕು ‘ ಭಯವಾಗಿದೆ. ಅದಕ್ಕಾಗಿ ದೊಡ್ಡ ಮಟ್ಟದಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ. ತಮ್ಮನ್ನು ತಾವೇ ಬೃಹತ್ ಮಟ್ಟದಲ್ಲಿ ಸಮರ್ಥನೆಗೆ ಇಳಿದಿದ್ದಾರೆ. ಇದೆಲ್ಲ ಯಾಕೆ ಬೇಕು ? ತಾವು ಸಾಚಾ ಆಗಿದ್ರೆ ತನಿಖೆ ಆಗಲಿ ಅಂತ ಕಾಯಬಹುದಿತ್ತು, ತಾವೇ ಶುದ್ಧ ಹಸ್ತದಿಂದ ತನಿಖೆಗೆ ಒತ್ತಾಯಿಸಬೇಕಿತ್ತು. ಅದನ್ನು ಬಿಟ್ಟು ರಿಯಾಕ್ಟಿವ್ ಆಗಿ ವರ್ತಿಸುತ್ತಿದ್ದಾರೆ. ಸೂಕ್ಷ್ಮ ಮನಸ್ಸಿನ ಜನರು ಎಲ್ಲವನ್ನು ಗಮನಿಸುತ್ತಿದ್ದಾರೆ. ಟಿವಿಯಲ್ಲಿ ಐದು ಸೆಕೆಂಡು ಹತ್ತು ಸೆಕೆಂಡು ಜಾಹೀರಾತು ಬಂದರೆ ಅದಕ್ಕೆ ಲಕ್ಷಾಂತರ ರೂಪಾಯಿ ತರಬೇಕಾಗುತ್ತದೆ. ಅಂತದ್ದರಲ್ಲಿ ಟಿಟಿವಿಯೊಂದು 3.5 – 4.0 ಗಂಟೆ ಯಾರೋ ಒಬ್ಬರನ್ನು ಸಮರ್ಥಿಸಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾದರೆ ನೀವೇ ಲೆಕ್ಕ ಹಾಕಿ, ಅದರ ಹಿಂದಿನ ‘ಅರ್ಥ – ಲೆಕ್ಕಾಚಾರ’.

ಮುಕ್ತಾಯ:

ಒಟ್ಟಾರೆಯಾಗಿ ಹೇಳಬೇಕೆಂದರೆ, ಪವರ್ ಟಿವಿಯ, ‘ಕ್ಷಮಿಸಿ ಸೌಜನ್ಯ’ ಕಾರ್ಯಕ್ರಮವು ಒಂದು ಕಂಪ್ಲೀಟ್ ಪ್ಲಾಪ್ ಕಾರ್ಯಕ್ರಮವಾಗಿದ್ದು, ಹೋರಾಟಕ್ಕೆ ಬೆಂಬಲ ಸೂಚಿಸಿದ ಜನಸಾಮಾನ್ಯರನ್ನು ಅನಗತ್ಯ ದಾಖಲೆಗಳನ್ನು ತೋರಿಸುವ ಮೂಲಕ ಅವರಲ್ಲಿ ಗೊಂದಲ ಸೃಷ್ಟಿ ಮಾಡುವ ಸಂಚು ನಡೆಸಿದ್ದುಇಲ್ಲಿ ಸ್ಪಷ್ಟವಾಗುತ್ತದೆ. ಹಾಗಾಗಿ ಹೋರಾಟಗಾರ ಮನಸ್ಸಿನ ಜನಸಾಮಾನ್ಯರು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ನಿಮ್ಮ ಸತ್ಯ ಶೋಧನೆ ಕೊನೆಯ ತನಕ ಮುಂದುವರೆಯಲಿ. ಕೊನೆಯ ತನಕ ಅಮ್ಮ ಕುಸುಮಾವತಿ ಅವರ ಕಣ್ಣೀರ ಕೊರಗಿಗೆ ಮರುಗಿ, ಹೋರಾಟದ ಹಿಂದೆ ನಿಂತುಕೊಳ್ಳಿ ಎನ್ನುತ್ತಾ ಇಲ್ಲಿಗೆ ಫುಲ್ ಸ್ಟಾಪ್ ಹಾಕುತ್ತಿದ್ದೇವೆ. ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾನು ನಂಬಿಕೊಂಡು ಬಂದ ಸಮಾಜವಾದ ಮತ್ತು ನೊಂದವರಿಗೆ ನ್ಯಾಯ ಕೊಡಿಸಲು ತಮ್ಮ ರಾಜಕೀಯ ಇಚ್ಚಾಶಕ್ತಿ ಮತ್ತು ಪವರ್ ಪ್ರದರ್ಶಿಸಬೇಕಿದೆ. ಅದಕ್ಕಾಗಿ ನೀವು ಮಾಡಬೇಕಿರುವುದು ಒಂದೇ- ಅದು ಮತ್ತಷ್ಟು ತೀವ್ರತೆಯಿಂದ ಹೋರಾಟದಲ್ಲಿ ಪಾಲ್ಗೊಳ್ಳುವುದು.