Home News ನೆಕ್ಕಿಲಾಡಿಯ ರಫೀಕ್ ಖಾನ್‌ಗೆ ಉಗ್ರ ನಂಟು ವರದಿ |ಪರಿಸ್ಥಿತಿ ಮೇಲ್ನೋಟಕ್ಕೆ ಮಾತ್ರ ಶಾಂತ, ಆಳದಲ್ಲಿ ಸಾಕಷ್ಟು...

ನೆಕ್ಕಿಲಾಡಿಯ ರಫೀಕ್ ಖಾನ್‌ಗೆ ಉಗ್ರ ನಂಟು ವರದಿ |
ಪರಿಸ್ಥಿತಿ ಮೇಲ್ನೋಟಕ್ಕೆ ಮಾತ್ರ ಶಾಂತ, ಆಳದಲ್ಲಿ ಸಾಕಷ್ಟು ನೋವಿದೆ- ರಫೀಕ್ ಪತ್ನಿ ಫಾತಿಮಾ ಕಣ್ಣೀರು

Hindu neighbor gifts plot of land

Hindu neighbour gifts land to Muslim journalist

ನೆಕ್ಕಿಲಾಡಿಯಿಂದ ನಾಪತ್ತೆಯಾದ ಮುಹಮ್ಮದ್ ರಫೀಕ್ ಖಾನ್ ಅವರಿಗೆ ಉಗ್ರರ ನಂಟು ಹೊಂದಿದ್ದರು ಎಂಬ ಮಾಧ್ಯಮಗಳ ವರದಿಯಿಂದ ಆತಂಕ ಹಾಗೂ ಉದ್ವಿಗ್ನಕ್ಕೊಳಗಾಗಿದ್ದ ಉಪ್ಪಿನಂಗಡಿ, ಪೊಲೀಸ್ ವರಿಷ್ಠಾಧಿಕಾರಿಯವರ ಸ್ಪಷ್ಟಿಕರಣದಿಂದ ಸಣ್ಣದೊಂದು ನಿಟ್ಟುಸಿರು ಬಿಟ್ಟರೂ ಆತನ ಕುಟುಂಬ ಪಡುತ್ತಿರುವ ನೋವು ಯಾವ ಶತ್ರುವಿಗೂ ಬೇಡ ಎನ್ನುವಂತಿದೆ.

‘ನೆಕ್ಕಿಲಾಡಿಯಿಂದ ನಾಪತ್ತೆಯಾಗಿದ್ದ ಮೆಕ್ಯಾನಿಕ್ ರಫೀಕ್ ಖಾನ್ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ. ಇವರನ್ನು ಯಾವುದೇ ಪೊಲೀಸರು ಬಂಧಿಸಿಲ್ಲ’ ಎಂದು ಎಸ್ಪಿ ಅವರು ಹೇಳಿಕೆ ನೀಡಿದ ಬೆನ್ನಿಗೇ, ಉಪ್ಪಿನಂಗಡಿ ಪರಿಸರದ ಜನತೆ, ಸುಳ್ಳು ಸುದ್ದಿ ಹರಡಿರುವ ಪತ್ರಿಕೆಗಳ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಹಿಮಾಚಲ ಪ್ರದೇಶ ಮೂಲದ ಮುಹಮ್ಮದ್ ರಫೀಕ್‌ರೊಂದಿಗೆ ವಿವಾಹವಾಗಿ ಎರಡು ವರ್ಷಗಳೇ ಕಳೆದವು. ನೆಕ್ಕಿಲಾಡಿಯಲ್ಲೇ ಸ್ವಂತ ಗ್ಯಾರೇಜ್‌ವೊಂದನ್ನು ಹಾಕಿಕೊಂಡಿದ್ದರು. ಅನತಿ ದೂರದ ಫ್ಲಾಟ್‌ನಲ್ಲಿ ನೆಲೆಸಿದೆವು. ಸುಖಿ ಸಂಸಾರ ನಮ್ಮದಾಗಿತ್ತು.ಕಾರಣಾಂತರದಿಂದ ಹಿಮಾಚಲಯ ಪ್ರದೇಶಕ್ಕೆ ತೆರಳಿದ್ದ ಪತಿಗೆ ಮಾಧ್ಯಮಗಳು ಉಗ್ರ ಪಟ್ಟ ಕಟ್ಟಿವೆ. ಈ ವೇಳೆ ಕುಟುಂಬ, ಪರಿಸರದಲ್ಲಿ ಬಿರುಗಾಳಿಯೇ ಬೀಸಿದಂತಾಯಿತು. ಅಲ್ಲೋಲ-ಕಲ್ಲೋಲ ಪರಿಸ್ಥಿತಿ ಉಂಟಾಯಿತು. ‘ಉಗ್ರರ ಜೊತೆ ನಂಟು’ ಎಂಬ ಆಧಾರ ರಹಿತ ವರದಿಯನ್ನು ಸ್ವತಃ ಪೊಲೀಸರೇ ಅಲ್ಲಗಳೆದಿದ್ದಾರೆ. ಸದ್ಯ ಪರಿಸ್ಥಿತಿ ಮೇಲ್ನೋಟಕ್ಕೆ ಮಾತ್ರ ಶಾಂತವಾಗಿದೆ. ಆಳದಲ್ಲಿ ಸಾಕಷ್ಟು ನೋವಿದೆ. ಒಂದು ತುತ್ತು ಅನ್ನ ಕೂಡ ಗಂಟಲೊಳಗೆ ಇಳಿಯದಂತಾಗಿದೆ. ಮಾಧ್ಯಮಗಳು ಕುಟುಂಬದ ಮಾನ ಹರಾಜು ಹಾಕಿವೆ. ಪತಿ ಮಾನವೀಯತೆಯ ಪ್ರತಿಬಿಂಬದಂತಿದ್ದ ಎಂದು ಸಂತ್ರಸ್ತನ ಪತ್ನಿ ಫಾತಿಮಾ ಕಣ್ಣೀರಿಟ್ಟಿದ್ದಾರೆ.

ಜುಲೈ 18ರಂದು ಪತಿ ಮುಹಮ್ಮದ್ ರಫೀಕ್ ಖಾನ್ ದ್ವಿಚಕ್ರ ವಾಹನದ ಉಪಕರಣ ತರಲೆಂದು ಬೆಂಗಳೂರಿಗೆ ಹೋಗುವುದಾಗಿ ತಿಳಿಸಿ ಪ್ರಯಾಣ ಬೆಳೆಸಿದ್ದರು. ಫೋನಿ ನಲ್ಲಿ ನಿರಂತರ ಸಂಪರ್ಕದಲ್ಲಿದ್ದರು. ಸುಮಾರು ಎಂಟು ದಿನಗಳಾದ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ಭೀತಿಗೊಳಗಾದ ನಮ್ಮ ಕುಟುಂಬ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿತ್ತು. ನೆಕ್ಕಿಲಾಡಿಯ ಫ್ಲಾಟ್‌ನಿಂದ ತವರು ಮನೆಯಾದ ಕೊಡಂಬಾಡಿಯ ಶಾಂತಿನಗರದ ತಂದೆಯ ಮನೆಗೆ ವಾಪಸಾದೆ ಎಂದರು.

ಪತಿಗೆ ಉಗ್ರರೊಂದಿಗೆ ನಂಟಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಪುತ್ತೂರಿನ ಡಿವೈಎಸ್ಪಿ ಸೇರಿದಂತೆ ಉಪ್ಪಿನಂಗಡಿಯ ಪೊಲೀಸರು ಮನೆಗೆ ಧಾವಿಸಿದರು. ಕುಟುಂಬವನ್ನೆಲ್ಲ ವಿಚಾರಿಸಿದರು. ರಫೀಕ್‌ಖಾನ್ ಬಗೆಗಿನ ಎಲ್ಲ ಮಾಹಿತಿಯನ್ನು ಅವರಿಗೆ ಒದಗಿಸಿದೆವು. ಅವರು ಮೊಬೈಲ್ ಫೋನ್ ನಂಬರ್ ಆಧರಿಸಿ, ತನಿಖೆ ನಡೆಸಿದರು. ಪೊಲೀಸರು ಕೊನೆಗೂ ಪತಿ ಇರುವ ಜಾಗ ಪತ್ತೆ ಹಚ್ಚಿದರು. ಪತಿಯೊಂದಿಗೆ ವೀಡಿಯೊ ಕರೆಯ ಮೂಲಕ ಮಾತನಾಡಿಸಿದರು. ನಾಪತ್ತೆಯಾದ ಪತಿ ಅವರೇ ಎನ್ನುವುದು ಖಚಿತವಾಯಿತು. ಜೊತೆಗೆ ಆತನಿಗೆ ಉಗ್ರರ ನಂಟಿಲ್ಲ ಎನ್ನುವುದು ಕೂಡ ಇದೇ ವೇಳೆ ದೃಢಪಟ್ಟಿತು ಎನ್ನುತ್ತಾರೆ ಸಂತ್ರಸ್ತೆ ಫಾತಿಮಾ.

ಪತಿಯನ್ನು ಭಯೋತ್ಪಾದಕನಂತೆ ಬಿಂಬಿಸಿದ ಮಾಧ್ಯಮಗಳ ವರದಿ ಯಿಂದ ಕುಟುಂಬವೇ ಜರ್ಝರಿತಗೊಂಡಿದ್ದು, ಅಕ್ಷರಶಃ ನಲುಗಿದೆ. ನಮ್ಮ ಆತಂಕ ತೀವ್ರತೆ ಪಡೆಯುತ್ತಲೇ ಸಾಗಿತು. ನೆರೆಹೊರೆಯವರ ಚುಚ್ಚು ಮಾತುಗಳು, ಅಪಹಾಸ್ಯ ಮಾಡುವ ಪರಿ, ನಿಂದಿಸುವ ವೈಖರಿ ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟೊಂದು ಘನಘೋರ ಹಿಂಸೆಗೆ ಒಳಗಾದೆವು. ಪೊಲೀಸರ ಮೂಲಕ ಪತಿಯೊಂದಿಗೆ ಮಾತನಾಡಿದ ಬಳಿಕ ಅಲ್ಪಮಟ್ಟಿಗೆ ನಿರುಮ್ಮಳರಾದೆವು. ಪತಿಯ ವಿರುದ್ಧ ಆಧಾರ ರಹಿತ, ಇಲ್ಲ ಸಲ್ಲದ ವರದಿ ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲು ಕುಟುಂಬ ತೀರ್ಮಾನಿಸಿದೆ. ಮಾಧ್ಯಮಗಳಿಗೆ ಬರೆಯುವ ಸ್ವಾತಂತ್ರವಿದೆ ಎಂದು ಆಧಾರ ರಹಿತ ವರದಿ ಪ್ರಕಟಿಸುವುದಲ್ಲ. ಇದರಿಂದ ಕುಟುಂಬದಲ್ಲಿ ಸಾವಿನಂತಹ ಅವಘಡಗಳು ಸಂಭವಿಸಿದ್ದರೆ ಯಾರು ಜವಾಬ್ದಾರರು ಎಂದು ಅವರು ಪ್ರಶ್ನಿಸಿದ್ದಾರೆ.