

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ನ. 8ರಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪದವಿ ತರಗತಿಗಳು ಆರಂಭವಾಗಲಿವೆ. ಮೊದಲ ಹಂತದಲ್ಲಿ 61 ಕೋರ್ಸ್‌ಗಳನ್ನು ನಿಗದಿಪಡಿಸಲಾಗಿದೆ ಎಂದು ವಿ.ವಿ. ಕುಲಪತಿ ಪ್ರೊ| ಪಿ.ಎಸ್.ಯಡಪಡಿತ್ತಾಯ ಅವರು ತಿಳಿಸಿದ್ದಾರೆ.
ಮಂಗಳೂರು ವಿ.ವಿ.ಯಲ್ಲಿ ಬುಧವಾರ ನಡೆದ ಶೈಕ್ಷಣಿಕ ಮಂಡಳಿಯ ದ್ವಿತೀಯ ಸಾಮಾನ್ಯ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
ಈ ಶೈಕ್ಷಣಿಕ ವರ್ಷದಿಂದಲೇ ಹೊಸ ಶಿಕ್ಷಣ ನೀತಿಯಡಿ ಪಠ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ 48 ಅಧ್ಯಯನ ಮಂಡಳಿ ರಚಿಸಲಾಗಿದೆ. 61 ಕೋರ್ಸ್‌ಗಳ ಪೈಕಿ 6 ಕೋರ್ಸ್ ಹೊರತುಪಡಿಸಿ ಉಳಿದ ಪಠ್ಯ ಅಂತಿಮವಾಗಿದೆ. ಫ್ರೆಂಚ್, ಡಾಟಾ ಪ್ರೊಸೆಸಿಂಗ್, ತುಳು, ಕಂಪ್ಯೂಟರ್ ಅಪ್ಲಿಕೇಷನ್, ಅರೇಬಿಕ್ ಹಾಗೂ ಸಾಮಾನ್ಯ ಕಲಾ ಕೋರ್ಸ್‌ಗಳ ಪಠ್ಯ ಇನ್ನೂ ಅಂತಿಮವಾಗಿಲ್ಲ ಎಂದರು.
ಹೊಸ ಶಿಕ್ಷಣ ನೀತಿಯಡಿ ಮೂರು ಗಂಟೆ ಬದಲು ಎರಡು ಗಂಟೆ ಅವಧಿಯ ಸೆಮಿಸ್ಟರ್ ಪರೀಕ್ಷೆ ಇರುತ್ತದೆ. ಮಂಗಳೂರು ವಿ.ವಿ.ಯಲ್ಲಿ “ಉದ್ಯಮಶೀಲತಾ ಅಭಿವೃದ್ಧಿ ಘಟಕ’ ಆರಂಭಿಸಲಾಗುವುದು ಎಂದರು.
ಸರ್ಟಿಫಿಕೆಟ್ ಕೋರ್ಸ್ ಹಾಗೂ ಸ್ಟಾರ್ಟ್‌ಅಪ್ ಮಾದರಿಯಲ್ಲಿ ಉದ್ಯೋಗ ಸೃಷ್ಟಿಯ ಗುರಿಯಿದೆ ಎಂದರು.
ವಿ.ವಿ.ಯಿಂದ ಕಾನೂನು ಪದವಿ!
ಪ್ರಸಕ್ತ ಶೈಕ್ಷಣಿಕ ಅವಧಿಯಿಂದಲೇ ವಿ.ವಿ. ವ್ಯಾಪ್ತಿಯ ಪದವಿ ಕಾಲೇಜು ಗಳಲ್ಲಿ ಕಾನೂನು ಡಿಪ್ಲೊಮಾ ಕೋರ್ಸ್ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ಸಾಲಿನಿಂದ ಪಿಯುಸಿ ಬಳಿಕ 5 ವರ್ಷಗಳ “ಎಲ್‌ಎಲ್‌ಎಂ’ ಸಮಗ್ರ ಕೋರ್ಸ್ ಅಧ್ಯಯನಕ್ಕೆ ಕೊಡಗಿನ ಚಿಕ್ಕಅಳುವಾರು ವಿ.ವಿ. ಅಧ್ಯಯನ ಕೇಂದ್ರದಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಎನ್‌ಎಸ್‌ಎಸ್, ಎನ್‌ಸಿಸಿ ಜತೆ “ಯೂತ್ ರೆಡ್‌ಕ್ರಾಸ್’ ಚಟುವಟಿಕೆಗೆ ಮುಂದಿನ ಶೈಕ್ಷಣಿಕ ಅವಧಿಯಿಂದ ಅವಕಾಶ ಕಲ್ಪಿಸಲು ಅನುಮೋದನೆ ನೀಡಲಾಯಿತು. ಪದವಿಯಲ್ಲಿ ಬಿ. ವೊಕೇಶನಲ್ ಕಲಿತವರಿಗೆ ಇನ್ನು ಮುಂದೆ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅವಕಾಶ ನೀಡುವ ಸಂಬಂಧ ತಿದ್ದುಪಡಿ ತರಲಾಯಿತು.
ವಿ.ವಿ. ವ್ಯಾಪ್ತಿಯ ಕಾಲೇಜುಗಳಲ್ಲಿ “ಯೋಗ ವಿಜ್ಞಾನ’ ಎಂಬ ಪಠ್ಯವನ್ನು ಆಯ್ಕೆ ವಿಷಯವಾಗಿ ಅಳವಡಿಸಲು ನಿರ್ಣಯ ಮಾಡಲಾಯಿತು. ವಿ.ವಿ. ಹಾಗೂ ಯುಎಸ್‌ಎ ವೇಯ್ನ ಸ್ಟೇಟ್ ಯುನಿವರ್ಸಿಟಿ ಜತೆಗೆ ಒಡಂಬಡಿಕೆಗೆ ಅನುಮೋದನೆ ನೀಡಲಾಯಿತು.
ವಿ.ವಿ. ಕುಲಸಚಿವ ಡಾ| ಕಿಶೋರ್ ಕುಮಾರ್, ಕುಲಸಚಿವ ಡಾ|ಪಿ.ಎಲ್ ಧರ್ಮ, ಹಣಕಾಸು ಅಧಿಕಾರಿ ಡಾ| ಬಿ. ನಾರಾಯಣ ಉಪಸ್ಥಿತರಿದ್ದರು.
ವಿ.ವಿ.ಯಲ್ಲಿ “ಓಪನ್ ಬುಕ್ ಎಕ್ಸಾಂ’!
ವಿ.ವಿ.ಯಲ್ಲಿ ಮುಂದಿನ ಶೈಕ್ಷಣಿಕ ಸಾಲಿನಲ್ಲಿ “ಓಪನ್ ಬುಕ್ ಎಕ್ಸಾಂ’ (ಮುಕ್ತ ಪುಸ್ತಕ ಪರೀಕ್ಷೆ) ವಿಧಾನವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು. ಈ ಮಾದರಿಯಲ್ಲಿ ಆನ್‌ಲೈನ್ ಮೂಲಕ ಪ್ರಶ್ನೆಪತ್ರಿಕೆಯನ್ನು ಬೆಳಗ್ಗೆ ನೀಡಲಾಗುತ್ತದೆ. ವಿದ್ಯಾರ್ಥಿಯು ಮನೆಯಲ್ಲೇ ಇದ್ದು ಸಂಜೆಯವರೆಗೆ ನಿಗದಿತ ಅವಧಿಯಲ್ಲಿ ಆನ್‌ಲೈನ್ ಮೂಲಕವೇ ಪರೀಕ್ಷೆ ಬರೆಯಬಹುದು ಎಂದು ಪ್ರೊ| ಪಿ.ಎಸ್.ಯಡಪಡಿತ್ತಾಯ ತಿಳಿಸಿದರು.
ಅನುಮೋದನೆಗೊಂಡ ಪ್ರಮುಖಾಂಶಗಳು
-ಸ್ನಾತಕೋತ್ತರ/ಪಿಎಚ್‌ಡಿಗೆ ಅಫ್ಘಾನಿಸ್ಥಾನ, ಇರಾಕ್ ಸೇರಿದಂತೆ ವಿದೇಶದ 64 ವಿದ್ಯಾರ್ಥಿಗಳ ಹೆಚ್ಚುವರಿ ಅರ್ಜಿಗಳು
-ಸ್ನಾತಕೋತ್ತರ ಸೈಬರ್ ಸೆಕ್ಯುರಿಟಿ, ಇತಿಹಾಸ ಹಾಗೂ ಪುರಾತತ್ವಶಾಸ್ತ್ರ, ಹಿಂದಿ ಕಾರ್ಯಕ್ರಮದ ಪರಿಷ್ಕೃತ ಪಠ್ಯಕ್ರಮ
-ಸ್ನಾತಕೋತ್ತರ “ಫುಡ್ ಸೈನ್ಸ್ ಆ್ಯಂಡ್ ನ್ಯೂಟ್ರೀಶಿಯನ್’ ಪರಿಷ್ಕೃತ ಪಠ್ಯಕ್ರಮ
-ಸ್ನಾತಕೋತ್ತರ ಜೀವವಿಜ್ಞಾನ, ಬಯೋ ಟೆಕ್ನಾಲಜಿ, ಸಾಗರ ಭೂ ವಿಜ್ಞಾನ ಪರಿಷ್ಕೃತ ಪಠ್ಯಕ್ರಮ
-ಸ್ನಾತಕೋತ್ತರ ವಸ್ತುವಿಜ್ಞಾನ ಪಠ್ಯದಲ್ಲಿ ಅಳವಡಿಸಿದ ಹೊಸಸಾಫ್ಟ್‌ಕೋರ್ ಕೋರ್ಸ್
-ಕಲಾ/ವಾಣಿಜ್ಯ/ವಿಜ್ಞಾನ ತಂತ್ರಜ್ಞಾನ/ಶಿಕ್ಷಣ ನಿಕಾಯದ ಪಿಎಚ್‌ಡಿ ಪದವಿಗೆ ಯುಜಿಸಿ ನಿರ್ದೇಶನದಂತೆ ಒಂದು ಹೆಚ್ಚುವರಿ ಕೋರ್ಸ್ ಅಳವಡಿಸಿ ಪರಿಷ್ಕೃತ ಪಠ್ಯ













