

ಇಂಡೋನೇಷ್ಯಾದಲ್ಲಿ ಇಸ್ಲಾಂ ಅತಿದೊಡ್ಡ ಧರ್ಮವಾಗಿದ್ದು, ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಹೀಗಿರುವ ದೇಶದಲ್ಲಿ ಇದೀಗ ಹಿಂದುತ್ವದ ಬಗ್ಗೆ ಒಲವು ತೋರಿರುವ ಘಟನೆಯೊಂದು ನಡೆದಿದೆ.
ಇಲ್ಲಿನ ಮಾಜಿ ಅಧ್ಯಕ್ಷ, ಇಂಡೋನೇಷ್ಯಾದ ಸ್ಥಾಪಕ ಸುಕರ್ಣೋ ಅವರ ಪುತ್ರಿ 70 ವರ್ಷದ ಸುಕ್ಮಾವತಿ ಸುಕರ್ಣೋಪುತ್ರಿ ಹಿಂದೂ ಧರ್ಮದ ಬಗ್ಗೆ ಒಲವು ತೋರಿದ್ದು, ಇಸ್ಲಾಂ ಧರ್ಮ ಬಿಡಲು ಸಿದ್ಧತೆ ನಡೆಸಿದ್ದಾರೆ. ತಾವು ಹಿಂದೂ ಧರ್ಮಕ್ಕೆ ಮತಾಂತರ ಆಗಲಿರುವುದಾಗಿ ಅವರು ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಮುಸ್ಲಿಂ ದೇಶದಲ್ಲಿ ಇದೀಗ ಸಂಚಲನ ಮೂಡಿದೆ.
ಇದೇ ಅಕ್ಟೋಬರ್ 26ರಂದು ಈ ಮತಾಂತರ ಕಾರ್ಯ ನಡೆಯಲಿದ್ದು, ಬಾಲಿ ಅಗುಂಗ್ ಸಿಂಗರಾಜದಲ್ಲಿ ಸುಕರ್ಣೋ ಸೆಂಟರ್ ಹೆರಿಟೇಜ್ ಏರಿಯಾದಲ್ಲಿ ಸಮಾರಂಭ ಆಯೋಜಿಸಲಾಗಿದೆ. ಈ ಮತಾಂತರದಲ್ಲಿ ಇವರು ಮಕ್ಕಳು ಮತ್ತು ಕುಟುಂಬಸ್ಥರು ಸಂಪೂರ್ಣವಾಗಿ ಸಹಕಾರ ಸೂಚಿಸಿದ್ದಾರೆ ಎನ್ನಲಾಗಿದೆ. ಹತ್ತು ವರ್ಷಗಳ ದಾಂಪತ್ಯದ ನಂತರ 1984 ರಲ್ಲಿ ರಾಜಕುಮಾರ ಮತ್ತು ಸುಕ್ಮಾವತಿ ವಿಚ್ಛೇದನ ಪಡೆದಿದ್ದರೆಂಬುವುದು ಉಲ್ಲೇಖನೀಯ.
ಸುಕ್ಮಾವತಿ ಅವರು ಸುಕರ್ಣೋಪುತ್ರಿ ಮತ್ತು ಅವರ 3ನೇ ಪತ್ನಿ ಫಾತ್ಮವತಿಯ ಮೂರನೇ ಮಗಳು. ಇಷ್ಟೇ ಅಲ್ಲದೇ ಇಂಡೋನೇಷಿಯಾದ ಅಧ್ಯಕ್ಷೆಯಾಗಿದ್ದ ಮೆಗಾವತಿ ಅವರ ಸಹೋದರಿ ಕೂಡ. ಸುಕ್ಮಾವತಿ ಅವರು, ಹಿಂದೂ ಧರ್ಮಶಾಸ್ತ್ರದ ವಿಷಯಗಳಲ್ಲಿ ಚೆನ್ನಾಗಿ ಓದಿದ್ದಾರೆ. ಹಿಂದೂ ಧರ್ಮವನ್ನು ಶ್ರೇಷ್ಠ ಎಂದು ತಿಳಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಪ್ರಭಾವಿತರಾಗಿರುವ ಅವರು ಮತಾಂತರಗೊಳ್ಳಲು ಸಿದ್ಧ ನಡೆಸಿದ್ದಾರೆ ಎಂದಿದ್ದಾರೆ. ಇನ್ನು ಮತಾಂತರ ಸಮಾರಂಭ ಆಯೋಜಿಸಲಾದ ದಿನದಂದು ಸುಕ್ಮಾವತಿ ತಮ್ಮ 70 ನೇ ಹುಟ್ಟುಹಬ್ಬವನ್ನೂ ಆಚರಿಸಲಿದ್ದಾರೆ.
ಅಂದ ಹಾಗೆ 2018ರಲ್ಲಿ ಸುಕ್ಮಾವತಿ ಅವರು ಇಸ್ಲಾಂ ಧರ್ಮವನ್ನು ಅವಮಾನಿಸುವ ಕವಿತೆ ಓದಿದ್ದರು ಎಂದು ಭಾರಿ ವಿವಾದ ಎದ್ದಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಇಸ್ಲಾಮಿಕ್ ಗುಂಪುಗಳು ಸುಕ್ಮಾವತಿ ವಿರುದ್ಧ ಧರ್ಮದ್ರೋಹದ ಆರೋಪ ಮಾಡಿದ್ದರು. ನಂತರ ಸುಕ್ಮಾವತಿಯವರು ಕ್ಷಮೆ ಕೂಡ ಕೇಳಿದ್ದರು ಎನ್ನಲಾಗಿದೆ.













