

ಭಾರತ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ. ಈ ನಿಟ್ಟಿನಲ್ಲಿ ಮೆಟ್ರೋ ಸಂಚಾರ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ದೇಶದಲ್ಲೆಡೆ ಮೆಟ್ರೋ ಸಂಚಾರ ಲಭ್ಯತೆ ಕುರಿತು ಇದೀಗ ಹೊಸ ಮಾಹಿತಿ ದೊರೆತಿದೆ.
ಭಾರತ ತನ್ನ 100ನೇ ಸ್ವಾತಂತ್ರೋತ್ಸವ ಆಚರಿಸಿಕೊಳ್ಳುವ ವೇಳೆಗೆ ದೇಶದ ಕನಿಷ್ಠ 100 ನಗರಗಳಲ್ಲಿ ಮೆಟ್ರೊ ರೈಲು ಪ್ರಯಾಣಕ್ಕೆ ಲಭ್ಯವಾಗಿರುತ್ತದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿ ದುರ್ಗಾಶಂಕರ್ ಮಿಶ್ರ ಹೇಳಿದ್ದಾರೆ.
ಉತ್ತರಪ್ರದೇಶದ ಲಖನೌದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ಪ್ರಯುಕ್ತ ನಡೆಯುತ್ತಿರುವ ನ್ಯೂ ಇಂಡಿ ಅರ್ಬನ್ ಎಕ್ಸ್‌ಪೋನ ವೇದಿಕೆಯಲ್ಲಿ ಬುಧವಾರ ಮಾತನಾಡಿದ ಅವರು, ಈಗಾಗಲೇ ಆರಂಭವಾಗಿರುವ ಮತ್ತು ಮುಂದಕ್ಕೆ ಯೋಜಿಸಲಾಗಿರುವ ಯೋಜನೆಗಳಡಿ ಗುರಿ ಸಾಧಿಸಲಾಗುವುದು ಎಂದು ತಿಳಿಸಿದರು.
ಪ್ರಸ್ತುತ, ಭಾರತದ ಮೆಟ್ರೋ ಜಾಲದ ಗಾತ್ರವು ಜಾಗತಿಕವಾಗಿ ಐದನೇ ಸ್ಥಾನದಲ್ಲಿದೆ. ದೆಹಲಿ, ಕೊಲ್ಕತ, ಮುಂಬೈ, ಚೆನ್ನೈ, ಹೈದರಾಬಾದ್, ಕೊಚ್ಚಿ, ಜೈಪುರ, ಗುರುಗ್ರಾಮ್, ನೋಯ್ಡಾ, ಲಕ್ಷ್ಮೀ, ಬೆಂಗಳೂರು ಮತ್ತು ಇನ್ನೂ ಕೆಲವು ನಗರಗಳಲ್ಲಿ ಮಾತ್ರ ಮೆಟ್ರೋ ರೈಲುಗಳು ಕಾರ್ಯನಿರ್ವಹಿಸುತ್ತಿವೆ.
“2047ರಲ್ಲಿ ಕನಿಷ್ಠ 100 ನಗರಗಳಲ್ಲಿ ಮೆಟ್ರೋ ರೈಲುಗಳು ಓಡುತ್ತಿರುತ್ತವೆ. ಹಾಲಿ ದೇಶದಲ್ಲಿ 500 ಕಿಲೋಮೀಟರ್ ನಷ್ಟು ಉದ್ದದ ಮೆಟ್ರೋ ಮಾರ್ಗಗಳಿವೆ. 2047 ರ ವೇಳೆಗೆ ಅದನ್ನು ನಾವು 10 ಪಟ್ಟು, ಅಂದರೆ 5 ಸಾವಿರ ಕಿಲೋ ಮೀಟರ್‌ಗಳಿಗೆ ಹೆಚ್ಚಿಸಿರುತ್ತೇವೆ” ಎಂದು ಮಿಶ್ರ ಹೇಳಿದರು.
ಕೊರೋನಾ ಮುಂಚೆ ಪ್ರತಿದಿನ 8.5 ಮಿಲಿಯನ್ ಜನರು ಮೆಟ್ರೋ ಬಳಸುತ್ತಿದ್ದರು ಹಾಗೂ ಪ್ರಸ್ತುತ ಅವರ ಸಂಖ್ಯೆ 3 ರಿಂದ 3.5 ಮಿಲಿಯನ್‌ಗಳಷ್ಟಿದೆ ಎಂದು ತಿಳಿಸಿದ ಅವರ ಕೊರೋನಾ ಸಮಸ್ಯೆ ಪರಿಹಾರವಾದ ನಂತರ ಮೆಟ್ರೋ ರೈಲುಗಳ ನಿತ್ಯ ಪ್ರಯಾಣಿಕರ ಸಂಖ್ಯೆ ಮತ್ತೆ ಏರಲಿದ್ದು, 10 ಮಿಲಿಯನ್ ತಲುಪಲಿದೆ ಎಂದರು.













