

ಮಂಗಳೂರು:ಕರ್ನಾಟಕದಲ್ಲಿ ಇಂದು ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಈ ಮೊದಲೇ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು.ರಾಜ್ಯದಲ್ಲಿ ಶಾಹೀನ್ ಚಂಡಮಾರುತದ ಪರಿಣಾಮ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದ್ದು ರಾಜ್ಯದ ಕರಾವಳಿ ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಇಂದು ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ರಾಮನಗರ, ಕೊಡಗಿನಲ್ಲಿ ಮೈಸೂರು,ಮಂಡ್ಯದಲ್ಲಿ ಇಂದು ಭಾರೀ ಮಳೆ ಸುರಿಯುವ ಸಾಧ್ಯತೆ ಇದ್ದು,
ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕರ್ನಾಟಕದ ಬಹುತೇಕ ಕಡೆ ಇಂದಿನಿಂದ ಅ. 7ರವರೆಗೆ ಮಳೆ ಜಾಸ್ತಿಯಾಗಲಿದೆ. ಬೆಂಗಳೂರಿನಲ್ಲಿ 2 ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಉದ್ಯಮಿಯೊಬ್ಬರು ಸಾವನ್ನಪ್ಪಿದ್ದಾರೆ. ಮಳೆಯಿಂದ ಸಿಲಿಕಾನ್ ಸಿಟಿಯ ರಾಜಕಾಲುವೆ ಉಕ್ಕಿ ಹರಿದಿದೆ. ಬೆಂಗಳೂರಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಹೆಚ್‌ಎಎಲ್ ಬಳಿಯ ರಮೇಶ್ ನಗರದಲ್ಲಿ ಗೋಡೆ ಕುಸಿತವಾಗಿದೆ. ಹೆಚ್‌ಎಎಲ್‌ಗೆ ಸೇರಿದ 12 ಅಡಿ ಎತ್ತರದ ಗೋಡೆ ಕುಸಿತವಾಗಿದೆ.













