

Lakshmisha Tolpadi: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅನೇಕ ಹೇಯ ಕೃತ್ಯಗಳ ಬಗ್ಗೆ, ಅದಕ್ಕೆ ಕಾರಣವಾಗಿರುವ ಎನ್ನಲಾಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುರಿತಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
“ಈ ಮನುಷ್ಯ ನ್ಯಾಯಾಲಯಕ್ಕೆ ಶುದ್ಧ ಹಸ್ತದಿಂದ ಬಂದಿಲ್ಲ” ಎಂದು ಉಚ್ಚ ನ್ಯಾಯಾಲಯವೇ ವಾಗ್ದಂಡನೆ ಮಾಡಿದೆ. ಅದಕ್ಕೆ ದಾಖಲೆಗಳು ಸಹ ಇವೆ. ಹಾಗಾದರೆ ಕೋರ್ಟ್ ವಾಗ್ದಂಡನೆ ಮಾಡಿದ ವ್ಯಕ್ತಿಯನ್ನು ಎಂಪಿ ಮಾಡುವುದು ಅದು ಯೋಗ್ಯತೆಯೇ ?; ಅಲ್ಲ, ಅದೊಂದು ದೊಡ್ಡ ದುರಂತ ಎಂದು ಲಕ್ಷ್ಮೀಶ ತೋಳ್ಪಾಡಿ ವಾಗ್ದಾಳಿ ನಡೆಸಿದ್ದಾರೆ.
‘ಭೂ ರಹಿತರಿಗೆ ಸೇರಬೇಕಾದ ಜಾಗವನ್ನೆಲ್ಲ ಲಪಟಾಯಿಸಿ ಇಂದು ಸಾವಿರಾರು ಎಕರೆ ಜಮೀನು ಮಾಡಿದ್ದಾರೆ. ವೀರೇಂದ್ರ ಹೆಗಡೆಯವರ ಖಾಸ ತಮ್ಮ ತಾನು ಭೂ ರಹಿತ ಬಡವ ಅಂತ ಅರ್ಜಿ ಹಾಕುತ್ತಾರೆ. ನಾಚಿಕೆ ಸಹ ಆಗುವುದಿಲ್ಲ ಆ ವ್ಯಕ್ತಿಗೆ. ದುರಂತವೆಂದರೆ ಅದನ್ನು ಕಂದಾಯ ಇಲಾಖೆ ಮಾನ್ಯ ಮಾಡುತ್ತದೆ. ಇದು ಖುಲ್ಲಂ ಖುಲ್ಲ ಕಾನೂನಿನ ತಲೆಯನ್ನು ಮೆಟ್ಟಿ ನಿಲ್ಲುವುದಾಗಿದೆ. ನೂರಾರು ಎಕರೆ ಆಸ್ತಿಯನ್ನು ಮಾಡಿರುವ, ಕಾಫಿ ಎಸ್ಟೇಟ್ ಹೊಂದಿರುವ ವ್ಯಕ್ತಿಗಳು ಭೂರಹಿತ ಬಡವ ಎಂದು ಕಂದಾಯ ಇಲಾಖೆಗೆ ಅರ್ಜಿ ಕೊಡ್ತಾರಲ್ಲ? ಇದನ್ನು ನಿಜವಾದ ಭೂ ರಹಿತ ದಲಿತ ವ್ಯಕ್ತಿ ನೋಡಿದರೆ ಆತ ಏನಾಗಬೇಕು ?’
“ಇದು ಇಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಬರ್ಬರ ಅನಾಗರಿಕ ವರ್ತನೆಗಳಾಗಿವೆ. ಇಲ್ಲಿ ಪ್ರಜಾಪ್ರಭುತ್ವ ಉಳಿಯಬೇಕೆಂದಾದರೆ ಜನರು ಧ್ವನಿ ಎತ್ತಬೇಕು. ನಿಜವಾಗಲೂ ಧರ್ಮದ ವಿರುದ್ಧವಾಗಿ ಹೋಗುತ್ತಿರುವುದು ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಮತ್ತು ಅವರ ಗ್ಯಾಂಗ್. ಆದರೆ ಇದು ತಪ್ಪು ಅಂತ ಹೇಳಿದ್ರೆ ಹಿಂದೂ ಧರ್ಮದ ವಿರುದ್ಧ ಹೇಳ್ತಾ ಇರೋದು ಎಂದು ಹೇಳುತ್ತಾರೆ. ಹಾಗಾದರೆ ಧರ್ಮ ಎಂದರೆನು? ಇವರು ಮಾಡುವುದೇ ಹಿಂದೂ ಧರ್ಮವಾಗಿದ್ದರೆ, ಅವರು ಮಾಡುತ್ತಿರುವುದೇ ಧರ್ಮ ಎನ್ನುವುದಾದರೆ ನಾನು ಹಿಂದೂ ಅಲ್ಲ. ಅಂತಹಾ ಹಿಂದೂ ಆಗಲಿಕ್ಕೂ ನನಗೆ ಆಸೆ ಇಲ್ಲ, ನನ್ನ ಹಿಂದೂ ಧರ್ಮ ಬೇರೆಯೇ ಇದೆ” ಎಂದು ಅವರು ನೋವಿನಿಂದ ಪ್ರತಿಕ್ರಿಯಿಸಿದ್ದಾರೆ. ಕರಾವಳಿಯ ಎಲ್ಲಾ ರಾಜಕಾರಣಿಗಳು, ಪಕ್ಷಭೇದ ಮರೆತು ವೀರೇಂದ್ರ ಹೆಗ್ಗಡೆ ಮತ್ತು ತಂಡದ ದುಷ್ಕೃತ್ಯಕ್ಕೆ ಸಹಾಯ ಮಾಡಿದ ಹಿನ್ನೆಲೆಯಲ್ಲಿ ಇದೀಗ ಸೌಜನ್ಯಾಗಾಗಿ ನೋಟಾ ಚಳವಳಿ ರೂಪುಗೊಂಡಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: Baba Vanga Predictions: ಬಾಬಾ ವಂಗಾ ಭವಿಷ್ಯವಾಣಿ; 2024 ರಲ್ಲಿ ಸಂಭವಿಸಲಿದೆ ದೊಡ್ಡ ಪ್ರಮಾದ













