Home Interesting ಮೇಕೆ ಕಿವಿಗಳನ್ನು ಮನುಷ್ಯನಿಗೆ ಜೋಡಿಸಿದ್ದು ಯಾಕೆ!??

ಮೇಕೆ ಕಿವಿಗಳನ್ನು ಮನುಷ್ಯನಿಗೆ ಜೋಡಿಸಿದ್ದು ಯಾಕೆ!??

Hindu neighbor gifts plot of land

Hindu neighbour gifts land to Muslim journalist

ವೈದ್ಯಕೀಯ ಲೋಕ ಒಂದಾದರೊಂದು ಹೊಸ ಪ್ರಯೋಗಗಳನ್ನು ಮಾಡುತ್ತ ಯಶಸ್ವಿಕಾಣುತ್ತಲೇ ಇದ್ದು, ಅಸಾಧ್ಯ ಎಂಬುದನ್ನು ಸಾಧಿಸುತ್ತಾ ಸುದ್ದಿಯಲ್ಲೇ ಇದೆ. ಇದೀಗ ಕೋಲ್ಕತ್ತಾದಲ್ಲಿ ವೈದ್ಯಕೀಯ ಲೋಕವನ್ನೇ ವಿಸ್ಮಯಕ್ಕೀಡುಮಾಡುವಂಥಹ ಶಸ್ತ್ರಚಿಕಿತ್ಸೆಯೊಂದು ನಡೆದಿದೆ.

ಹೌದು. ಮೇಕೆ ಕಿವಿಗಳನ್ನು ಮನುಷ್ಯರಿಗೆ ಅಳವಡಿಸುವ ಮೂಲಕ ವೈದ್ಯಕೀಯ ಲೋಕದಲ್ಲಿ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಹುಟ್ಟಿದಾಗಿನಿಂದಲೇ ಸೀಳು ತುಟಿಗಳಂತಹ ದೈಹಿಕ ವಿರೂಪಗಳನ್ನೂ ಹೊಂದಿದ್ದ 25 ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆಪರೇಷನ್‌ ಯಶಸ್ವಿಯಾದ ಬಳಿಕ ಅವರ ಮುಖದ ಸೌಂದರ್ಯವೂ ಮರಳಿದೆ.

ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಹಮ್ಮಿಕೊಳ್ಳಲಾಗಿತ್ತು. ಪಶ್ಚಿಮ ಬಂಗಾಳದ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ವೈದ್ಯರು ಮತ್ತು ವಿಜ್ಞಾನಿಗಳು ಈ ಯಶಸ್ಸನ್ನು ಸಾಧಿಸಿದ್ದಾರೆ. ಮೇಕೆಯ ಕಿವಿಯ ಕಾರ್ಟಿಲೆಜ್ ಅನ್ನು ಮಾನವ ದೇಹದ ವಿರೂಪಗಳನ್ನು ಸರಿಪಡಿಸಲು ಬಳಸಲಾಗಿದೆ.

“ಅನೇಕರು ಸೀಳು ತುಟಿ ಅಥವಾ ಹೊರಕಿವಿಯ ವಿರೂಪತೆಯಿಂದ ಜನಿಸುತ್ತಾರೆ. ಅಪಘಾತಗಳಿಂದ ಅನೇಕ ಬಾರಿ ದೈಹಿಕ ವಿರೂಪಗಳು ಸಂಭವಿಸುತ್ತವೆ. ಇದನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಚಿಕಿತ್ಸೆ ಸರಿಪಡಿಸಲಾಗುತ್ತದೆ. ಪ್ಲಾಸ್ಟಿಕ್ ಸರ್ಜರಿ ದುಬಾರಿ ಮತ್ತು ಸಂಕೀರ್ಣವಾಗಿದೆ. ಮಾನವ ದೇಹವು ದೀರ್ಘಕಾಲದವರೆಗೆ ಪ್ಲಾಸ್ಟಿಕ್ ಮತ್ತು ಸಿಲಿಕಾನ್ ಅಳವಡಿಸುವಿಕೆಯನ್ನು ಸ್ವೀಕರಿಸುವುದಿಲ್ಲ” ಎಂದು ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ರೂಪ್ ನಾರಾಯಣ ಭಟ್ಟಾಚಾರ್ಯ ಮಾಹಿತಿ ನೀಡಿದ್ದಾರೆ.

ಪಶುವೈದ್ಯಕೀಯ ಶಸ್ತ್ರಚಿಕಿತ್ಸಕ ಡಾ.ಶಮಿತ್ ನಂದಿ ಮತ್ತು ಸೂಕ್ಷ್ಮ ಜೀವವಿಜ್ಞಾನಿ ಡಾ.ಸಿದ್ಧಾರ್ಥ ಜೋರ್ಡರ್ ಮಾತನಾಡಿ, 2013 ರಿಂದ ಮಾನವ ದೇಹಕ್ಕೆ ಸೂಕ್ತವಾದ ಸಿಲಿಕಾನ್‌ ಮತ್ತು ಪ್ಲಾಸ್ಟಿಕ್ ಕಸಿಗಳಿಗೆ ಸುಲಭವಾಗಿ ಲಭ್ಯವಿರುವ, ಹೊಂದಿಕೊಳ್ಳುವ ದೃಢವಾದ ಪರ್ಯಾಯಕ್ಕಾಗಿ ಹುಡುಕಾಟ ನಡೆಯುತ್ತಿದೆ ಎಂದರು. ಅಷ್ಟೇ ಅಲ್ಲದೆ, ಮೇಕೆ ಕಿವಿಗಳನ್ನೇ ಏಕೆ ಆರಿಸಲಾಯ್ತು ಎಂಬ ಪ್ರಶ್ನೆಗೂ ತಜ್ಞರು ಉತ್ತರಿಸಿದ್ದಾರೆ. ಮೇಕೆ ಕಿವಿಗಳು ಸುಲಭವಾಗಿ ದೊರೆಯುತ್ತವೆ. ಅವುಗಳಿಂದ ಯಾವುದೇ ನಿರ್ದಿಷ್ಟ ಉಪಯೋಗವಿಲ್ಲ. ಇವುಗಳನ್ನು ಎಸೆಯಲಾಗುತ್ತದೆ. ಹಾಗಾಗಿ ಮೇಕೆ ಕಿವಿಗಳನ್ನು ಆಯ್ಕೆ ಮಾಡಲಾಗಿದೆಯಂತೆ.

ಈ ಪ್ರಕ್ರಿಯೆಯಲ್ಲಿ ಮೊದಲು ಮೇಕೆಯ ಕಿವಿಯಿಂದ ಕಾರ್ಟಿಲೆಜ್ (ಮೃದು ಮೂಳೆ) ತೆಗೆಯಲಾಗುತ್ತದೆ. ವಿವಿಧ ರಾಸಾಯನಿಕ ಪ್ರಕ್ರಿಯೆಗಳ ನಂತರವೂ ಕಾರ್ಟಿಲೆಜ್‌ನ ರಚನೆ ಮತ್ತು ಗುಣಮಟ್ಟವು ಹಾಗೆಯೇ ಉಳಿದಿದೆಯಂತೆ. ಮೇಕೆ ಕಿವಿಗಳಿಂದ ಕಾರ್ಟಿಲೆಜ್ ಅನ್ನು ಮಾನವ ದೇಹಕ್ಕೆ ಸೇರಿಸುವ ಮೊದಲು, ಅದನ್ನು ಪ್ರಾಣಿಗಳ ದೇಹಗಳ ಮೇಲೆ ಪರೀಕ್ಷಿಸಲಾಗಿದೆ. ಪರೀಕ್ಷೆ ಯಶಸ್ವಿಯಾದ ನಂತರ ಅದನ್ನು ದೈಹಿಕ ವಿರೂಪಗಳಿಂದ ಬಳಲುತ್ತಿರುವ 25 ರೋಗಿಗಳಿಗೆ ಅಳವಡಿಸಲಾಗಿದೆ.

ಮೇಕೆ ಕಿವಿಯ ಕಾರ್ಟಿಲೆಜ್ ಅನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು. ಈ ಯೋಜನೆಗೆ ಕೇಂದ್ರ ಜೈವಿಕ ತಂತ್ರಜ್ಞಾನ ಸಚಿವಾಲಯದಿಂದ ನಿಧಿಯನ್ನು ಸ್ವೀಕರಿಸಲಾಗಿದೆ. ಇನ್ನೂ ಮೂರು-ನಾಲ್ಕು ವರ್ಷಗಳ ಕಾಲ ಈ ಬಗ್ಗೆ ಸಂಶೋಧನೆ ಮುಂದುವರಿಯಲಿದೆ. ಸುಟ್ಟ ಗಾಯಗಳು ಮತ್ತು ಕುಷ್ಠರೋಗದ ಗಾಯಗಳಲ್ಲಿ ಮೇಕೆ ಕಾರ್ಟಿಲೆಜ್ ಅನ್ನು ಬಳಸಬಹುದೇ ಎಂಬ ಬಗ್ಗೆ ತಜ್ಞರು ಕೂಲಂಕುಷ ಪರಿಶೀಲನೆ ನಡೆಸಲಿದ್ದಾರೆ.