Home News ಭಗತ್ ಸಿಂಗ್ ಪುಸ್ತಕ ಓದುವುದು ತಪ್ಪೇ? -ವಿಠಲ ಮಲೆಕುಡಿಯ ಪ್ರಶ್ನೆ

ಭಗತ್ ಸಿಂಗ್ ಪುಸ್ತಕ ಓದುವುದು ತಪ್ಪೇ? -ವಿಠಲ ಮಲೆಕುಡಿಯ ಪ್ರಶ್ನೆ

Hindu neighbor gifts plot of land

Hindu neighbour gifts land to Muslim journalist

ಭಗತ್‌ಸಿಂಗ್ ಪುಸ್ತಕ ಓದುವುದು ದೇಶದ್ರೋಹವಲ್ಲ; ಓದಬಹುದು. ವಿಚಾರಣೆ ಸಂದರ್ಭದಲ್ಲಿಯೂ ತನಿಖಾ ಅಧಿಕಾರಿಗಳು ಕೂಡ ಭಗತ್ ಸಿಂಗ್ ಪುಸ್ತಕ ಓದುವುದು ಅಥವಾ ಇಟ್ಟುಕೊಳ್ಳುವುದು ತಪ್ಪಲ್ಲ ಎಂದಿದ್ದರು. ಅರಣ್ಯವಾಸಿಗಳು ಭಗತ್‌ಸಿಂಗ್ ಪುಸ್ತಕ ಓದುವುದು ತಪ್ಪೇ? ಸಕ್ಕರೆ, ಚಹಾಪುಡಿ ಇಟ್ಟುಕೊಳ್ಳುವುದು ಅಪರಾಧವೇ ಎಂದು ಪ್ರಕರಣದ ನಿರ್ದೋಷಿ ವಿಠಲ ಮಲೆಕುಡಿಯ ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದ್ದಾರೆ.

2012ರ ಮಾರ್ಚ್ 3ರಂದು ನನ್ನನ್ನು ಮತ್ತು ತಂದೆಯನ್ನು ಎಎನ್ಎಫ್ ತಂಡ ಮನೆಯಿಂದ ಬಂಧಿಸಿತ್ತು. ಅದರ ತೀರ್ಪು ಬಂದಿದ್ದು, ನಿರ್ದೋಷಿಗಳೆಂದು ಘೋಷಿಸಲಾಗಿದೆ. ಕುತ್ಲೂರು ಗ್ರಾಮವು ಪೊಲೀಸ್‌ಪೀಡಿತ ಪ್ರದೇಶವಾಗಿತ್ತು. ಅಲ್ಲಿಂದ ನಮ್ಮನ್ನು ಒಕ್ಕಲೆಬ್ಬಿಸಲು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ದೌರ್ಜನ್ಯ ನಡೆಸುತ್ತಿದ್ದರು. ಅಲ್ಲಿನ ಯಾರಿಗೂ ಉತ್ತಮ ಪರಿಸ್ಥಿತಿಯಲ್ಲಿ ಬದುಕಲು ಅಸಾಧ್ಯವಂತಿತ್ತು ಎಂದು ಹೇಳಿದರು.

ಅರಣ್ಯ ಪ್ರದೇಶದಿಂದ ಅಲ್ಲಿನ ಬುಡಕಟ್ಟು ಸಮುದಾಯದವರನ್ನು ಒಕ್ಕಲೆಬ್ಬಿಸಿ ಕಳಿಸುವುದು ಆಗಿನ ರಾಜ್ಯ ಸರಕಾರದ ಷಡ್ಯಂತ್ರವಾಗಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ 10 ಲಕ್ಷ ರೂ.ಗೆ ಒಕ್ಕಲು ಏಳಲ್ಲ. ವ್ಯಾಪಾರ ದೃಷ್ಟಿಯಿಂದ ಭೂಮಿಯನ್ನು ನೋಡಿರಲಿಲ್ಲ. ಅರಣ್ಯದಲ್ಲಿದ್ದರೂ ಹೊರಬರಲು ತಯಾರಿರಲಿಲ್ಲ. ಇದನ್ನು ಮನಗಂಡ ಪೊಲೀಸ್ ಇಲಾಖೆಯು ಜನರಿಗೆ ಕಿರುಕುಳ ನೀಡಲು ಆರಂಭಿಸಿತು. ಹಲವು ಒತ್ತಡಗಳು ಬಂದವು. ಇವುಗಳನ್ನು ವಿರೋಧಿಸಿದ್ದರಿಂದ ಸರಕಾರಕ್ಕೆ ಮುಜುಗರವಾಯಿತು. ಆ ಪ್ರದೇಶದಲ್ಲಿ ನಾನೋರ್ವನೇ ಸ್ನಾತಕೋತ್ತರ ಪದವಿ ತಲುಪಿದ್ದೆ. ನನ್ನನ್ನು ಮಟ್ಟ ಹಾಕಿದರೆ ಸಮಸ್ಯೆ ಬಗೆಹರಿಯಬಹುದು ಎಂದು ಇಲಾಖೆ ಆಲೋಚಿಸಿತ್ತು ಎಂದು ಕಾಣುತ್ತದೆ ಎಂದರು.

ಬಂಧನಕ್ಕೊಳಗಾಗಿ ಮೂರು ತಿಂಗಳು ಜೈಲಿನಲ್ಲಿದ್ದೆವು. ಕೈಕೊಳ ಹಾಕಿಯೇ ಮಂಗಳೂರು ವಿವಿಯಲ್ಲಿ ಪರೀಕ್ಷೆಗೆ ಅವಕಾಶ ನೀಡಿದ್ದರು. ಪ್ರಕರಣ ಸುಖಾಂತ್ಯ ಕಂಡಿದೆ. ಸುಮಾರು 9 ವರ್ಷಗಳ ನಂತರ ನ್ಯಾಯಾಲಯವು ನ್ಯಾಯ ಒದಗಿಸಿದೆ. ಇದೊಂದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಾತ್ಮಕ ಹೋರಾಟಕ್ಕೆ ಸಂದ ಜಯವಾಗಿದೆ. ಸಹಕರಿಸಿದ ಡಿವೈಎಫ್‌ಐ, ಸಿಪಿಎಂ, ಎಸ್‌ಎಫ್‌ಐ, ದಲಿತ ಸಂಘಟನೆ, ನ್ಯಾಯವಾದಿಗಳು, ದೇಶದ ಬಂಧುಗಳಿಗೆ ಧನ್ಯವಾದಗಳು ಎಂದು ಹೇಳಿದರು.