

ಬೆಳ್ತಂಗಡಿ: ತಾಲೂಕಿನಲ್ಲಿ ಚಿರತೆ ಹಾವಳಿ ನಿರಂತರವಾಗಿದ್ದು ಪಡಂಗಡಿ ಗ್ರಾಮದ ಪೊಯ್ಕೆಗುಡ್ಡದಲ್ಲಿ ಚಿರತೆಯು ಆಡನ್ನು ಕೊಂದು ಹಾಕಿದೆ. ಪಡಂಗಡಿ ಪೊಯ್ಕೆಗುಡ್ಡದಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಮನೆಯ ಸಮೀಪದ ಹಟ್ಟಿಯಲ್ಲಿ ಕಟ್ಟಿದ್ದ ಆಡನ್ನು ಚಿರತೆ ಕೊಂದು ಹಾಕಿದ್ದು ಅರ್ಥ ತಿಂದ ಬಳಿಕ ಬಿಟ್ಟು ಹೋಗಿದೆ.
ನಡ ಗ್ರಾಮ ಪಂಚಾಯತು ವ್ಯಾಪ್ತಿಯ ಕನ್ಯಾಡಿಯಲ್ಲಿ ಚಿರತೆ ಮತ್ತೆ ಪ್ರತ್ಯಕ್ಷವಾಗಿದೆ. ಸ್ಥಳೀಯ ನಿವಾಸಿ ರಮಾನಂದ ಶರ್ಮರ ಮನೆ ಸಮೀಪ ಗದ್ದೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ನಡ ಗ್ರಾಮದಲ್ಲಿ ಚಿರತೆ ವ್ಯಕ್ತಿಯೊಬ್ಬರ ಮೇಲೆ ಈ ಹಿಂದೆ ದಾಳಿ ನಡೆಸಿತ್ತು. ಜತೆಗೆ ಅರಣ್ಯ ಇಲಾಖೆಯ ಬೋನಿಗೆ ಅಲ್ಲೇ ಚಿರತೆಯೊಂದು ಬಿದ್ದಿತ್ತು. ಒಂದು ಚಿರತೆಯನ್ನು ಹಿಡಿದ ಸಂದರ್ಭ ಕಾಟ ತಪ್ಪಿತು ಅಂತ ಜನರು ಮಾತಾಡುವ ಹೊತ್ತಲ್ಲಿ, ಮತ್ತೆ ಹೊಸ ಚಿರತೆಗಳು ನಾಡಿಗೆ ಇಳಿದು ಓಡಾಟ ನಡೆಸುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.













