

Bantwala: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಜಿಪನಾಡು ಗ್ರಾಮದ ದೇರಾಜೆ ಎಂಬಲ್ಲಿ ಯುವಕರಿಬ್ಬರ ಮೇಲೆ ತಲವಾರು ದಾಳಿ ಯತ್ನ ನಡೆದಿದೆ ಎಂದು ರಾತ್ರಿ ಸುಮಾರು 10 ಗಂಟೆ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ವೈರಲ್ ಆಗಿತ್ತು. ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ನೆರೆದಿದ್ದ ಜನರನ್ನು ಚದುರಿಸಿ ತನಿಖೆ ಕೈಗೊಂಡಿದ್ದಾರೆ.
ಘಟನೆ ಕುರಿತು ಪೊಲೀಸರು ಪ್ರಕರಣದ ಸಂಬಂಧ ಯುವಕನಿಂದ ಹೇಳಿಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ದೂರುದಾರ ಯುವಕ ಮೊಹಮ್ಮದ್ ಮುಕ್ಬುಲ್ (34) ಎಂಬುವವರು ಶುಕ್ರವಾರ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಸಂಬಂಧಿಯೊಬ್ಬರ ಸ್ಕೂಟರಿನಲ್ಲಿ ಸಹ ಪ್ರಯಾಣಿಕನಾಗಿ ಕುಳಿತು ಬೊಳ್ಯಾರ್ ಕಡೆಯಿಂದ ಮೆಲ್ಕಾರ್ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ದೇರಾಜೆ ಬಸ್ ನಿಲ್ದಾಣದ ಬಳಿ ತಲುಪಿದಾಗ ಅಲ್ಲಿ ಬೊಳ್ಯಾರ್ ಕಡೆಗೆ ಮುಖಮಾಡಿ ನಿಲ್ಲಿಸಿದ್ದ ಸ್ಕೂಟರಿನಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಹೆಲ್ಮೆಟ್ ಧರಿಸಿ ಕುಳಿತಿದ್ದರು. ಅದರಲ್ಲಿ ಓರ್ವ ದೂರುದಾರರು ತೆರಳುತ್ತಿದ್ದ ಸ್ಕೂಟರ್ ಕಡೆಗೆ ಓಡಿ ಬಂದಿದ್ದಾನೆ.
ಈ ವೇಳೆ ಆತನ ಕೈಯಲ್ಲಿ ತಲವಾರು ಅಥವಾ ಯಾವುದೇ ಮಾರಕಾಯುಧವನ್ನು ತಾನು ನೋಡಿಲ್ಲ. ವ್ಯಕ್ತಿ ಓಡಿ ಬರುತ್ತಿರುವುದನ್ನು ಗಮನಿಸಿದ ದೂರುದಾರರು ಸ್ಕೂಟರ್ ಚಾಲನೆ ಮಾಡುತ್ತಿದ್ದ ತನ್ನ ಸಂಬಂಧಿಕನಲ್ಲಿ ವೇಗವಾಗಿ ಹೋಗಲು ತಿಳಿಸಿದ್ದಾನೆ. ನಂತರ ಹಿಂತಿರುಗಿ ನೋಡದೇ ತನ್ನ ಮನೆಗೆ ಹೋಗಿ ಘಟನೆಯ ಕುರಿತು ತನ್ನ ತಂದೆಗೆ ಹೇಳಿದ್ದಾರೆ.
ವಾಟ್ಸಾಪ್‌ಗಳಲ್ಲಿ ಪ್ರಸಾರವಾಗುತ್ತಿರುವ ತಲವಾರು ದಾಳಿ ಎನ್ನುವ ಸುಳ್ಳು ಸುದ್ದಿಗಳಿಗೂ ತನಗೂ ಯಾವುದೇ ಸಂಬಂಧ ಇಲ್ಲ ತಾನು ಸ್ಥಳದಲ್ಲಿ ಜನರನ್ನು ಜಮಾವಣೆಗೊಳಿಸುರುವುದಿಲ್ಲ ಎಂದು ದೂರುದಾರ ಮುಕ್ಬುಲ್ ಅವರು ವಿಚಾರಣೆಯ ವೇಳೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿದೆ.













