

ಕೇರಳ ( ಕೋಝಿಕ್ಕೋಡ್) : ಆಹಾರ ಸೇವನೆಯಿಲ್ಲದೆ ಬದುಕಿದ್ದ ಹೀರಾ ರತನ್ ಮಾಣೆಕ್ ತಮ್ಮ 84 ನೇ ವಯಸ್ಸಿನಲ್ಲಿ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ.
ಸೂರ್ಯನ ಬೆಳಕಿನ ಶಕ್ತಿಯ ಪ್ರಚಾರಕ, ಹಾಗೂ ಗುಜರಾತಿನ ಉದ್ಯಮಿಯಾಗಿರುವ ಕೋಝಿಕೋಡ್ ನ ಚಕೋರತುಕುಲಂನಲ್ಲಿರುವ ತಮ್ಮ ಫ್ಲ್ಯಾಟ್ ನಲ್ಲಿ ಇವರು ನಿಧನರಾಗಿದ್ದಾರೆ.
ಬರೋಬ್ಬರಿ 27 ವರ್ಷಗಳಿಂದ ಅನ್ನಾಹಾರವಿಲ್ಲದೆ ಬದುಕಿದ್ದ ಮಾಣಿಕ್ ಅವರು ನಮ್ಮನ್ನು ಅಗಲಿದ್ದಾರೆ.
1995 ರಲ್ಲಿ ಈ ವಿಶಿಷ್ಟ ಉಪವಾಸದ ಪ್ರಯೋಗಕ್ಕೆ ಇವರು ಮುಂದಾಗಿದ್ದರು. ಸೌರಶಕ್ತಿ ಮತ್ತು ನೀರನ್ನು ಮಾತ್ರ ಬಳಸಿಕೊಂಡು ತಮ್ಮ ಬದುಕನ್ನು ಸಾಗಿಸುತ್ತಿದ್ದರು.
ದೇಹವು ಸೂರ್ಯನಿಂದ ಶಕ್ತಿಯನ್ನು ಪಡೆದುಕೊಂಡಾಗ ಅದು ಚಿಪ್ ಆಗಿ ಕಾರ್ಯನಿರ್ವಹಿಸುತ್ತದೆ ಹಾಗಾಗಿ ಸೂರ್ಯನಿಂದ ಪಡೆಯುವ ಶಕ್ತಿಯೊಂದಿಗೆ ಆಹಾರವಿಲ್ಲದೇ ಕೇವಲ ನೀರನ್ನು ಮಾತ್ರ ಕುಡಿಯುವುದರಿಂದ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ ಎಂದು ಮಾಣಿಕ್ ಹೇಳಿದ್ದರು. ಹಾಗೇ ಇದ್ದು ಅದನ್ನು ಸರಿ ಎಂದು ಸಾಬೀತು ಪಡಿಸಿದ್ದರು ಕೂಡಾ.
ಮಾಣಿಕ್ ಕುಟುಂಬ ಮೂಲತಃ ಗುಜರಾತಿನ ಕಚ್. ನಂತರ ಅಲ್ಲಿಂದ ವಲಸೆ ಬಂದು ಸೇರಿದ್ದು ಕೇರಳ. ಮಾಣಿಕ್ ಅವರು ಹುಟ್ಟಿಬೆಳೆದದ್ದು ಕೋಯಿಕ್ಕೋಡ್ ನಲ್ಲಿ. ಹಡಗು ಉದ್ಯಮಿಯಾಗಿದ್ದ ಮಾಣಿಕ್, 1962 ರಲ್ಲಿ ಪಾಂಡಿಚೇರಿಯ ಅರಬಿಂದೋ ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸೌರಶಕ್ತಿ ಚಿಕಿತ್ಸೆ ಬಗ್ಗೆ ತಿಳಿದುಕೊಂಡಿದ್ದರು. ಅನಂತರ ತಮ್ಮ ಸ್ವ ಆಸಕ್ತಿಯಿಂದ ಸೂರ್ಯನ ಧ್ಯಾನ ಮಾಡಲು ಪ್ರಾರಂಭಿಸಿದ್ದರು.













