

ಇತ್ತೀಚಿನ ವರ್ಷಗಳಲ್ಲಿ ಖಗೋಳ ಲೋಕದಲ್ಲಿ ಮಹಾನ್ ಕ್ರಾಂತಿಯೇ ನಡೆಯುತ್ತಿದೆ. ಅಸಾಧ್ಯ ಎಂದು ಭಾವಿಸಿದ್ದನ್ನು ಸಾಧ್ಯ ಮಾಡಲು ವಿಜ್ಞಾನಿಗಳು ಪಣತೊಟ್ಟು ಮಾಡಿಯೇ ತೀರುತ್ತೇವೆ ಎಂಬ ಹಠದಲ್ಲಿದ್ದಾರೆ. ಹಾಗೆಯೇ ಕಳೆದ ಮೂರು ದಶಕಗಳಿಂದ ನಡೆಯುತ್ತಿದ್ದ ಪ್ರಯತ್ನವೊಂದು ಶೀಘ್ರವೇ ಸಾಕಾರಗೊಳ್ಳಲಿದೆ.
ಹೌದು, ಬ್ರಹ್ಮಾಂಡ ಸೃಷ್ಟಿಯ ರಹಸ್ಯವನ್ನು ಬೇಧಿಸಲು ಟೈಮ್ ಮಷಿನ್ ಮಾದರಿಯ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಉಡಾವಣೆಗೆ ಫ್ರೆಂಚ್ ಗಯಾನದಲ್ಲಿ ಕೌಂಟ್‍ಡೌನ್ ಶುರುವಾಗಿದೆ. ಇದು ಯಶಸ್ವಿಯಾದಲ್ಲಿ ಮುಂದಿನ ನಾಲ್ಕು ಶತಮಾನಗಳಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಕೇವಲ 10 ವರ್ಷಗಳಲ್ಲಿ ತಿಳಿದುಕೊಳ್ಳಬಹುದಾಗಿದೆ.
ಅಮೆರಿಕದ ನಾಸಾ, ಯುರೋಪ್, ಕೆನಡಾ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ರೂಪಿಸಿದ್ದು, ಇದು ಹಬಲ್ ಟೆಲಿಸ್ಕೋಪ್‍ಗಿಂತಲೂ ಶಕ್ತಿಶಾಲಿಯಾಗಿದೆ. ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‍ಗೆ ಇನ್‍ಫ್ರಾರೆಡ್ ವಿಷನ್ ಮೂಲಕ 1350 ವರ್ಷಗಳ ಹಿಂದಕ್ಕೆ ಹೋಗಿ ಅಲ್ಲೇನು ನಡೆದಿದೆ ಎಂಬುದನ್ನು ತಿಳಿಸುವ ಅದ್ಭುತ ಸಾಮರ್ಥ್ಯ ಇರುವುದು ವಿಶೇಷ.
ಏನಿದರ ವಿಶೇಷತೆ??
ಹಬಲ್ ಟೆಲಿಸ್ಕೋಪ್‍ಗಿಂತ ಜೇಮ್ಸ್ ಟೆಲಿಸ್ಕೋಪ್ ವಿಸ್ತೀರ್ಣದಲ್ಲಿ ಎರಡೂವರೆ ಪಟ್ಟು ದೊಡ್ಡದು. ಕಾಂತಿಯನ್ನು ಗ್ರಹಿಸಲು ಅಳವಡಿಸಲಾದ ಪ್ರಧಾನ ಕನ್ನಡಿಯ ಅಗಲ 6.5 ಮೀಟರ್ ಇದೆ. ಈ ಪ್ರಧಾನ ಕನ್ನಡಿಯನ್ನು 18 ಷಟ್‍ಭುಜಾಕೃತಿಗಳಾಗಿ ವಿಂಗಡಿಸಿ ನಿರ್ಮಿಸಲಾಗಿದೆ. ಉಡಾವಣೆ ವೇಳೆ ಈ ಕನ್ನಡಿ ಮಡಚಿಟ್ಟ ಸ್ಥಿತಿಯಲ್ಲಿ ಇರುತ್ತದೆ. ಗಮ್ಯ ಸೇರಿದ ನಂತರ ತೆರೆದುಕೊಳ್ಳಲಿದೆ. ಸೂರ್ಯನ ಕಡೆ ಇರುವ ಟೆಲಿಸ್ಕೋಪ್ ಭಾಗ 22 ಮೀಟರ್ ಉದ್ದವಿದ್ದು ಇದು 85 ಡಿಗ್ರಿವರೆಗೂ ಬಿಸಿಯೇರಬಹುದು. ಟೆಲಿಸ್ಕೋಪ್‍ಗೆ ಆಗುವ ಸಂಭಾವ್ಯ ಹಾನಿ ತಡೆಯಲು ಏಳು ಸುತ್ತಿನ ರಕ್ಷಣಾ ಕವಚ ನಿರ್ಮಾಣ ಮಾಡಲಾಗಿದೆ.
ಸೂರ್ಯನಿಗೆ ವಿರುದ್ಧವಿರುವ ಭಾಗ -233 ಡಿಗ್ರಿ ಸೆಂಟಿಗ್ರೇಡ್ ಇದ್ದು ಅತೀಶೀತಲವಾಗಿರುತ್ತದೆ. 40 ಕಿಲೋಮೀಟರ್ ದೂರದಲ್ಲಿರುವ ಒಂದು ನಾಣ್ಯವನ್ನು ಸ್ಪಷ್ಟವಾಗಿ ತೋರಿಸುವ ಸಾಮರ್ಥ್ಯ ಈ ಉಪಗ್ರಹಕ್ಕಿರುವುದು ತುಂಬಾ ವಿಶೇಷವಾಗಿದೆ.
ವಿಶ್ವಸೃಷ್ಟಿಯ ಆರಂಭಿಕ ದಿನಗಳಲ್ಲಿ ನಕ್ಷತ್ರಗಳು, ನಕ್ಷತ್ರ ಮಂಡಲಗಳ ಹುಟ್ಟು, ಅವುಗಳ ಅಂತ್ಯ ಹೇಗೆ ಆಯಿತು ಎಂಬುದನ್ನು ತಿಳಿದುಕೊಳ್ಳಲು ಇದು ಸಹಾಯಕವಾಗಲಿದೆ. ಇದನ್ನು ಕೆಲವರು ನೆಕ್ಸ್ಟ್ ಜನೆರೇಷನ್ ಸ್ಪೇಸ್ ಟೆಲಿಸ್ಕೋಪ್ ಎಂದು ಕರೆಯುತ್ತಾರೆ. 2007ರಲ್ಲೇ ಇದನ್ನು ಪ್ರಯೋಗಿಸಲು ಸಿದ್ಧತೆ ನಡೆದಿತ್ತು. ಆದರೆ ಇದು ಸಾಧ್ಯನಾ ಎಂದು ತುಂಬಾ ಮಂದಿ ಅನುಮಾನಿಸಿದ್ದರು. ಇದರ ನಿರ್ಮಾಣಕ್ಕೆ ಆರಂಭದಲ್ಲಿ 50 ಕೋಟಿ ಡಾಲರ್ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗ 730 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ.
ಉಡಾವಣೆ ಆದ ನಂತರ ನಿಗದಿತ ಸ್ಥಳ ಸೇರಲು ಒಂದು ತಿಂಗಳು ಹಿಡಿಯುತ್ತದೆ. ಇದನ್ನು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಲಾಗಾಂಗ್ರೆ ಪಾಯಿಂಟ್ ಎಲ್2 ಬಳಿ ಸ್ಥಿರ ಮಾಡಲಾಗುತ್ತದೆ. ಇಲ್ಲಿಂದ ವಿಶ್ವವನ್ನು ತುಂಬಾ ಸ್ಪಷ್ಟವಾಗಿ ಗಮನಿಸಲು ಅವಕಾಶ ಇದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.













