

ಮಾನವ ದೇಹದ ಶೇ.70ರಷ್ಟು ಭಾಗವು ನೀರಿನಿಂದ ಆವೃತ್ತವಾಗಿದೆ. ಆಹಾರವಿಲ್ಲದೆ ಮೂರು ವಾರಗಳ ಕಾಲ ಬದುಕಿರಬಹುದು, ಅದರಲ್ಲೇನೂ ಅಚ್ಚರಿಯಿಲ್ಲ. ಆದರೆ ನೀರನ್ನು ಸೇವಿಸದೆ ಹೆಚ್ಚೆಂದರೆ ಒಂದು ವಾರ ಬದುಕುವುದು ಕಷ್ಟ. ಚಳಿಗಾಲದಲ್ಲಿ ಹೆಚ್ಚು ದಣಿವಾಗುವುದಿಲ್ಲ, ಹಾಗಾಗಿ ಜನರು ಕಡಿಮೆ ನೀರನ್ನು ಕುಡಿಯುತ್ತಾರೆ. ಇನ್ನು ಕೆಲವರು ನಾನಾ ಕಾರಣಗಳಿಂದ ಹೆಚ್ಚು ನೀರು ಕುಡಿಯುವುದಿಲ್ಲ. ಆದರೆ ಇದು ಆರೋಗ್ಯದ ಮೇಲೆ ಬಹು ದೊಡ್ಡ ಪರಿಣಾಮವನ್ನು ಬೀರುತ್ತದೆ. ಮುಖ್ಯವಾಗಿ ಮಹಿಳೆಯರ ದೇಹದಲ್ಲಿ ನೀರಿನ ಕೊರತೆಯಿಂದ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮಾನವನ ದೇಹದಲ್ಲಿ ಇಷ್ಟೊಂದು ಪ್ರಾಮುಖ್ಯತೆ ಪಡೆದಿರುವ ನೀರನ್ನು ದಿನವಿಡೀ ಕನಿಷ್ಠ 2 ರಿಂದ 3 ಲೀಟರ್ ನೀರು ಕುಡಿಯಬೇಕು. ಲೋಟಗಳ ಆಧಾರದಲ್ಲಿ ಹೇಳುವುದಾದರೆ ಕನಿಷ್ಠ 7-8 ಗ್ಲಾಸ್ ನೀರು ಕುಡಿದರೆ ಒಳ್ಳೆಯದು. ಈ ಮೂಲಕ ಶರೀರದ ಜಲೀಕರಣವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ.
ಚರ್ಮದ ಸಮಸ್ಯೆಗಳು:- ಮಹಿಳೆಯರು ತಮ್ಮ ಚರ್ಮದ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸುತ್ತಾರೆ. ದೇಹದಲ್ಲಿ ನೀರಿನ ಕೊರತೆಯು ಚರ್ಮದಲ್ಲಿ ಶುಷ್ಕತೆಯನ್ನು ಉಂಟುಮಾಡುತ್ತದೆ. ಕಡಿಮೆ ನೀರಿನ ಸೇವನೆಯ ಪರಿಣಾಮ ಒಣ ಚರ್ಮ, ಚರ್ಮ ಒಡೆಯುವುದು, ಮೊಡವೆಗಳು ಮತ್ತು ಸುಕ್ಕುಗಳು ಮುಂತಾದ ಚರ್ಮದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಮುಟ್ಟಿನ ತೊಂದರೆ:- ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದರಿಂದ ಮಹಿಳೆಯರಲ್ಲಿ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿರ್ಜಲೀಕರಣದಿಂದಾಗಿ, ಸ್ನಾಯುಗಳಲ್ಲಿ ಸೆಳೆತ ಉಂಟಾಗಬಹುದು. ಹೊಟ್ಟೆ ನೋವಿನ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಕಡಿಮೆ ನೀರು ಕುಡಿಯುವುದರಿಂದ ಪಿರಿಯಡ್ಸ್ ಅವಧಿಯು ದೀರ್ಘವಾಗುವುದು.
ಮೂತ್ರದ ಸೋಂಕು:- ಕಡಿಮೆ ನೀರನ್ನು ಕುಡಿಯುವುದರಿಂದ ಕಿಡ್ನಿ ಸಮಸ್ಯೆಗಳು ತಲೆದೋರುತ್ತದೆ. ಇದು ಮಹಿಳೆಯರಲ್ಲಿ ಮೂತ್ರದ ಸೋಂಕನ್ನು ಉಂಟುಮಾಡುತ್ತದೆ. ನಿರ್ಜಲೀಕರಣದಿಂದಾಗಿ, ಮೂತ್ರದ ಸೋಂಕಿನ ಅಪಾಯವು ಹೆಚ್ಚಾಗುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಮೂತ್ರದ ಸೋಂಕಿನ ಸಾಧ್ಯತೆ ಹೆಚ್ಚು.
ಭ್ರೂಣಕ್ಕೆ ಅಪಾಯ:- ಕಡಿಮೆ ನೀರು ಕುಡಿಯುವುದರಿಂದ ಗರ್ಭಿಣಿಯರು ಕೂಡಾ ತೊಂದರೆ ಅನುಭವಿಸಬೇಕಾಗುತ್ತದೆ. ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಿ ಆಮ್ನಿಯೋಟಿಕ್ ದ್ರವದ ಕೊರತೆ ಉಂಟಾಗುತ್ತದೆ. ಈ ದ್ರವದ ಕೊರತೆಯಿಂದಾಗಿ ಭ್ರೂಣಕ್ಕೆ ಅಪಾಯವನ್ನುಂಟುಮಾಡುತ್ತದೆ. ಗರ್ಭಿಣಿಯರಲ್ಲಿ ನೀರಿನ ಕೊರತೆಯಿಂದ ಸೋಂಕು ಹರಡುವ ಅಪಾಯವೂ ಹೆಚ್ಚು.













