

ಮೊನ್ನೆ ತಾನೆ ಮದುವೆಯಾದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ದಂಪತಿಗೆ ಇದೀಗ ಒಂದು ಶಾಕಿಂಗ್ ನ್ಯೂಸ್ ಕಾದಿದೆ. ಸ್ವರಾ ಅವರು ದಿಢೀರನೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ತಾವು ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ ಜೊತೆ ಮದುವೆಯಾದ ವಿಚಾರವನ್ನು ಬಹಿರಂಗ ಪಡಿಸಿದ್ದರು. ಈ ಮೂಲಕ ಎಲ್ಲರಿಗೂ ಏಕಾಏಕಿ ಶಾಕ್ ಕೊಟ್ಟಿದ್ದರು. ಅಲ್ಲದೆ ಅಣ್ಣ ಎಂದು ಕರೆದವನನ್ನೇ ಮದುವೆ ಆಗಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಟ್ರೋಲ್ ಗೂ ಕೂಡ ಗುರಿಯಾಗಿದ್ದರು. ಆದರೀಗ ಅವರಿಗೆ ಮದುವೆ ವಿಚಾರವಾಗಿ ಮತ್ತೊಂದು ಆತಂಕ ಎದುರಾಗಿದೆ.
ಹೌದು, ಸ್ವರಾ ಭಾಸ್ಕರ್ ದಂಪತಿಗೆ ಮುಸ್ಲಿಂ ಧರ್ಮಗುರುಗಳಿಂದ ಕಂಟಕವೊಂದು ಎದುರಾಗಿದ್ದು, ಅವರು ಇವರಿಬ್ಬರ ಮದುವೆಯನ್ನು ಅಸಿಂಧು ಎಂದು ಘೋಷಣೆ ಮಾಡಿದ್ದಾರೆ! ಈಗಾಗಲೇ ಸ್ವರಾ ಅವರು ಫಾಹದ್ ಅವರನ್ನು ಮದುವೆಯಾಗಿರುವುದು ಹಲವರ ಕಣ್ಣನ್ನು ಕೆಂಪು ಮಾಡಿದೆ. ಮುಸ್ಲಿಂ ಧರ್ಮದ ಯುವಕನನ್ನು ಮದುವೆಯಾಗಿರುವ ಕುರಿತು ಇದಾಗಲೇ ಅವರ ವಿರುದ್ಧ ಸಾಕಷ್ಟು ಕಮೆಂಟ್ಗಳು ಬರುತ್ತಿವೆ. ತಮ್ಮ ನೆಚ್ಚಿನ ನಟಿ ಈ ರೀತಿ ಅನ್ಯ ಧರ್ಮೀಯನನ್ನು ಮದುವೆಯಾಗಿರುವುದು ಸರಿಯಲ್ಲ ಎಂದು ಅನೇಕ ಅಭಿಮಾನಿಗಳು ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೇ ವೇಳೆ ಇಸ್ಲಾಮಿಕ್ ಧರ್ಮಗುರು ಈ ಮದುವೆಯನ್ನು ವಿರೋಧಿಸಿರುವುದು ಸ್ವರಾ ದಂಪತಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಚಿಕಾಗೋ ಮೂಲದ ನಿಯತಕಾಲಿಕದ ಸಂಪಾದಕ ಮತ್ತು ವಿದ್ವಾಂಸರಾಗಿರುವ ಡಾ ಯಾಸಿರ್ ನದೀಮ್ ಅಲ್ ವಾಜಿದಿ ಅವರು ಈ ಮದುವೆ ಅಮಾನ್ಯವಾಗಿದೆ. ಇಬ್ಬರೂ ಬೇರೆ ಧರ್ಮೀಯರಾಗಿದ್ದು, ವಿಭಿನ್ನ ನಂಬಿಕೆಗಳಿಂದ ಬಂದ ಕಾರಣ ಮದುವೆ ಅಸಿಂಧು ಎಂದು ಘೋಷಿಸಿದ್ದಾರೆ. ಅಂತರ್ಧರ್ಮೀಯ ವಿವಾಹ ಸರಿಯಲ್ಲ ಎಂಬುದಾಗಿ ಕಮೆಂಟ್ ಮಾಡಿದ್ದಾರೆ. ಮದುವೆಯ ಸಲುವಾಗಿಯಷ್ಟೇ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿದ್ದರೆ ಮಹಿಳೆಯ ಜೊತೆಗಿನ ಮದುವೆ ಸಿಂಧುವಾಗುವುದಿಲ್ಲ ಎಂದಿದ್ದಾರೆ.
ಆದರೆ ಇದರ ನಡುವೆ ಈ ವಿಚಾರವಾಗಿ, ಭಾರತದ ಪ್ರಸಿದ್ಧ ರೇಡಿಯೊ ನಿರೂಪಕ ಮತ್ತು ಕಾರ್ಯಕರ್ತ RJ ಸಯೆಮಾ ಈ ಸ್ವರಾ ಭಾಸ್ಕರ್ ಹಾಗೂ ಫಹಾದ್ ಝಿರಾರ್ ಅಹ್ಮದ್ ದಂಪತಿ ಪರ ನಿಂತು ಧ್ವನಿ ಎತ್ತಿದ್ದಾರೆ. ಧಾರ್ಮಿಕ ವಿದ್ವಾಂಸರು ಜನರ ವೈಯಕ್ತಿಕ ವಿಷಯಗಳ ಬಗ್ಗೆ ತೀರ್ಪು ನೀಡಬಾರದು. ಭಾರತದಂತಹ ದೇಶದಲ್ಲಿ, ಅಂತರ್‌ಧರ್ಮೀಯ ವಿವಾಹಗಳು ಇತ್ತೀಚೆಗೆ ಸಾಮಾನ್ಯವಾಗುತ್ತಿವೆ. ಆದರೆ ಇವು ಇನ್ನೂ ಅನುಮಾನ ಮತ್ತು ಹಗೆತನವನ್ನು ಎದುರಿಸುತ್ತಿವೆ. ಇಂಥ ಸಂದರ್ಭದಲ್ಲಿ ಇವರ ಮದುವೆಯನ್ನು ದೂಷಿಸುವುದು ಸರಿಯಲ್ಲ. ಧರ್ಮಗುರುಗಳು ಇಂತಹ ಮುದುವೆಗಳನ್ನು ಪ್ರೋತ್ಸಾಹಿಸಬೇಕೆ ವಿನಹ ವಿರೋಧಿಸಬಾರದು ಎಂದಿದ್ದಾರೆ.
ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಮದುವೆಯನ್ನು ವಿರೋಧಿಸಿದ ಧರ್ಮಗುರುಗಳ ವಿರುದ್ಧ ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿದ್ದಾರೆ. ಸಯೀನಾ ಎನ್ನುವವರು ಟ್ವಿಟ್ ಮಾಡಿ, ‘ಹೀಗೆ ಹೇಳಲು ನೀವು ಯಾರು ಎಂದು. ಅಲ್ಲಾ ಏನು ಹೇಳಿದ್ದಾರೆ ಎಂದು ನಿಮ್ಮನ್ನು ಯಾರಾದರೂ ಪ್ರಶ್ನಿಸಿದರೆ ಆಗ ಮಾತನಾಡಿ, ಅಲ್ಲಿಯವರೆಗೆ ಸುಮ್ಮನೆ ಇರುವುದೇ ಒಳ್ಳೆಯದು. ವಿನಾಕಾರಣ ಮದುವೆಯ ವಿಷಯದಲ್ಲಿ ತಲೆಹಾಕಬೇಡಿ’ ಎಂದು ಕಿಡಿ ಕಾರಿದ್ದಾರೆ. ಸಮರ್ ಖಾನ್ ಎಂಬುವವರು ‘ಧರ್ಮಗುರು ಮತ್ತು ಪ್ರಚಾರಕರು ಎಂದು ಹೇಳಿಕೊಂಡು ಬರುವ ಅನೇಕರು ವಿನಾಕಾರಣ ಎಲ್ಲಾ ವಿಷಯದಲ್ಲಿ ಮೂಗು ತೂರಿಸುವ ಕೆಲಸ ಮಾಡುತ್ತಾರೆ. ಇದನ್ನು ಖಂಡಿತವಾಗಿಯೂ ಒಪ್ಪುವಂಥದ್ದಲ್ಲ. ವೈಯಕ್ತಿಯ ವಿಷಯಗಳಲ್ಲಿ ಅವರ ಪಾಡಿಗೆ ಅವರನ್ನು ಬಿಟ್ಟುಬಿಡಬೇಕು’ ಎಂದಿದ್ದಾರೆ.
ಇದರೊಂದಿಗೆ ಸ್ವರಾ ದಂಪತಿಯ ಪರ ಧ್ವನಿ ಎತ್ತಿರುವ ರೇಡಿಯೋ ಜಾಕಿ (RJ) ಸಯೆಮಾ ಅವರ ಪರವಾಗಿ ನಿಂತಿದ್ದಾರೆ. ಅನೇಕ ಟ್ವಿಟ್ಟರ್ ಬಳಕೆದಾರರು ಸಯೆಮಾ ಅವರನ್ನು ಶ್ಲಾಘಿಸಿದ್ದಾರೆ. ಅವರ ಪರವಾಗಿ ಹಲವರು ಕಮೆಂಟ್ ಮಾಡಲು ಶುರು ಮಾಡಿದ್ದಾರೆ. ಇದೀಗ ಈ ಮದುವೆ ವಿರೋಧಿಸಿದ ಧರ್ಮಗುರುಗಳ ವಿಚಾರ ದೇಶದೆಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ.













