ವರ್ಷಕ್ಕೆ ಒಂದೇ ಬಾರಿ ಭಕ್ತರಿಗೆ ಪ್ರವೇಶವಿರುವ ಹಾಸನಾಂಬೆ ದೇವಾಲಯದ ಬಗ್ಗೆ ನಿಮಗೆ ಗೊತ್ತಾ ?!
ವರ್ಷಕ್ಕೆ ಕೇವಲ ಒಂದೇ ಬಾರಿ ಪ್ರವೇಶವಿರುವ ದೇವಾಲಯದ ಬಗ್ಗೆ ಕೇಳಿದ್ದೀರಾ! ಹೌದು, ಅಂತಹ ಒಂದು ದೇವಾಲಯವು ನಮ್ಮ ಕೂಗಳತೆಯ ದೂರದಲ್ಲಿ ಇದೆ ಗೊತ್ತಾ ?
ಅದುವೇ ಪ್ರಸಿದ್ಧ ಹಾಸನಾಂಬೆ ಕ್ಷೇತ್ರ.
ಈ ದೇವಾಲಯವು ಒಂದು ಪ್ರಸಿದ್ಧವಾದ, ಹಾಗೂ ವಿಭಿನ್ನವಾದ ದೇವಾಲಯವಾಗಿದೆ. ಈ ದೇವಾಲಯವು ಹಾಸನದಲ್ಲಿ ಇದ್ದು, ಇಲ್ಲಿ ಶಕ್ತಿ ದೇವಿಯಾದ ಅಂಭಾದೇವಿ ನೆಲೆಸಿದ್ದಾಳೆ. ಈ ದೇವಾಲಯವು 12 ನೇ ಶತಮಾನದಲ್ಲಿ ಸ್ಥಾಪಿತವಾಗಿದೆ. ಈ ದೇವಾಲಯ ವರ್ಷದಲ್ಲಿ ಒಂದೇ ಒಂದು ಬಾರಿ ದೀಪಾವಳಿಯ ಸಂದರ್ಭದಲ್ಲಿ ಮಾತ್ರ ಭಕ್ತರಿಗೆ ಪ್ರವೇಶ ವಿರುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಕೇವಲ 8 ದಿನ ಮಾತ್ರ ಈ ದೇವಾಲಯಕ್ಕೆ ಪ್ರವೇಶವಿರುತ್ತದೆ !
ಈ ವರ್ಷ ಅಕ್ಟೋಬರ್ 28 ರಿಂದ ನವೆಂಬರ್ 5 ವರೆಗೆ ದೇವರ ದರ್ಶನಕ್ಕೆ ಭಕ್ತರಿಗೆ ಪ್ರವೇಶ ನೀಡಲಾಗಿತ್ತು. ದೇವಾಲಯಕ್ಕೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಹಾಗೂ ಸಂಜೆ 3ರಿಂದ ರಾತ್ರಿ 10.30 ವರೆಗೆ ಪ್ರವೇಶವಿರುತ್ತದೆ. 1000 ರೂಪಾಯಿ, 300 ರೂಪಾಯಿ ಟಿಕೆಟ್ ಹಾಗೂ ಉಚಿತ ಪ್ರವೇಶ ಕೂಡ ಲಭ್ಯವಿರುತ್ತದೆ.
ಹಾಸನಾಂಬ ದೇವಾಲಯವು ಹೊಯ್ಸಳ ಮಾದರಿಯ ದೇವಾಲಯವಾಗಿದೆ. ಹಾಸನಾಂಬ ದೇವಾಲಯವು ಅಶ್ವಿನಿ ಪೂರ್ಣಿಮೆಯ ದಿನ ತೆರೆದು ನಂತರ 8 ದಿನದ ನಂತರ ಬಲಿಪಾಡ್ಯಮಿಯ ದಿನ ಮುಚ್ಚಲಾಗುತ್ತದೆ. ಮತ್ತೆ ದೇವಾಲಯದ ಬಾಗಿಲು ತೆರೆದು ಕೊಳ್ಳುವುದು ಮತ್ತೆ ಒಂದು ವರ್ಷದ ನಂತರ, ಬರುವ ದೀಪಾವಳಿಗೆ.
ಸಪ್ತಮಾತೃಕೆಯಲ್ಲಿ ಒಂದು ದೇವರು ಇಲ್ಲಿ ನೆಲೆಸಿ ಹಾಸನಂಭೆ ಯಾಗಿ ಇಲ್ಲಿ ಭೂಮಿ ಮತ್ತು ಜನರನ್ನು ಕಾಪಾಡುತ್ತಾರೆ ಎಂಬ ನಂಬಿಕೆ ಇದೆ. ಇಲ್ಲಿ ಹೊತ್ತಿಸಲಾದ ನಂದಾದೀಪ ಇನ್ನೊಂದು ವರ್ಷ ದೇವಾಲಯ ತೆರೆಯುವಾಗ ಕೂಡ ಹಾಗೇ ಹೊತ್ತುತ್ತ ಇರುತ್ತದೆ ಎಂದು ಹೇಳಲಾಗುತ್ತದೆ.
ದೇವಾಲಯ ವರ್ಷಕ್ಕೆ ಒಂದೇ ಬಾರಿ ತೆರೆಯುವುದರಿಂದ ಲಕ್ಷಾಂತರ ಜನರು ದೂರದೂರದ ಊರಿನಿಂದ ದೇವಿಯ ದರ್ಶನಕ್ಕಾಗಿ ಬರುತ್ತಾರೆ. ವರ್ಷ ವರ್ಷ ಅಲ್ಲಿ ನೂಕು ನುಗ್ಗಲು ಸಾಮಾನ್ಯ.
ಸುಮಾರು 12ನೇ ಶತಮಾನದಲ್ಲಿ ಹಾಸನದ ಚನ್ನಪಟ್ಟಣ ಪಾಳೆಗಾರನಾದ ಶ್ರೀ ಕೃಷ್ಣ ನಾಯ್ಕರು ಪ್ರಯಾಣ ನಡೆಸಿದಾಗ ಮಾರ್ಗ ಮಧ್ಯೆಯಲ್ಲಿ ಆದಿಶಕ್ತಿ ಸ್ವರೂಪಿಣಿಯಾಗಿ ದೇವರು ಪ್ರತ್ಯಕ್ಷಳಾದಳು. ಈ ವೇಳೆ ಆಕೆ ತಾನು ಇಲ್ಲಿ ಹುತ್ತದ ಸ್ವರೂಪದಲ್ಲಿ ನೆಲೆಸುವೆ. ಗುಡಿಯನ್ನು ಕಟ್ಟುವಂತೆ ಸೂಚನೆ ನೀಡಿದಳಂತೆ. ಅದರಂತೆ ಶ್ರೀ ಕೃಷ್ಣ ನಾಯ್ಕರು ದೇವಿಗೆ ಗುಡಿ ಕಟ್ಟಿಸಿದರು ಎನ್ನುವುದು ನಂಬಿಕೆ.
ಮಹಾಭಾರತದ ಪುರಣಾದ ಪ್ರಕಾರ
ಮಹಾಭಾರತದ ಅರ್ಜುನನ ಮೊಮ್ಮಗ ಜನಮೇಜಯ ಶಾಪಗ್ರಸ್ಥನಾಗಿದ್ದ ಕಾಲದಲ್ಲಿ ಇಲ್ಲಿ ನೆಲೆಸಿದ್ದ. ಆಗ ಈ ಸ್ಥಳಕ್ಕೆ ಸಿಂಹಾಸನಪುರಿ ಎಂಬ ಹೆಸರಿತ್ತು. ನಂತರ ಸಿಂಹಾಸನಪುರ ಆಡು ಮಾತಿನಿಂದ ಹಾಸನ ಎಂದಾಗಿದೆ ಎಂದು ನಂಬಲಾಗಿದೆ. ಇನ್ನು ಪುರಾಣಗಳಲ್ಲೂ ಸಿಂಹಾಸನಪುರಿ ಅಂದರೆ ಹಾಸನದ ಬಗ್ಗೆ ಉಲ್ಲೇಖಗಳಿವೆ.
ಸಪ್ತಮಾತೃಕೆಯರಾದ ವೈಷ್ಣವಿ, ಇಂದ್ರಾಣಿ, ಮಹೇಶ್ವರಿ, ಕುಮಾರಿ, ಬ್ರಾಹ್ಮೀದೇವಿ, ವರಾಹಿ ಮತ್ತು ಚಾಮುಂಡಿ ವಾರಣಾಸಿ ಕಡೆಯಿಂದ ದಕ್ಷಿಣದ ಕಡೆಗೆ ವಿಹಾರಕ್ಕೆ ಬಂದಾಗ ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ನೆಲೆಸಲು ನಿರ್ಧರಿಸಿದ ಕ್ಷೇತ್ರವೇ ಸಿಂಹಾಸನಪುರಿ ಅಂದರೆ ಹಾಸನ ಎಂದು ವರ್ಣಿಸಲಾಗಿದೆ. ಅವರುಗಳಲ್ಲಿ ವೈಷ್ಣವಿ, ಕುಮಾರಿ, ಮಹೇಶ್ವರಿಯರು ಹಾಸನಾಂಬ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ಹಾಗೂ ಬ್ರಾಹ್ಮೀದೇವಿಯು ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದಳು. ಇನ್ನುಳಿದ ದೇವತೆಯರಾದ ಚಾಮುಂಡಿ, ವರಾಹಿ, ಇಂದ್ರಾಣಿ ನಗರ ಮಧ್ಯ ಭಾಗದ ದೇವಿಗೆರೆಯ ಬಳಿ ನೆಲೆಸಿದರು ಎನ್ನುವ ಐತಿಹ್ಯ ಇದೆ.