ಕಾಣಿಯೂರಿನಲ್ಲಿ ಕಾಲಿರಿಸಿದೆ ಗೋವಾ-ಯಶವಂತಪುರ ಏಕ್ಸ್ ಪ್ರೆಸ್ ರೈಲು : ಅದ್ದೂರಿ ಸ್ವಾಗತ, ಕಾದಿದ್ದು ಕೇವಲ 23 ವರ್ಷ !

ಕಾಣಿಯೂರು: ನೂತನವಾಗಿ ಮಾ 7ರಂದು ಸಂಚಾರ ಆರಂಭಗೊಂಡಿರುವ ಮಂಗಳೂರಿನ ಪಡೀಲ್ ಜಂಕ್ಷನ್ ಮೂಲಕ ಹಾದು ಹೋಗುವ ವಾಸ್ಕೋ ಗೋವಾ-ಯಶವಂತಪುರ ವಿಶೇಷ ಎಕ್ಸ್‍ಪ್ರೆಸ್ ರೈಲಿಗೆ ಕಾಣಿಯೂರಿನಲ್ಲಿ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಶನಿವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ರೈಲ್ವೆ ಸಚಿವ ಸುರೇಶ್ ಅಂಗಡಿ, ಸಂಸದೆ ಶೋಭಾ ಕರಂದ್ಲಾಜೆ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡಿದರು. ಬಳಿಕ ಹೊರಟ ರೈಲು ಸಂಜೆ ವೇಳೆಗೆ ಕಾಣಿಯೂರಿಗೆ ತಲುಪಿದೆ.

ಕಾಣಿಯೂರು ರೈಲ್ವೆ ನಿಲ್ದಾಣವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ರಾಜ್ಯ ಹೆದ್ದಾರಿಗೆ ಅತೀ ಹತ್ತಿರದ ರೈಲ್ವೆ ನಿಲ್ದಾಣವಾಗಿರುವುದು ವಿಶೇಷವಾಗಿದೆ. ಮೀಟರ್ ಗೇಜ್ ಹಳಿ ಇರುವ ಸಮಯದಲ್ಲಿ ರಾತ್ರಿ ಕಾಣಿಯೂರಲ್ಲಿ ಬೆಂಗಳೂರು ಎಕ್ಸ್‍ಪ್ರೆಸ್ ರೈಲಿಗೆ ನಿಲುಗಡೆ ಇತ್ತು. ನಂತರ ಮೀಟರ್ ಗೇಜ್‍ನಿಂದ ಬ್ರಾಡ್ ಗೇಜ್‍ಗೆ ರೈಲ್ವೆ ಟ್ರಾಕ್ ಆದ ಬಳಿಕ ರೈಲು ನಿಲುಗಡೆ ಸ್ಥಗಿತಗೊಂಡಿತ್ತು. ಇದೀಗ ಉಡುಪಿ- ಚಿಕ್ಕಮಗಳೂರು ಸಂಸದರು, ಚಾರ್ವಾಕ ಗ್ರಾಮದ ಶೋಭಾ ಕರಂದ್ಲಾಜೆಯವರ ಸತತ ಪ್ರಯತ್ನದಿಂದ ಕಾಣಿಯೂರಿನಲ್ಲಿ ಹೊಸ ರೈಲಿಗೆ ನಿಲುಗಡೆ ಭಾಗ್ಯ ಸಿಕ್ಕಿದೆ. ರೈಲ್ವೆ ಸಚಿವ ಸುರೇಶ್ ಅಂಗಡಿಯವರು ಕಾಣಿಯೂರಿನಲ್ಲಿ ರೈಲು ನಿಲುಗಡೆ ಭಾಗ್ಯ ಒದಗಿಸುವ ಮೂಲಕ ಹಸಿರು ನಿಶಾನೆ ತೋರಿದ್ದಾರೆ. ಸುಮಾರು 23 ವರ್ಷಗಳ ನಂತರ ಎಕ್ಸ್‍ಪ್ರೆಸ್ ರೈಲು ಕಾಣಿಯೂರಿನಲ್ಲಿ ನಿಲುಗಡೆಯಾಗುತ್ತಿರುವುದರಿಂದ ಕಾಣಿಯೂರಿನ ಜನತೆ ಸಂಭ್ರಮ ಆಚರಿಸಿದರು. ಇತರ ಎಕ್ಸ್‍ಪ್ರೆಸ್ ರೈಲುಗಳು ಕಾಣಿಯೂರಿನಲ್ಲಿ ನಿಲ್ಲುವ ನಿರೀಕ್ಷೆಯಲ್ಲಿಯೂ ಈ ಭಾಗದ ಜನತೆ ಇದ್ದಾರೆ.

ಕಾಣಿಯೂರಿಗೆ ನೂತನ ರೈಲು ಆಗಮಿಸುವ ಸಂದರ್ಭದಲ್ಲಿ ಬೆಳಂದೂರು ಜಿ.ಪಂ, ಸದಸ್ಯೆ ಪ್ರಮೀಳಾ ಜನಾರ್ದನ, ತಾ.ಪಂ, ಉಪಾಧ್ಯಕ್ಷೆ ಲಲಿತಾ ಈಶ್ವರ, ಕಾಣಿಯೂರು ಗ್ರಾ.ಪಂ, ಅಧ್ಯಕ್ಷೆ ಮಾಧವಿ ಕೋಡಂದೂರು, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮದೋಡಿ, ಸುಳ್ಯ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸುಳ್ಯ ಬಿಜೆಪಿ ಮಂಡಲ ಸಮಿತಿ ಸದಸ್ಯ ಗಣೇಶ್ ಉದುನಡ್ಕ, ಜಿಲ್ಲಾ ಜನತಾ ಬಜಾರ್ ಅಧ್ಯಕ್ಷ ಉದಯ ರೈ ಮಾದೋಡಿ, ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು, ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆನಂದ ಬನೇರಿ, ಕಾಣಿಯೂರು ಬಿ.ಕೆ ಕಾಂಪ್ಲೇಕ್ಸ್ ಮಾಲಕ ಪ್ರದೀಪ್ ಬೊಬ್ಬೆಕೇರಿ, ಕಾಣಿಯೂರು ವಿಶ್ವಜ್ಞ ಯುವಕ ಮಂಡಲದ ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಅಧ್ಯಕ್ಷ ವಾಸುದೇವ ತೋಟ, ರಾಮಣ್ಣ ಗೌಡ ಮುಗರಂಜ, ಪುಟ್ಟಣ್ಣ ಗೌಡ ಮುಗರಂಜ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಮಾಜಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ, ಲಕ್ಷ್ಮಣ ಗೌಡ ಮುಗರಂಜ ಸೇರಿದಂತೆ ಗ್ರಾ.ಪಂ, ಸದಸ್ಯರುಗಳು, ಸಹಕಾರ ಸಂಘಗಳ ನಿರ್ದೇಶಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನೂತನ ರೈಲು ನಿಲುಗಡೆಗೆ ಶ್ರಮಿಸಿದ ಸಂಸದೆ ಶೋಭಾ ಕರಂದ್ಲಾಜೆ ಪರವಾಗಿ ಅವರ ಸಹೋದರ ಲಕ್ಷ್ಮಣ ಕರಂದ್ಲಾಜೆ, ಕಾಣಿಯೂರು ಗ್ರಾ.ಪಂ, ಸದಸ್ಯ ಗಣೇಶ್ ಉದುನಡ್ಕ ಇವರಿಗೆ ಹೂಗುಚ್ಚ ನೀಡಿ ಅಭಿನಂದಿಸಲಾಯಿತು.

Leave A Reply

Your email address will not be published.