ಮಂಗಳೂರು : ತಡರಾತ್ರಿ ಎರಡು ತಂಡಗಳ ನಡುವೆ ಮಾರಾಮಾರಿ, ಮಧ್ಯ ಪ್ರವೇಶಿಸಿದ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ತಳ್ಳಿದ ಆರೋಪಿಗಳು, ಏಳು ಮಂದಿಯ ಬಂಧನ

Share the Article

ಶನಿವಾರ ತಡರಾತ್ರಿ ಎರಡು ತಂಡಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಮಧ್ಯೆ ಪ್ರವೇಶಿದ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ತಳ್ಳಿ ಹಾಕಿರುವ ಘಟನೆ ಮಂಗಳೂರು ನಗರದ ಬಳ್ಳಾಲ್ ಬಾಗ್ ಪ್ರದೇಶದಲ್ಲಿ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧೀರಜ್ ಶೆಟ್ಟಿ, ರಕ್ಷಿತ್ ಕೆ., ರೋಹಿತ್ ಶೆಟ್ಟಿ, ಹರ್ಷಿತ್, ಕೀರ್ತಿರಾಜ್, ವಿವೇಕ್, ರಾಹುಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ತಡರಾತ್ರಿ 11.45ರ ಸುಮಾರಿಗೆ ಎರಡು ತಂಡಗಳ ಮಧ್ಯೆ ಬಳ್ಳಾಲ್ ಬಾಗ್ ಬಳಿ ರಸ್ತೆಯಲ್ಲಿಯೇ ಮಾರಕಾಯುಧಗಳನ್ನು ಹಿಡಿದು ಮಾರಾಮಾರಿ ನಡೆದಿತ್ತು. ತಕ್ಷಣ ಸ್ಥಳಕ್ಕೆ ಬರ್ಕೆ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಧಾವಿಸಿ ಹೊಡೆದಾಟ ನಡೆಸಿರುವ ತಂಡವನ್ನು ಸಮಾಧಾನ ಮಾಡಲೆತ್ನಿಸಿದ್ದಾರೆ.
ಈ ಸಂದರ್ಭ ಆರೋಪಿ ಧೀರಜ್ ಎಂಬಾತ ಸಮಾಧಾನ ಮಾಡಲೆತ್ನಿಸಿರುವ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ತಳ್ಳಿ, ಅವರ ಕೈಯ್ಯಲ್ಲಿದ್ದ ವಾಕಿಟಾಕಿಯನ್ನು ಕಿತ್ತೆಸೆದಿದ್ದಾನೆ. ಜೊತೆಗೆ ಉಳಿದ ಆರೋಪಿಗಳು ಅವರು ಮುಂದೆ ಹೋಗದಂತೆ ತಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂದರ್ಭ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆಯೇ ಕೆಲ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಆದರೂ ಪೊಲೀಸರು ಸ್ಥಳದಲ್ಲಿದ್ದ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Leave A Reply