ಮನೆಯಲ್ಲಿ ಹೆಂಡತಿಯ ಕಾಟ ತಾಳಲಾರದೆ, “ನನ್ನನ್ನು ಬಂಧಿಸಿ, ಜೈಲಿಗೆ ಹಾಕಿ, ನೆಮ್ಮದಿಯಾಗಿರ್ತೀನಿ ” ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಗಂಡ !!

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ, ನಗದು- ಕೋಟಿ ರೂಪಾಯಿ ಎಂಬ ಮಾತನ್ನು ಕೇಳಿದ್ದೇವೆ. ಮದುವೆಯಾಗುವವರೆಗೂ ಒಂದು ಗೋಳಾದರೆ ಮದುವೆ ಆದ ಮೇಲೆ ಒಂದು ಗೋಳು ಅಂತಾರೆ ಗಂಡಸರು. ಮದುವೆ ಆಗುವ ಮುನ್ನ ಹುಡುಗಿ ಸಿಕ್ಕರೆ ಸಾಕು ಅಂತಾರೆ. ಆಗ ಎಲ್ಲವೂ ಚಂದ ಕಾಣಿಸಿ, ಕೆಲಸ ಸರಾಗ. ಮದುವೆಯಾದ ಮೇಲೆ ಯಾಕಾದರೂ ಇವಳನ್ನು ಮದುವೆಯಾದೆ ಎಂದನ್ನಿಸುತ್ತದೆ. ಮತ್ತೊಂದಷ್ಟು ಸಮಯ ಕಳೆದ ನಂತರ ಇವಳಲ್ಲ, ಯಾರನ್ನೂ ಆಗಬಾರದಿತ್ತು ಅನ್ನಿಸೋಕೆ ಆರಂಭ ಆಗ್ತದೆ. ಇದು ಸಮಸ್ಯೆ ಒಂದು ನಿನ್ನೆಯದಲ್ಲ. ಹಾಗಂತ ಈ ರೀತಿ ಎಲ್ಲಾ ಗಂಡಸರು ಯೋಚಿಸುವುದಿಲ್ಲ. ಕೆಲವರಿಗೆ ಮಾತ್ರ ಇದು ಅನ್ವಯವಾಗುತ್ತದೆ. ನಿಜಾ ಹೇಳಬೇಕೆಂದರೆ, ಅದು ಕೆಲವರಲ್ಲ, ಹಲವರ ಮನದ ದುಮ್ಮಾನ.

ಇಲ್ಲೊಂದು ಪ್ರಕರಣ ನೋಡಿದರೆ ನಗ್ಬೇಕೋ, ಅಳಬೇಕೋ? ಅನ್ನುವುದೇ ತಿಳಿಯುವುದಿಲ್ಲ. ಗಂಡ-ಹೆಂಡತಿ ಜಗಳ ಉಂಡು ಮಲಗೋವರೆಗೆ ಅನ್ನುವುದು ತಿಳಿದಿದೆ. ದಾಂಪತ್ಯದಲ್ಲಿ ಸಣ್ಣ ಪುಟ್ಟ ಜಗಳ ಆಗುವುದು ಸಹಜ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು. ಬಹುತೇಕ ಪ್ರಕರಣಗಳಲ್ಲಿ ಗಂಡನ ಕಾಟ ತಾಳಲಾರದೇ ಹೆಂಡತಿ ಪೊಲೀಸ್​ ಠಾಣೆಗೆ ಹೋಗಿ ದೂರು ನೀಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿ ವ್ಯಕ್ತಿಯೊಬ್ಬ ಮನೆಯಲ್ಲಿ ಹೆಂಡತಿ ಕಾಟಕ್ಕೆ ಬೇಸತ್ತು ಪೊಲೀಸರ ಬಳಿ ಹೋಗಿ ಏನು ಕೇಳಿದ್ದಾನೆ ಗೊತ್ತಾ?

ಇಲ್ಲಿ ಗಂಡ ಪೊಲೀಸ್​ ಠಾಣೆ ಮೇಟ್ಟಿಲೇರಿದ್ದಾನೆ, ಅಂದರೆ ಹೆಂಡತಿ ವಿರುದ್ದ ದೂರು ನೀಡಲು ಹೋಗಿರುತ್ತಾನೆ ಎಂದುಕೊಂಡರೇ ನಿಮ್ಮ ಕಲ್ಪನೆ ತಪ್ಪು. ಹಾಗಾದರೆ ವಿಚ್ಛೇದನ ಕೊಡುವಂತೆ ಕೇಳಿಕೊಂಡಿದ್ದಾನೆ ಎಂದು ನೀವಂದುಕೊಂಡರೆ ಅದು ಕೂಡ ತಪ್ಪು. ಆ ವ್ಯಕ್ತಿ ಪೊಲೀಸ್ ಠಾಣೆಗೆ ತೆರಳಿ ದಯವಿಟ್ಟು ನನ್ನನ್ನು ಬಂಧಿಸಿ ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾನೆ. `ಮನೆಯಲ್ಲಿ ಹೆಂಡತಿ ಹೆಚ್ಚು ಕಾಟ ಕೊಡುತ್ತಿದ್ದಾಳೆ. ಹೀಗಾಗಿ ನನ್ನನ್ನು ಬಂಧಿಸಿ, ಜೈಲಿಗೆ ಹಾಕಿ. ಅಲ್ಲಾದರೂ ನೆಮ್ಮದಿಯಿಂದ ಇರುತ್ತೇನೆ’ ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾನೆ.

ಹೀಗೆ ಪೊಲೀಸರ ಬಳಿ ಪತಿರಾಯ ಹೋಗಿ ಮನವಿ ಮಾಡಿಕೊಳ್ಳಲು ಒಂದು ಕಾರಣವಿದೆ. 30 ವರ್ಷಧ ಅಲ್ಬೇನಿಯನ್​ ಪ್ರಜೆಯಾದ ಆತ ಕಳೆದ ಕೆಲವು ತಿಂಗಳುಗಳಿಂದ ಮಾದಕವಸ್ತು ಸಂಬಂಧಿತ ಕೇಸ್​​ಗಳಲ್ಲಿ ಭಾಗಿಯಾಗಿದ್ದ. ಹೀಗಾಗಿ ಕೆಲ ತಿಂಗಳಿನಿಂದ ಆತನನ್ನು ಪೊಲೀಸರು ಗೃಹ ಬಂಧನದಲ್ಲಿರಿಸಿದ್ದರು. ಇನ್ನೂ ಆತನ ಗೃಹ ಬಂಧನ ಮುಗಿದಿರಲಿಲ್ಲ. ಆ ಮನೆಯಲ್ಲಿಯೇ ಪತ್ನಿ ಹಾಗೂ ಕುಟುಂಬಸ್ಥರೊಂದಿಗೆ ವಾಸಿಸುತ್ತಿದ್ದ. ಈ ವೇಳೆ ಪತ್ನಿ ಜೊತೆ ಕೆಲ ವಿಚಾರಕ್ಕೆ ಪದೇ ಪದೇ ಜಗಳವಾಗುತ್ತಿತ್ತು. ಇದು ಆತನಿಗೆ ತಡೆಯಲು ಆಗಲಿಲ್ಲ. ಹೀಗಾಗಿ ಮನೆಯನ್ನು ಬಿಟ್ಟು ಜೈಲಿನಲ್ಲಿರಲು ನಿರ್ಧರಿಸಿ, ಪೊಲೀಸ್​ ಠಾಣೆಗೆ ಬಂದು ಜೈಲಿಗೆ ಹಾಕಿ ಎಂದು ಮನವಿ ಮಾಡಿದ್ದಾನೆ. ಜೈಲು ರುಚಿ ನೋಡಿದ ಖೈದಿಗಳಿಗೆ ಮನೆಗಿಂತ ಜೈಲೇ ಇಷ್ಟ ಆಗೋದು ಮತ್ತು ಪತ್ನಿಗಿಂತ ಜೈಲ್ ವಾರ್ಡನ್ ಸಹ್ಯ ಆಗೋದ್ರಲ್ಲಿ ಆಶ್ಚರ್ಯ ಏನೂ ಇಲ್ಲ.

Leave A Reply

Your email address will not be published.