ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಮಾತನಾಡುವ ಸ್ಪರ್ಧೆ | ಪ್ರ-50 ಸಾವಿರ,ದ್ವಿ-30 ಸಾವಿರ,ತೃ-20 ಸಾವಿರ ರೂ. ಬಹುಮಾನ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ‘ಕನ್ನಡಕ್ಕಾಗಿ ನಾವು’ ಅಭಿಯಾನದ ಅಂಗವಾಗಿ ಕನ್ನಡ ಮಾತನಾಡುವ ಸ್ವರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯು ಸಾರ್ವಜನಿಕರಿಗಾಗಿ ನಡೆಯ ಲಿದ್ದು, ಎಲ್ಲ ಕನ್ನಡಿಗರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಜಿಲ್ಲಾ ಹಂತದ ಹಾಗೂ ಹೊರನಾಡಿನವರಿಗಾಗಿ ಇರುವ ಮೊದಲ ಹಂತದ ಸ್ಪರ್ಧೆಯಲ್ಲಿ ಅ.26ರ ರಾತ್ರಿ 10 ಗಂಟೆಯ ಒಳಗೆ ಕೇಳಲಾದ ಅಗತ್ಯ ಮಾಹಿತಿಯೊಂದಿಗೆ ಫೇಸ್‌ಬುಕ್ ಅಥವಾ ಯುಟ್ಯೂಬ್ ವೀಡಿಯೊ ಕೊಂಡಿಯನ್ನು ಗೂಗಲ್ ನಮೂನೆಯಲ್ಲಿ ನಮೂದಿಸತಕ್ಕದ್ದು.
ಫೇಸ್‌ಬುಕ್ ಅಥವಾ ಯುಟ್ಯೂಬ್‌ನಲ್ಲಿ ಯಾವುದಾದರೂ ಒಂದರಲ್ಲಿ ವೀಡಿಯೊ ಅಪ್‌ಲೋಡ್ ಮಾಡಿ ಅದರ ಕೊಂಡಿಯನ್ನು ನಮೂದಿಸಬೇಕಾಗುತ್ತದೆ. 31 ಜಿಲ್ಲೆಗಳು ಹಾಗೂ ಹೊರನಾಡಿನ ಒಂದು ವಿಭಾಗ ಸೇರಿ ಮೊದಲ ಹಂತದಲ್ಲಿ 32 ಸ್ಪರ್ಧಾ ವಲಯಗಳಿವೆ. ಇತರ ರಾಜ್ಯಗಳಲ್ಲಿರುವ ಕನ್ನಡಿಗರು ಮತ್ತು ವಿದೇಶಗಳಲ್ಲಿರುವ ಕನ್ನಡಿಗರನ್ನು ಹೊರನಾಡಿನ ವಿಭಾಗದಲ್ಲಿ ಪರಿಗಣಿಸಲಾಗುತ್ತದೆ.
ಪ್ರತಿ ಜಿಲ್ಲೆಯ ಸ್ಪರ್ಧಿಗಳ ಮಂಡನೆಯನ್ನು ಪರಿಶೀಲಿಸಿ, ಭಾಷೆ, ಶೈಲಿ, ಸಂವಹನ ಕೌಶಲ, ಸ್ಪಷ್ಟತೆಯ ಆಧಾರದಲ್ಲಿ ಮೊದಲನೇ ಎರಡನೇ ಮತ್ತು ಮೂರನೇ ಸ್ಥಾನ ಪಡೆದ ಸ್ಪರ್ಧಿಗಳನ್ನು ಜಿಲ್ಲಾ ಮಟ್ಟದ ಕ್ರಮವಾಗಿ 5 ಸಾವಿರ ರೂ., 3 ಸಾವಿರ ಮತ್ತು 2 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.
ಮೊದಲ ಹಂತದ ಸ್ಪರ್ಧೆಯಲ್ಲಿ ಭಾಗವಹಿಸುವವರು ಕನ್ನಡನಾಡಿನ ಜನಪದ ಬದುಕು, ಸಾಹಿತ್ಯ, ನಾಡು-ನುಡಿ ಅಥವಾ ಕಲೆ-ಸಂಸ್ಕತಿ ಈ ಯಾವುದಾದರೂ ವಿಷಯದ ಬಗ್ಗೆ ಕನ್ನಡದಲ್ಲಿ ಮಾತನಾಡಿದ 3-4 ನಿಮಿಷಗಳ ವಿಡಿಯೋವನ್ನು ತಮ್ಮದೇ ಫೇಸ್ಟುಕ್ ಗೋಡೆಯಲ್ಲಿ ಅಥವಾ ತಮ್ಮದೇ ಯುಟ್ಯೂಬ್ ವಾಹಿನಿಯಲ್ಲಿ ಅಪ್ಲೋಡ್ ಮಾಡಿ ವಿಡಿಯೋ ಕೊಂಡಿಯನ್ನು ಗೂಗಲ್ ನಮೂನೆ ಯಲ್ಲಿ ನಿಗದಿತ ಜಾಗದಲ್ಲಿ ನಮೂದಿಸತಕ್ಕದ್ದು. ನಾಲ್ಕು ನಿಮಿಷಕ್ಕಿಂತ ಹೆಚ್ಚಿನ ಅವಧಿಯ ವಿಡಿಯೋಗಳನ್ನು ಪರಿಗಣಿಸಲಾಗುವು ದಿಲ್ಲ. ಒಬ್ಬರು ಒಂದೇ ವಿಡಿಯೋ ದಾಖಲಿಸಬಹುದಾಗಿದೆ.
ಪ್ರತಿ ಜಿಲ್ಲೆಯಲ್ಲಿ ಮತ್ತು ಹೊರನಾಡಿನ ವಿಭಾಗದಲ್ಲಿ ಮೊದಲ ಸ್ಥಾನ ಪಡೆದವರಿಗೆ, ಅಂದರೆ ಒಟ್ಟು 32 ಸ್ಪರ್ಧಿಗಳಿಗೆ ಬೆಂಗಳೂರಿ ನಲ್ಲಿ ಅಂತಿಮ ಹಂತದ ಸ್ಪರ್ಧೆ ಏರ್ಪಡಿಸಲಾಗುವುದು. ಅಂತಿಮ ಹಂತದ ಈ ಸ್ಪರ್ಧೆಯಲ್ಲಿ ಕನ್ನಡನಾಡಿನ ಜನಪದ ಬದುಕು, ಸಾಹಿತ್ಯ, ನಾಡು-ನುಡಿ ಅಥವಾ ಕಲೆ-ಸಂಸ್ಕೃತಿ ಈ ಯಾವುದಾದರೂ ವಿಷಯದ ಬಗ್ಗೆ ವೇದಿಕೆಯಲ್ಲಿ ನಿಂತು ಸಭಿಕರ ಎದುರು ನಾಲ್ಕು ನಿಮಿಷಗಳ ಕಾಲ ಕನ್ನಡದಲ್ಲಿ ಸ್ಪರ್ಧಿಗಳು ಮಾತನಾಡಬೇಕಾಗುತ್ತದೆ.
ಅಂತಿಮ ಹಂತದ ಸ್ಪರ್ಧೆಯಲ್ಲಿ ಮೊದಲನೆ, ಎರಡನೆ ಹಾಗೂ ಮೂರನೆ ಸ್ಥಾನ ಪಡೆದ ಸ್ಪರ್ಧಿಗಳಿಗೆ ಕ್ರಮವಾಗಿ 50 ಸಾವಿರ ರೂ., 30 ಸಾವಿರ ಮತ್ತು 20 ಸಾವಿರ ಬಹುಮಾನ ನೀಡಲಾಗುವುದು.
ಬೆಂಗಳೂರಿನಲ್ಲಿ ನಡೆಯುವ ಅಂತಿಮ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ನಿಯಮಾವಳಿಯಂತೆ ವಾಸ್ತವಿಕ ಪ್ರಯಾಣ ವೆಚ್ಚ ಹಾಗೂ ಪ್ರಾಸಂಗಿಕ ವೆಚ್ಚ ನೀಡಲಾಗುವುದು. ರಾಜ್ಯದ ಹೊರಗಿನಿಂದ ಆಗಮಿಸುವ ಸ್ಪರ್ಧಿಗೆ ಪ್ರಾಸಂಗಿಕ ವೆಚ್ಚ ಹಾಗೂ ದೇಶದೊಳಗಿನ ಪ್ರಯಾಣಕ್ಕಾಗಿ ರೈಲಿನ ಸ್ಲಿಪರ್ ಬೋಗಿಯ ಪ್ರಯಾಣ ವೆಚ್ಚ ಮಾತ್ರ ಪಾವತಿಸಲಾಗುವುದು. ಬೆಂಗಳೂರಿನಲ್ಲಿ ನಡೆಯುವ ಅಂತಿಮ ಹಂತದ ಸ್ಪರ್ಧೆಯು ಇದೇ ಅ.30ರಂದು ನಡೆಸಲಾಗುವುದು.
ಸ್ಪರ್ಧಿಗಳು ಭಾಗವಹಿಸಲು ಈ ಗೂಗಲ್ ನಮೂನೆಯ ಕೊಂಡಿಯನ್ನು ಬಳಸಬೇಕು. ಈ ನಮೂನೆಯನ್ನು ಭರ್ತಿ ಮಾಡಲು ಆರಂಭಿಸುವ ಮೊದಲು ಸ್ಪರ್ಧಿಗಳು ತಮ್ಮ ಭಾವಚಿತ್ರ, ಆಧಾರ್ ಗುರುತುಪತ್ರ ಹಾಗೂ ಮೇಲೆ ಹೇಳಿದಂತೆ 3-4 ನಿಮಿಷಗಳ ವಿಡಿಯೋವನ್ನು ಜಾಲತಾಣಕ್ಕೇರಿಸಲು ಸಿದ್ಧ ಮಾಡಿ ಇಟ್ಟುಕೊಳ್ಳಬೇಕು.
ಯುಟ್ಯೂಬ್ ವಾಹಿನಿಗೆ ವಿಡಿಯೋ ಸೇರಿಸುವುದು, ಕೊಂಡಿಯನ್ನು ಅಂಟಿಸುವ ವಿಧಾನ ಹಾಗೂ ಫೇಸ್ಟುಕ್ ವಿಡಿಯೋ ಕೊಂಡಿ ಅಂಟಿಸುವ ವಿಧಾನಕ್ಕಾಗಿ ಇಲಾಖೆಯ ಜಾಲತಾಣದಲ್ಲಿ ನೀಡಲಾದ ಪಿಡಿಎಫ್ ಕೈಪಿಡಿಯನ್ನು ಗಮನಿಸಬಹುದಾಗಿದೆ ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.