ಕಡಬ ತಾಲೂಕು ಕಛೇರಿಯಲ್ಲಿ ನಡೆಯುತ್ತಿದೆ ಪರ್ಸಂಟೇಜ್ ಲಂಚ | ತಕ್ಷಣ ನಿಲ್ಲಿಸದಿದ್ದರೆ
ಕಂದಾಯ ಸಚಿವರ ಮನೆ ಎದುರಿನಲ್ಲಿ ಧರಣಿ ಸತ್ಯಾಗ್ರಹ -ಕಿಶೋರ್ ಶಿರಾಡಿ ಎಚ್ಚರಿಕೆ

ಕಡಬ: ಕಡಬ ತಾಲೂಕು ಕಛೇರಿ ಹಾಗೂ ಕಂದಾಯ ನಿರೀಕ್ಷಕರ ಕಛೇರಿಯಲ್ಲಿ ನಡೆಯುತ್ತಿರುವ ಪರ್ಸಂಟೇಜ್ ಲಂಚವನ್ನು ನಿಲ್ಲಿಸದಿದ್ದರೆ ಕೆಲವೇ ಸಮಯದಲ್ಲಿ ಕಂದಾಯ ಸಚಿವರ ಮನೆ ಮುಂದೆ ಧರಣಿ ಮಾಡುವುದು ಶತ ಸಿದ್ದ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಅವರು ಎಚ್ಚರಿಸಿದ್ದಾರೆ.

 

ಕಡಬ ತಾಲೂಕಿನ ಹಕ್ಕು ಪತ್ರ ವಂಚಿತ ನಿವೇಶನ ರಹಿತ ರೈತರ ಸಮಸ್ಯೆ ಬಗ್ಗೆ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಕಡಬ ತಾಲೂಕು ಇದರ ವತಿಯಿಂದ ಅ.25ರಂದು ಕಡಬ ತಹಸೀಲ್ದಾರ್ ಕಛೇರಿಯ ಎದುರಿನಲ್ಲಿ ನಡೆದ ಹಕ್ಕೋತ್ತಾಯ ಸಭೆಯಲ್ಲಿ ಮಾತನಾಡಿ, ಕಡಬ ಕಂದಾಯ ಇಲಾಖೆ ಮತ್ತು ಕಂದಾಯ ನಿರೀಕ್ಷಕರು ಅಕ್ರಮ ಸಕ್ರಮ, 94ಸಿ ಹಕ್ಕು ಪತ್ರ ಮಂಜೂರುಗೊಳಿಸಲು ಜಾಗದ ಬೆಲೆಯ 10 ಪರ್ಸಂಟ್ ಲಂಚ ಪಡೆದುಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದು ಕಡಬ ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಚಾರವನ್ನು ಕೇವಲ ಬಾಯಿ ಮಾತಿನಲ್ಲಿ ಮಾತ್ರ ಹೇಳುತ್ತಿಲ್ಲ, ಯಾರಾದರೂ ಇಲ್ಲ ಅಂತ ಸವಾಲು ಹಾಕಿದರೆ, ಅಥಾವ ಜಿಲ್ಲಾಧಿಕಾರಿಗಳು ಕೇಳುವುದಾದರೆ ಸಾಕ್ಷಿ ಸಮೇತ ಲಂಚ ನೀಡಿದವರ ಹೇಸರನ್ನು ಹೇಳಬಲ್ಲೆ ಎಂದು ಕಿಶೋರ್ ಶಿರಾಡಿ ಹೇಳಿದರು.

ಇಂದು ದಾಖಲೆ ಪತ್ರ ಸರಿಯಾಗಿದ್ದವನ ಕಡತ ಮಂಜೂರಾಗುವುದಿಲ್ಲ, ಆತ ಕಛೇರಿಗೆ ಮಧ್ಯವರ್ತಿ ಗಳನ್ನು ಬಿಟ್ಟು ನೇರವಾಗಿ ಬಂದರೆ ಕಛೇರಿಗೆ ಅಳೆದು ಅಳೆದು ಸಾಕಾಗುತ್ತದೆ, ಕೊನೆಗೆ ದಲ್ಲಾಳಿಗಳ ಮೂಲಕವೇ ಕೆಲಸ ಮಾಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಡಬ ಕಂದಾಯ ನಿರೀಕ್ಷಕರ ಮೇಲೆ ನೇರ ವಾಗ್ದಾಳಿ ನಡೆಸಿದ ಕಿಶೋರ್ ಅವರು, ಕಡಬ ಕಂದಾಯ ನಿರೀಕ್ಷಕರ ಆಸ್ತಿ ಮತ್ತು ಅವರಿಗೆ ಇರುವ ರಾಜಕೀಯ ಕೈವಾಡ ಎಲ್ಲಾ ತಿಳಿದಿದೆ.

ಅಕ್ರಮ ಸಕ್ರಮ ಹಕ್ಕು ಪತ್ರ ನೀಡಲು ಜಾಗದ ವ್ಯಾಲ್ಯೂವೇಶನ್ನ 10% ಹಣ ಲಂಚವಾಗಿ ಕೇಳುತ್ತಿದ್ದಾರೆ. ನೀವು ಯಾರ ಭೂಮಿಯನ್ನು ಹಕ್ಕು ಪತ್ರ ಮಾಡಿ ಕೊಡುತ್ತಿದ್ದಿರಾ? ನನಗೆ ಪೋಲಿಸ್ ಮತ್ತು ಮಾಧ್ಯಮದವರು ಸಹಕಾರ ನೀಡಿದರೆ 10 ನಿಮಿಷದಲ್ಲಿ ಕಡಬ ತಹಸೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರ ಭ್ರಷ್ಟಚಾರವನ್ನು ಬಯಲಿಗೆಳೆಯುತ್ತೇನೆ. ರೈತರನ್ನು ಹಿಂಸಿಸಿ ದುಡ್ಡು ಮಾಡಬೇಡಿ ಎಂದು ಕಿಶೋರ್ ಅವರು ಜಿಲ್ಲಾ ಪಂಚಾಯತ್ ಸದಸ್ಯರೋರ್ವರು ವರ್ಷದ ಹಿಂದೆ ಅಕ್ರಮ ಸಕ್ರಮದಲ್ಲಿ ಮಂಜೂರುಗೊಳಿಸಲು ಕಡಬದ ಆರ್.ಐ.ಅವರು ಮೂರು ಲಕ್ಷ ಡಿಮ್ಯಾಂಡ್ ಮಾಡಿದ್ದರು ಬಳಿಕ ವಕೀಲರೋರ್ವರ ಮಧ್ಯಸ್ಥಿಕೆಯಲ್ಲಿ ಅದನ್ನು 1 ಲಕ್ಷ ಕ್ಕೆ ಇಳಿಸಲಾಗಿ ಅದನ್ನು ನೀಡಿದ ಮೇಲೆ ಹಕ್ಕು ಪತ್ರ ಕೊಟ್ಟಿದ್ದರು, ಇನ್ನೊಂದೆಡೆ ನೆಲ್ಯಾಡಿ ಭಾಗದಲ್ಲಿ ಕಳೆದ 20 ವರ್ಷಗಳಿಂದ ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯರೋರ್ವರಿಂದ ಇದೇ ಆರ್.ಐ.ಯವರು 40 ಸಾವಿರ ಡಿಮ್ಯಾಂಡ್ ಮಾಡಿದ್ದರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೇಳಲಾಗಿತ್ತು ಆದರೂ 5000 ರೂ ಕೊಟ್ಟೆ ಹಕ್ಕು ಪತ್ರ ನೀಡಲಾಗಿತ್ತು, ಖಾತೆ ಬದಲಾವಣೆಗೆ 5000 ಕೊಡಬೇಕಾಗುತ್ತದೆ, ರಸ್ತೆ ಬದಿಯ ಜಾಗವಾದರೆ 50 ಸಾವಿರದ ಮೇಲೆ ಕೊಡಬೇಕಾಗುತ್ತದೆ, ಇಂತಹ ಎಷ್ಟೋ ಉದಾಹರಣೆಗಳಿವೆ, ಕಡಬ ತಾಲೂಕು ಕಛೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಚಾರವನ್ನು ನಿಲ್ಲಿಸಬೇಕು, ಇದನ್ನು ತಿಳಿದು ಮೌನವಾಗಿರುವ ಜಿಲ್ಲಾ ಉಸ್ತುವಾರಿ ಸಚಿವರ ನಡೆಯೂ ನಮಗೆ ಸಂಶಯ ತರುತ್ತಿದೆ ಎಂದು ಹೇಳಿದರು.

ಕಡಬ ಕಂದಾಯ ನಿರೀಕ್ಷಕರನ್ನು ಸಚಿವರು ವರ್ಗಾವಣೆ ಗೊಳಿಸಿದರೆ, ಅದನ್ನು ವಿರೋಧಿಸಿ ನ್ಯಾಯಾಲಯಕ್ಕೆ ಹೋಗಿ ರದ್ದು ಮಾಡಿಕೊಂಡು ಬರುತ್ತಾರೆ, ಯಾಕೆಂದರೆ ಕಡಬದಲ್ಲಿ ದುಡ್ಡು ಮಾಡುವಷ್ಟು ಬೇರೆಲ್ಲಿಯೂ ಆಗುದಿಲ್ವೇ ಎಂದು ಪ್ರಶ್ನಿಸಿದರು.

ಜಿ.ಪಂ. ಮಾಜಿ ಸದಸ್ಯ ಪಿ.ಪಿ.ವರ್ಗೀಸ್ ಅವರು ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಅಕ್ರಮ-ಸಕ್ರಮದಡಿಯಲ್ಲಿ ಎಷ್ಟೋ ಬಡವರಿಗೆ ಹಕ್ಕು ಪತ್ರ ನೀಡಲಾಗಿತ್ತು, ಆದರೆ ಇದೀಗ ರೈತರನ್ನು ಭಾಗಶಃ ಅರಣ್ಯದ ಹೆಸರಿನಲ್ಲಿ ಶೋಷಿಸಲಾಗುತ್ತಿದೆ, ಇಲ್ಲಿನ ಶಾಸಕರು ಇದೀಗ ಸಚಿವರಾಗಿದ್ದು ಕೆಳಗಿನಿಂದ ಮೇಲಿನ ತನಕವೂ ಬಿಜೆಪಿ ಸರಕಾರ,ಜನಪ್ರತಿನಿಧಿಗಳು ಇದ್ದಾರೆ , ಸಚಿವರು ಮನಸ್ಸು ಮಾಡಿದರೆ ಕಂದಾಯ ಹಾಗೂ ಅರಣ್ಯ ಇಲಾಖೆಯವರನ್ನು ಸೇರಿಸಿಕೊಂಡು ಜಂಟಿ ಸರ್ವೆ ನಡೆಸಲು ಆದೇಶ ನೀಡಬಹುದು ಎಂದು ಹೇಳಿದರು. ಕೂಡಲೇ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯತ್ ಆಗುವ ಮೊದಲು ಅರ್ಜಿ ನೀಡಿದವರಿಗಾದರೂ ಹಕ್ಕುಪತ್ರ ನೀಡಲಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಜಿ ಜಿಲ್ಲಾ ಪರಿಷತ್ ಸದಸ್ಯ ಸೈಯದ್ ಮೀರಾ ಸಾಹೇಬ್, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಬಾಲಕೃಷ್ಣ ಬಳ್ಳೇರಿ, ಮರ್ದಾಳ ಗ್ರಾ,ಪಂ. ಅಧ್ಯಕ್ಷ ಹರೀಶ್ ಕೊಡಂದೂರು ಮಾತನಾಡಿದರು.

ವೇದಿಕೆಯಲ್ಲಿ ಸುಬ್ರಹ್ಮಣ್ಯ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ನಿರ್ದೇಶಕ ರವೀಂದ್ರ ರುದ್ರಪಾದ, ಕಡಬ ಸಿ.ಎ. ಬ್ಯಾಂಕ್ ನಿರ್ದೇಶಕ ಸತೀಶ್ ನಾಕ್ ಭೂಮಿಕಾ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ, ಐತ್ತೂರು ಗ್ರಾ.ಪಂ. ಸದಸ್ಯ ಈರೇಶ್, ಮರ್ದಾಳ ಗ್ರಾ.ಪಂ. ಸದಸ್ಯರಾದ ಗಂಗಾಧರ ರೈ, ಕಡಬ ಪಟ್ಟಣ ಪಂಚಾಯತ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಜನಹಿತ ರಕ್ಷಣಾ ವೇದಿಕೆಯ ಪ್ರಮುಖರಾದ ರಾಮಕೃಷ್ಣ ಕಡಮ್ಮಾಜೆ, ವಾಸುದೇವ ನೇಲಡ್ಕ, ದುಗ್ಗಪ್ಪ ಮಾಸ್ಟರ್ ಅಂತಿಬೆಟ್ಟು, ಸತೀಶ್ಚಂದ್ರ ಶೆಟ್ಟಿ ಬೀರುಕ್ಕು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ | ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಎಲ್ಯಾಸ್ ಪಿಂಟೋ ಬಂಧನ

Leave A Reply

Your email address will not be published.