ಪತಿಯೊಂದಿಗೆ ಜೀವನ ನಡೆಸಲು ಎರಡು ವರ್ಷಗಳಿಂದ ಹೋರಾಟ ನಡೆಸಿದ ಆಸಿಯಾ ಹೋರಾಟದಿಂದ ಹಿಂದಕ್ಕೆ | ಸ್ವತಂತ್ರ ಬದುಕು ಕಟ್ಟಿ ಕೊಳ್ಳಲು ನಿರ್ಧರಿಸಿದ ಆಸಿಯಾ
ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಸುಳ್ಯದ ಇಬ್ರಾಹಿಂ ಕಟ್ಟೆಕಾರ್ ಹಾಗೂ ಆಸಿಯಾ ಬೀದಿ ರಂಪಾಟ ತಾರ್ಕಿಕ ಅಂತ್ಯ ಕಾಣುವತ್ತ ಹೊರಟಿದೆ. ಪತಿಯೊಂದಿಗೆ ವಾಸ ಮಾಡಲು ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಆಸಿಯಾ ಇದ್ದಕ್ಕಿದಂತೆ ತನ್ನ ಹೋರಾಟದಿಂದ ಹಿಂದೆ ಸರಿಯುವ ಮಾತುಗಳನ್ನು ಆಡಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನನ್ನೂ ವಿವಾಹವಾಗಿದ್ದ ಸುಳ್ಯದ ಇಬ್ರಾಹಿಂ ಕಟ್ಟೆಕಾರ್ ಅವರ ಮನ ಒಲಿಸಲು ಸಾಕಷ್ಟು ಪ್ರಯತ್ನ ಪಟ್ಟೆ. ಎರಡು ವರ್ಷ ಇದಕ್ಕಾಗಿ ಸಮಯ ವಿನಿಯೋಗಿಸಿದೆ. ಇನ್ನು ಅವರಿಗೂ ನನಗೂ ಯಾವುದೇ ಸಂಬಂಧ ಇಲ್ಲ. ನಾನು ಸ್ವತಂತ್ರವಾಗಿ ಜೀವನ ನಡೆಸಲು ನಿರ್ಧರಿಸಿದ್ದೇನೆ. ನಾನಿನ್ನು ಆಸಿಯಾ ಮಾತ್ರ ಎಂದು ತಿಳಿಸಿದ್ದಾರೆ.
ವಿವಿಧ ಹಿಂದು ಹಾಗು ಮುಸ್ಲಿಂ ಸಂಘಟನೆಗಳು, ಅಧಿಕಾರಿಗಳು, ಧಾರ್ಮಿಕ ಮುಖಂಡರು ನಮ್ಮನ್ನೂ ಒಂದು ಮಾಡಲು ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಹೋರಾಟದಿಂದ ಹಿಂದೆ ಸರಿದು ನನ್ನದೇ ಆದ ಸ್ವಂತ ಬದುಕು ಕಟ್ಟಿಕೊಳ್ಳುವುದಾಗಿ ಅವರು ತಿಳಿಸಿದರು
ಕೇರಳದ ಕಣ್ಣೂರಲ್ಲಿ ಕುಟುಂಬಸ್ಥರಿದ್ದು ನಾನು ಹಿಂದು ಧರ್ಮಕ್ಕೆ ಮರಳಿದರೆ ಸೇರಿಸಿಕೊಳ್ಳುವುದಾಗಿ ಹೇಳಿದರು. ಅದಕ್ಕೆ ನಾನು ಒಪ್ಪಿಲ್ಲ. ಸ್ವಲ್ಪ ಸಮಯ ಸುಳ್ಯದಲ್ಲಿದ್ದು ಮತ್ತೆ ಉದ್ಯೋಗಕ್ಕೆ ಸೇರಲು ನಿರ್ಧರಿಸಿದ್ದೇನೆ. ಸಮಾಜ ಸೇವೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಆಸಿಯಾ ಹೇಳಿದರು.
ಆಸಿಯಾಗೆ ನ್ಯಾಯ ಕೊಡಿಸಲು ಮುಸ್ಲಿಂ ಸಮುದಾಯದ ಮುಖಂಡರು,ಮೌಲ್ವಿಗಳು ಪ್ರಯತ್ನಿಸಿದರೂ…ಇಬ್ರಾಹಿಂನನ್ನು ಮನವೊಲಿಸಲು ಸಾಧ್ಯವಾಗದೇ ಹೋಯಿತು.
ಹಿಂದೂ ಧರ್ಮ ಬಿಟ್ಟು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಇಬ್ರಾಹಿಂ ಕಟ್ಟೆಕಾರ್‌ನಿಂದ ಮೋಸ ಹೋದ ಬಳಿಕ ಆಕೆಗೆ ಆದ ಸಂಕಷ್ಟಕ್ಕೆ ಸ್ಪಂದಿಸಲು ಹಿಂದೂ ಸಂಘಟನೆಗಳು ಮುಂದೆ ಬಂದರೂ ಆಕೆ ಮತ್ತೆ ಹಿಂದೂ ಧರ್ಮಕ್ಕೆ ಮರಳುವ ಇಚ್ಚೆ ಪಡದ ಹಿನ್ನೆಲೆಯಲ್ಲಿ ಅವರೂ ಕೈ ಚೆಲ್ಲಿ ಕೂರಬೇಕಾಯಿತು.
ಈಗ ಆಸೀಯಾ ಸತತ ಹೋರಾಟದ ಬಳಿಕವೂ ಶಕ್ತವಾಗದೇ ತನ್ನ ಬದುಕಿನ ದಾರಿಯನ್ನು ತಾನೇ ಹುಡುಕುಲು ಶುರು ಮಾಡಿದ್ದಾಳೆ..
ಏನಿದು ಪ್ರಕರಣ?
ಅಸಿಯಾ ಕೇರಳದ ಕಣ್ಣೂರಿನ ಹಿಂದೂ ಕುಟುಂಬವೊಂದರಲ್ಲಿ ಜನಿಸಿದ್ದು ಆಕೆಗೆ ಶಾಂತಿ ಜೂಬಿ ಎಂದು ಹೆಸರಿಡಲಾಗಿತ್ತು. ಹಿಂದೂ ಧರ್ಮಿಯರೊಬ್ಬರನ್ನು ಆಕೆ ಮದುವೆ ಕೂಡ ಆಗಿದ್ದರು. ಕೆಲ ವರ್ಷಗಳ ಹಿಂದೆ ಆಕೆಗೆ ಸುಳ್ಯದ ಕಟ್ಟೆಕಾರ್ ಕುಟುಂಬದ ಇಬ್ರಾಹಿಂ ಎಂಬವರ ಪರಿಚಯ ಫೇಸ್‌ಬುಕ್‌ನಲ್ಲಿ ಆಗಿತ್ತೆನ್ನಲಾಗಿದೆ. “ಪರಿಚಯ ಪ್ರೀತಿಗೆ ತಿರುಗಿ ಮೊದಲ ಪತಿಯನ್ನು ತೊರೆದು 2017ರಲ್ಲಿ ಮುಸ್ಲಿಂ ಸಂಪ್ರದಾಯದಂತೆ ಖಲೀಲ್ ರನ್ನು ನಿಖಾ ಆಗಿದ್ದೇನೆ ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರವಾಗಿ ಆಸಿಯಾ ಎಂದು ಹೆಸರು ಬದಲಿಸಿಕೊಂಡಿದೆ” ಎಂದು ಆಸಿಯಾ ಮಾಧ್ಯಮಗಳಿಗೆ ತಿಳಿಸಿದರು.
ಮದುವೆಯಾದ ಮೂರು ವರ್ಷಗಳ ನಂತರ ಇಬ್ರಾಹಿಂ ಏಕಾಏಕಿ ಮನೆಯಿಂದ ನಾಪತ್ತೆಯಾಗಿದ್ದು ಆಕೆ ಪತಿಯನ್ನು ಹುಡುಕಿಕೊಂಡು ಸುಳ್ಯ ಬಂದಿರುವುದಾಗಿಯೂ ಅಲ್ಲಿ ಇಬ್ರಾಹಿಂ ಮನೆಯವರು ತನ್ನನ್ನೂ ಮನೆಯಿಂದ ಹೊರಗೆ ಹಾಕಿದರು ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು.