ಮತ್ತೊಂದು ಅನೈತಿಕ ಪೊಲೀಸ್ ಗಿರಿ ಘಟನೆ ಬೆಳಕಿಗೆ | ಅನ್ಯಧರ್ಮದ ಯುವಕನ ಜೊತೆ ಸುತ್ತಾಡಿದ್ದಕ್ಕೆ 20 ಜನರಿಂದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ, ದೂರು ದಾಖಲು
ಬೆಳಗಾವಿಯಲ್ಲಿ ಅನೈತಿಕ ಪೊಲೀಸ್‌ಗಿರಿ ಘಟನೆಯೊಂದು ವರದಿಯಾಗಿದ್ದು, ಅನ್ಯಧರ್ಮದ ಯುವಕನ ಜೊತೆ ಯುವತಿ ಕಾಣಿಸಿಕೊಂಡಿದ್ದಕ್ಕೆ ಇಬ್ಬರನ್ನು ಥಳಿಸಿದ ಘಟನೆ ಬೆಳಕಿಗೆ ಬಂದಿದೆ.
ಅಕ್ಟೋಬರ್ 14ರಂದು ರಾಯಭಾಗದ ಯುವಕ ಮತ್ತು ಸಂಕೇಶ್ವರದ ಯುವತಿ ಬೆಳಗಾವಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ನಿಲ್ದಾಣದಲ್ಲಿದ್ದ ಆಟೋ ಚಾಲಕನಲ್ಲಿ ಉದ್ಯಾನವನಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದ್ದರು.
ಆಟೋ ಚಾಲಕ ಉದ್ಯಾನವನದ ಬದಲು ಅಮನ್ ನಗರದ ನಿರ್ಜನ ಪ್ರದೇಶದ ಹೊಲಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ತನ್ನ ಸ್ನೇಹಿತರ ಜೊತೆಗೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಬೇರೆ ಧರ್ಮದ ಯುವಕನ ಜೊತೆಗೆ ಓಡಾಡ್ತೀಯಾ ಎಂದು ಥಳಿಸಿದ್ದಾರೆ. ಅವರ ಬಳಿ ಇದ್ದ 20 ಸಾವಿರ ರೂ.ಮೌಲ್ಯದ ಮೊಬೈಲ್, 50 ಸಾವಿರ ರೂ. ನಗದು ಹಣ ಮತ್ತು ಆಧಾರ್ ಕಾರ್ಡ್, ಎಟಿಎಂ ಕಾರ್ಡ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಹಲ್ಲೆ ನಡೆಸಿದ ಬಳಿಕ ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಯುವತಿ 20 ಜನರು ನನ್ನ ಮೇಲೆ ರಾಡ್, ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಳು. ದೂರಿನ ಮೇರೆಗೆ ಬೆಳಗಾವಿ ನಗರದ ಆಟೋ ಚಾಲಕ, ದಾವತ್ ಕತೀಬ್, ಅಯುಬ್, ಯುಸೂಫ್ ಪಠಾಣ್ ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿದುಬಂದಿದೆ.