ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಬಂಧನ | ಕಾರಣ ಏನು ಗೊತ್ತಾ ?
ಜಾತಿ ನಿಂದನೆ ಆರೋಪದಡಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರನ್ನು ಹಿಸ್ಸಾರ್ ಪೊಲೀಸರು ಬಂಧಿಸಿದ್ದಾರೆ.
ವರ್ಷದ ಹಿಂದೆ ರೋಹಿತ್ ಶರ್ಮಾ ಜತೆ ಲೈವ್ ಚ್ಯಾಟಿಂಗ್ ಮಾಡುವ ವೇಳೆ ಪರಿಶಿಷ್ಟ ಜಾತಿಯ ಯುಜವೇಂದ್ರ ಚಹಲ್ ಅವರನ್ನು ಜಾತಿ ಕಾರಣಕ್ಕೆ ಹೀಗಳೆದಿದ್ದರು ಎನ್ನಲಾಗಿದೆ.
ಹೈಕೋರ್ಟ್ ಆದೇಶದ ಮೇರೆಗೆ ಚಂಡೀಗಡದಿಂದ ಹಿಸ್ಸಾರ್‌ಗೆ ಬಂದ ಯುವರಾಜ್ ಸಿಂಗ್ ಅವರನ್ನು ಅಲ್ಲಿನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದರು. ಹೈಕೋರ್ಟ್ನಲ್ಲಿ ಯುವರಾಜ್ ಸಿಂಗ್ ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.
ಬಿಡುಗಡೆಗೆ ಮುನ್ನ ಯುವರಾಜ್ ಸಿಂಗ್ ಅವರನ್ನು ಹಿಸ್ಸಾರ್ ಪೊಲೀಸರು ಕೆಲ ಗಂಟೆಗಳ ಕಾಲ ವಿಚಾರಣೆ ನಡೆಸಿರುವುದು ತಿಳಿದುಬಂದಿದೆ.
ಕಳೆದ ವರ್ಷ ರೋಹಿತ್ ಶರ್ಮಾ ಜತೆ ಸಂವಾದ ನಡೆಸುವ ವೇಳೆ ಯುಜವೇಂದ್ರ ಚಹಲ್ ಬಗ್ಗೆ ಮಾತನಾಡುತ್ತಾ ಅವರ ಜಾತಿ ನಿಂದನೆ ಮಾಡಿ ಯುವರಾಜ್ ಹೀಗಳೆದಿದ್ದರು. ಪರಿಶಿಷ್ಟ ಜಾತಿ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಪದಪ್ರಯೋಗ ಮಾಡಿದ್ದರು.
ದಲಿತ ಹಕ್ಕು ಹೋರಾಟಗಾರ ರಜತ್ ಕಲ್ಸನ್ ಎಂಬುವರು ಯುವರಾಜ್ ಸಿಂಗ್ ವಿರುದ್ಧ ಹಾನ್ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ನಾನು ಯಾವ ಸಮುದಾಯವನ್ನೂ ತುಚ್ಛವಾಗಿ ನೋಡುವುದಿಲ್ಲ. ನನ್ನಿಂದ ತಿಳಿಯದೇ ಆಡಿದ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಯುವರಾಜ್ ಸಿಂಗ್ ಹೇಳಿದ್ದರು.