ಯಕ್ಷಗಾನದ ಹಿರಿಯ ಕಲಾವಿದ ಮೊಳಹಳ್ಳಿ ಕೆ.ಅನಂತ ಕುಲಾಲ್ ಇನ್ನಿಲ್ಲ

ಯಕ್ಷಗಾನದ ಹಿರಿಯ ಕಲಾವಿದ ಮೊಳಹಳ್ಳಿ ಕೆ.ಅನಂತ ಕುಲಾಲ್ ಮಂಗಳವಾರ ತಡರಾತ್ರಿ ನಿಧನರಾದರು.

 

ಅಮೃತೇಶ್ವರಿ, ಹಿರಿಯಡ್ಕ, ಸಾಲಿಗ್ರಾಮ, ಪೇರ್ಡೂರು, ಹಾಲಾಡಿ, ಮಾರಣಕಟ್ಟೆ ಮೇಳಗಳಲ್ಲಿ ಯಕ್ಷ ತಿರುಗಾಟ ಪೂರೈಸಿದ ಇವರು ಮಾರಣಕಟ್ಟೆ ಮೇಳದಲ್ಲಿ ಪ್ರಧಾನ ಪುರುಷ ವೇಷಧಾರಿಯಾಗಿ ಕಲಾ ಸೇವೆಗೈಯುತ್ತಿದ್ದರು.

ಅನಂತ ಕುಲಾಲರು 1956 ಫೆಬ್ರವರಿ 26ರಂದು ಬಚ್ಚ ಕುಲಾಲ್ ಮತ್ತು ದ್ಯಾವಮ್ಮ ಕುಲಾಲ್ತಿಯರ 3ನೇ ಸುಪುತ್ರರಾಗಿ ಉಡುಪಿ ತಾಲೂಕಿನ ಕಕ್ಕುಂಜೆ ಗ್ರಾಮದಲ್ಲಿ ಜನಿಸಿದರು.

ಕಕ್ಕುಂಜೆ ಶಾಲೆಯಲ್ಲಿ 6ನೇ ತರಗತಿಯವರೆಗೆ ಅಭ್ಯಸಿಸಿದ ಇವರನ್ನು ಸೆಳೆದದ್ದು ಯಕ್ಷಗಾನ. ಆಗಿನ ಕಾಲದಲ್ಲಿ ಯಕ್ಷಗಾನ ಕಲಿಯುವಿಕೆಗೆ ಮನೆಯಲ್ಲಿ ಭಾರಿ ವಿರೋಧವಿತ್ತು. ತಮ್ಮ ಉತ್ಕೃಷ್ಟ ಇಚ್ಚೆಯಿಂದಾಗಿ ಯಕ್ಷಗಾನಕ್ಕೆ ಆಕರ್ಷಿತರಾದರು.

ವೃತ್ತಿ ಹಾಗೂ ಕಲಾಸೇವೆ

ದಶಾವತಾರಿ ಗುರು ವೀರಭದ್ರ ನಾಯಕರ ಗರಡಿಯಲ್ಲಿ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಅಭ್ಯಸಿಸಿದ ಕುಲಾಲರು ತಮ್ಮ 15ನೇ ವಯಸ್ಸಿಗೆ ಶ್ರೀ ಕ್ಷೇತ್ರ ಅಮೃತೇಶ್ವರಿ ಮೇಳದಲ್ಲಿ ಗೆಜ್ಜೆ ಕಟ್ಟುವ ಮೂಲಕ ರಂಗಸ್ಥಳಕ್ಕೆ ಪ್ರವೇಶ ಪಡೆದರು. ದಿ. ಶಿರಿಯಾರ ಮಂಜು ನಾಯ್ಕರು, ದಿ. ವಂಡಾರು ಬಸವ, ಕೋಟ ವೈಕುಂಠ, ಹಳ್ಳಾಡಿ ಕುಷ್ಟರ ಅನುಪಮ ವೇಷಗಳಿಗೆ ಮಾರು ಹೋಗಿ ಪ್ರೇರಣೆಗೊಂಡರು. ಅಮೃತೇಶ್ವರಿ, ಹಿರಿಯಡ್ಕ, ಸಾಲಿಗ್ರಾಮ, ಪೇರ್ಡೂರು, ಹಾಲಾಡಿ, ಮಾರಣಕಟ್ಟೆ ಮೇಳಗಳಲ್ಲಿ ಯಕ್ಷ ತಿರುಗಾಟ ಪೂರೈಸಿದ ಕೀರ್ತಿ ಇವರದ್ದು. ಮಾರಣಕಟ್ಟೆ ಮೇಳದಲ್ಲಿ ಪ್ರಧಾನ ಪುರುಷ ವೇಷಧಾರಿಯಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಎಂ ಎಂ ಹೆಗ್ಡೆಯವರ ಪ್ರೀತಿಪಾತ್ರ ಕಲಾವಿದರಾದ ಕುಲಾಲರು ತಮ್ಮ ಕಲಾ ಬದುಕಿನಲ್ಲಿ ಎಂ ಎಂ ಹೆಗ್ಡೆಯವರ ಮಾರ್ಗದರ್ಶನವನ್ನು ಸದಾ ಸ್ಮರಿಸುತ್ತಿದ್ದರು.

ತಮ್ಮ ಸುಧೀರ್ಘ 45 ವರ್ಷದ ಕಲಾಬದುಕಿನಲ್ಲಿ ಶ್ರೀರಾಮ, ಶ್ರೀಕೃಷ್ಣ, ಸುಧನ್ವ, ಹರಿಶ್ಚಂದ್ರ, ರಾಜಾ ವಿಕ್ರಮ, ಋತುಪರ್ಣ, ಕೌಂಡ್ಲಿಕ, ಧರ್ಮಾಂಗಧ ದುಷ್ಯಂತ, ಅರ್ಜುನ, ದೇವವೃತ, ದ್ರೋಣ, ಮಾರ್ತಾಂಡತೇಜ, ಕೋಲಮುನಿ, ಕಂಸ, ಬ್ರಹ್ಮ, ಬ್ರಹ್ಮಲಿಂಗೇಶ್ವರ ಮುಂತಾದ ಕೋಲಮುನಿ, ಕಂಸ, ಬ್ರಹ್ಮ, ಬ್ರಹ್ಮಲಿಂಗೇಶ್ವರ ಮುಂತಾದ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಸ್ಪಷ್ಟವಾದ ಉಚ್ಚಾರ, ನಿರರ್ಗಳ ಮಾತುಗಾರಿಕೆ, ಹಿತಮಿತ ಕುಣಿತ, ಸುಂದರ ರೂಪ ಅಪಾರ ಜ್ಞಾನಸಂಪತ್ತು ಇವರ ವಿಶೇಷತೆ. ಕಿರಿಯ ಕಲಾವಿದರನ್ನು ಕುಗ್ಗಿಸದೆ ಸೂಕ್ತ ಮಾರ್ಗದರ್ಶನ ನೀಡಿ ತಿದ್ದುವ ರೀತಿ ಅನನ್ಯವಾಗಿತ್ತು.

ಪುರಸ್ಕಾರ ಹಾಗೂ ಸನ್ಮಾನಗಳು

ಬೇಂಗಳೂರು, ಮುಂಬೈ, ಗೋವಾ, ಪುಣೆ, ಇತರೆಡೆಗಳಲ್ಲಿ ತಮ್ಮ ಪಾತ್ರ ಪರಿಚಯವನ್ನು ಕಲಾರಸಿಕರಿಗೆ ಉಣಬಡಿಸಿದ್ದಾರೆ. ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಉಡುಪಿ ಶ್ರೀ ಕೃಷ್ಣಮಠದ ಸಂದ್ಯಾ ಸಪ್ತಾಹ, ರಜತಾದ್ರಿ ಯಕ್ಷ ಮಿತ್ರ ಮಂಡಳಿ ಬೆಂಗಳೂರು, ಅಯ್ಯಪ್ಪ ಸ್ವಾಮಿ ಭಕ್ತವೃಂದ ಹೊಸೂರು, ಮಾರಣಕಟ್ಟೆ ಶ್ರೀಧರ ಮಂಜರು ಮತ್ತು ಸಹೋದರರು. ಮೊಳಹಳ್ಳಿ ಮಾವಿನಕಟ್ಟೆ ಕನ್ನಡ ಬರಹಗಾರರರ ಪ್ರಶಸ್ತಿ 2013 ,ಎಂ.ಎಂ.ಹೆಗ್ಡೆ ಪ್ರಶಸ್ತಿ ಮುಂತಾದ ಪುರಸ್ಕಾರ ಹಾಗೂ ಸನ್ಮಾನಗಳನ್ನು ಪಡೆದಿದ್ದಾರೆ.

ಇವರು ಪತ್ನಿ ಮತ್ತು ಪುತ್ರರನ್ನು ಅಗಲಿದ್ದಾರೆ.

Leave A Reply

Your email address will not be published.