ಪುತ್ತೂರು | ಶಾಲೆ ಬಿಟ್ಟು ಮನೆಗೆ ಮರಳುತ್ತಿದ್ದ ಮೂವರು ಮಕ್ಕಳನ್ನು ಹಿಂಬಾಲಿಸಿದ ಕಾರು !!| ಇದರ ಹಿಂದಿದೆಯೇ ಅಪಹರಣದ ಸಂಚು??

Share the Article

ಪುತ್ತೂರು:ಇತ್ತೀಚೆಗೆ ಅಂತೂ ಕಿರಾತಕರ ಕಾಟ ಅಧಿಕವೇ ಆಗಿದೆ. ದರೋಡೆಕೋರರಿಂದ ಹಿಡಿದು ಮಕ್ಕಳ ಕಳ್ಳರವರೆಗೂ ಮುಂದುವರೆದಿದೆ.ಇದೇ ರೀತಿ ಶಾಲೆಯಿಂದ ಹಿಂದಿರುಗುತಿದ್ದ ಮಕ್ಕಳನ್ನು ಹಿಂಬಾಲಿಸಿದ ಘಟನೆ ದೇರಾಜೆ ಮತ್ತು ಬೂಡು ಮಧ್ಯೆ ನಿರ್ಜನ ಪ್ರದೇಶದಲ್ಲಿ ನಡೆದಿದೆ.

ಬೆಳಿಯೂರುಕಟ್ಟೆ ಸರಕಾರಿ ಪ್ರೌಢಶಾಲೆಯ 9ನೇ ತರಗತಿಯ ಮೂವರು ವಿದ್ಯಾರ್ಥಿಗಳು ಸಂಜೆ ಸೈಕಲ್‌ನಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಅಪರಿಚಿತ ಕಾರೊಂದು ಅವರನ್ನು ಹಿಂಬಾಲಿಸಿದ್ದಲ್ಲದೆ,ಎರಡು ಮೂರು ಬಾರಿ ಕಾರು ನಿಲ್ಲಿಸಿ ಬಾಗಿಲು ತೆರೆಯುವ ಮೂಲಕ ಮಕ್ಕಳಿಗೆ ಭಯ ಹುಟ್ಟಿಸಿದ ಘಟನೆ ಅ.8ರಂದು ನಡೆದಿದೆ.ಇದೊಂದು ಮಕ್ಕಳ ಅಪಹರಣಕಾರರು ಆಗಿರಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಅಟ್ಲಾರ್ ನಿವಾಸಿ, ಬಿಜೆಪಿ ಬೂತ್ ಅಧ್ಯಕ್ಷ ಯೋಗೀಶ್ ನಾಯಕ್ ಎಂಬವರ ಮಗ ಸೇರಿದಂತೆ ಮೂವರು ಬೆಳಿಯೂರು ಬೆಳಿಯೂರುಕಟ್ಟೆ ಸರಕಾರಿ ಪ್ರೌಢಶಾಲೆಯ ೯ನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, ಅವರು ಸಂಜೆ ಮನೆಗೆ ಸೈಕಲ್‌ನಲ್ಲಿ ಬರುತ್ತಿದ್ದ ವೇಳೆ ಹಿಂದಿನಿಂದ ಅಪರಿಚಿತ ಕಾರೊಂದು ಅವರನ್ನು ಹಿಂಬಾಲಿಸುತ್ತಿತ್ತು.ದೇರಾಜೆ ಮತ್ತು ಬೂಡು ನಿರ್ಜನ ಪ್ರದೇಶದಲ್ಲಿ ಕಾರನ್ನು ಏಕಾಏಕಿ ನಿಲ್ಲಿಸಿ ಅದರಲ್ಲಿದ್ದ ಇಬ್ಬರು ವ್ಯಕ್ತಿಗಳು ಇಳಿದು ಮಕ್ಕಳನ್ನು ಕರೆದಿದ್ದಾರೆ.ಈ ವೇಳೆ ಭಯಭೀತರಾದ ಮಕ್ಕಳು ಸೈಕಲ್‌ನಲ್ಲಿ ವೇಗವಾಗಿ ಮನೆ ಕಡೆಗೆ ಹೋಗಿ ಮನೆ ಮಂದಿಗೆ ವಿಷಯ ತಿಳಿಸಿದ್ದಾರೆ.

ಘಟನೆಯ ಕುರಿತು ಯೋಗೀಶ್ ನಾಯಕ್
ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.ಮಕ್ಕಳ ಅಪಹರಣಕಾರರಿದ್ದಾರೆ ಎಂದು ಕೆಲ ಅಪರಿಚಿತರ ಭಾವಚಿತ್ರ ಸಮೇತ ವರದಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ನಡುವೆಯೇ ಈ ಘಟನೆ ನಡೆದಿರುವುದರಿಂದ
ಮಕ್ಕಳ ಪೋಷಕರು ಭಯಭೀತರಾಗಿದ್ದಾರೆ.ಸಂಪ್ಯ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

Leave A Reply