ಡಿಸಿ ಕಚೇರಿ ಸಿಬ್ಬಂದಿ ನಾಪತ್ತೆ ಪ್ರಕರಣಕ್ಕೆ ಮಹತ್ವದ ತಿರುವು | ಧರ್ಮಸ್ಥಳದಲ್ಲಿ ಅಸ್ವಸ್ಥನ ಸ್ಥಿತಿಯಲ್ಲಿ ಪತ್ತೆಯಾದ ಗಿರಿರಾಜ್ !!

Share the Article

ಕಳೆದ ಕೆಲ ದಿನಗಳ ಹಿಂದೆ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಶಿವಮೊಗ್ಗ ಡಿಸಿ ಕಚೇರಿ ಸಿಬ್ಬಂದಿ ಗಿರಿರಾಜ್ ಪ್ರಕರಣ ಇದೀಗ ಮಹತ್ವದ ಟ್ವಿಸ್ಟ್ ಪಡೆದುಕೊಂಡಿದ್ದು, ಪ್ರಕರಣ ಇನ್ನಷ್ಟು ಕುತೂಹಲ ಮೂಡಿಸಿದೆ.

ಇಲ್ಲಿವರೆಗೂ ಯಾವುದೇ ರೀತಿಯ ಸುಳಿವು ಸಿಗದೆ ಪೊಲೀಸ್ ಇಲಾಖೆಯು ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿತ್ತು. ಆದರೆ ಇದೀಗ ಬಂದಿರುವ ಸುದ್ದಿಯ ಪ್ರಕಾರ ಗಿರಿರಾಜ್ ಧರ್ಮಸ್ಥಳದಲ್ಲಿ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಪತ್ತೆಯಾಗಿದ್ದು ಹೇಗೆ?

ಗಿರಿರಾಜ್ ಧರ್ಮಸ್ಥಳಕ್ಕೆ ನಡೆದುಕೊಂಡು ಬಂದಿದ್ದಾರೆ ಎನ್ನಲಾಗಿದ್ದು ನಿತ್ರಾಣಗೊಂಡಿದ್ದರು. ಆ ಸಂದರ್ಭದಲ್ಲಿ ಅವರನ್ನು ಸ್ಥಳೀಯ ನಿರಂಜನ್ ಎಂಬವರು, ಗಿರಿರಾಜ್ ನೀವೇ ಅಲ್ಲವೇ ಎನ್ನುವ ಪ್ರಶ್ನೆಯನ್ನು ಒಡ್ಡಿದ್ದಾರೆ. ಆಗ ನಾನೇ ಎಂದು ಗಿರಿರಾಜ್ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರೆಲ್ಲ ಸೇರಿ ಉಜಿರೆಯ ಆಸ್ಪತ್ರೆಗೆ ದಾಖಲಿಸಿ ಅವರ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಮಾಹಿತಿ ಪಡೆದು, ಈ ಸಂಬಂಧ ಶಿವಮೊಗ್ಗ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಿಕ್ಕಿರೋದು ಗಿರಿರಾಜ್ ಅವರೇ ಎಂದು ಧರ್ಮಸ್ಥಳದ ಪೊಲೀಸರು ಖಾತರಿ ಪಡಿಸಿದ್ದಾರೆ.

ಆದರೂ ಆತ ಯಾಕೆ ಹೀಗೆ ಮಾಡಿದನೆಂಬ ಪ್ರಶ್ನೆಗೆ ತನಿಖೆಯ ಮೂಲಕವೇ ಉತ್ತರ ಸಿಗಬೇಕಾಗಿದೆ. ಸದ್ಯ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.

Leave A Reply