ಮಂಗಳೂರು | ಪಿಲಿಕುಳದಲ್ಲಿ ಗೂಡಿನಿಂದ ಹೊರ ಬಂದ ಸಿಂಹ | ಕೆಲಕಾಲ ಆತಂಕ ಸೃಷ್ಟಿಸಿದ್ದ ವಿದ್ಯಮಾನ ತಡವಾಗಿ ಬೆಳಕಿಗೆ !!

ಮಂಗಳೂರಿನ ಪಿಲಿಕುಳ ಡಾ.ಶಿವರಾಮ ಕಾರಂತ ವನ್ಯಜೀವಿ ಧಾಮದ ಸಿಂಹವೊಂದು ತನ್ನ ಗೂಡಿನಿಂದ ಹೊರಗೆ ಬಂದು ಕೆಲಕಾಲ ಆತಂಕ ಸೃಷ್ಟಿಸಿದ್ದ ವಿದ್ಯಮಾನ ತಡವಾಗಿ ಬೆಳಕಿಗೆ ಬಂದಿದೆ.

ಈ ವಿದ್ಯಮಾನ ನಡೆದಿರುವುದು ಜುಲೈನಲ್ಲಿ. ಪಿಲಿಕುಳದಲ್ಲಿ ಚಿರತೆ, ಹುಲಿ, ಆ ಬಳಿಕ ಸಿಂಹದ ಎನ್‌ಕ್ಲೋಶರ್ ಇದೆ. ಎನ್‌ಕ್ಲೋಶರ್ ಎಂದರೆ ಮೃಗಾಲಯದ ಪ್ರಾಣಿಗಳಿಗೆ ವಿಹರಿಸುವುದಕ್ಕೆ ಬೇಕಾದ ವಿಶಾಲವಾದ ಆವರಣ. ಇದು ಕೊನೆಯಲ್ಲಿ ಆಳವಾದ ಕಂದಕ ಹಾಗೂ ಬೇಲಿ ಇರುವ ಕಾರಣ ಮೃಗಗಳಿಗೆ ಸಾಮಾನ್ಯವಾಗಿ ಹೊರಗೆ ಬರುವುದ ಆಗುವುದಿಲ್ಲ. ವೀಕ್ಷಕರು ಹೊರಗೆ ನಿಂತು ಸುರಕ್ಷಿತವಾಗಿ ಪ್ರಾಣಿಗಳನ್ನು ವೀಕ್ಷಿಸಬಹುದು.

ಈ ಎನ್‌ಕ್ಲೋಶರ್‌ನ ಒಂದು ಬದಿಯಲ್ಲಿ ಮೃಗಗಳಿಗೆ ಮಲಗುವುದಕ್ಕೆ ಗೂಡುಗಳಿರುತ್ತವೆ. ಅವುಗಳಿಗೆ ಆಹಾರವನ್ನು ಹಾಕುವ, ಚಿಕಿತ್ಸೆ ನೀಡುವ ವ್ಯವಸ್ಥೆ ಎಲ್ಲವೂ ಅಲ್ಲೇ ಇರುತ್ತದೆ. ಅದರಂತೆ ಜುಲೈ ತಿಂಗಳ ಒಂದು ದಿನ ಸಿಂಹದ ಗೂಡು ಶುಚಿಗೊಳಿಸಲು ನೌಕರರೊಬ್ಬರು ಹೋಗಿದ್ದಾರೆ. ಈ ಗೂಡಿನ ಬಳಿ ಕಂದಕ ಇರುವುದಿಲ್ಲ, ಒಂದು ಗೇಟ್ ದಾಟಿಕೊಂಡು ಹೋಗಿ ಗೂಡಿನೊಳಗೆ ಶುಚಿಗೊಳಿಸುತ್ತಿರುವಾಗ ಇನ್ನೊಂದು ಗೇಟ್‌ನ ಚಿಲಕ ಹಾಕಿರಲಿಲ್ಲ, ಆಗ ಸಿಂಹ ಹಠಾತ್ ಆಗಿ ಹೊರಬಂದಿದೆ. ನೌಕರ ಈ ವಿಚಾರವನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದಾನೆ.

ತಕ್ಷಣ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ ಅವರು ಮೂರು ತಂಡ ರಚನೆ ಮಾಡಿ ಇಡೀ ಝೂನ ಆವರಣ ಹುಡುಕಿದ್ದಾರೆ. ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಸುರಕ್ಷಿತ ಜಾಗದಲ್ಲಿರುವಂತೆ ಸೂಚಿಸಿದ್ದಾರೆ. ಸುಮಾರು ಮೂರು ಗಂಟೆ ಹುಡುಕಿದ ಬಳಿಕ ಸಿಂಹವು, ಸಿಂಹದ ಗೂಡಿನ ಹಿಂಭಾಗದ ಪ್ಯಾಡಕ್ (ಬೇಲಿ ಹಾಕಿದ ಆವರಣ)ನಲ್ಲಿ ಹುಲ್ಲಿನ ಮರೆಯಲ್ಲಿ ಪತ್ತೆಯಾಗಿದೆ. ಅದನ್ನು ಟ್ರಾಂಕ್ವಿಲೈಜ್ (ಪ್ರಜ್ಞೆ ತಪ್ಪಿಸುವುದು) ಮಾಡಿ ಮತ್ತೆ ಗೂಡಿ ಸೇರಿಸಲಾಯಿತು.

ಇಂತಹ ಘಟನೆ ನಡೆದಾಗ ಸನ್ನದ್ಧರಾಗಲು ನಮಗೂ ಒಂದು ತರಬೇತಿ ನೀಡಿದಂತಾಯಿತು, ಅದೃಷ್ಟವಷಾತ್ ಯಾವು ಅಪಾಯ ನಡೆದಿಲ್ಲ, ಸಿಂಹ ಹೊರಬಂದಿಲ್ಲ, ಪ್ಯಾಡಕ್‌ನಲ್ಲಿ ಇತ್ತು ಎಂದು ನಿರ್ದೇಶಕರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.