

ಬೆಂಗಳೂರು: ಸರಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಪತ್ರಕರ್ತರೊಬ್ಬರಿಂದ 1.61 ಕೋಟಿ ರೂ. ಪಡೆದು ನಕಲಿ ಆದೇಶ ಪತ್ರ ಕೊಟ್ಟು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸರ್ಕಾರಿ ಕೆಲಸವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಪ್ರತಿಯೊಬ್ಬರು ತಮಗೆ ಸರ್ಕಾರಿ ನೌಕರಿ ಸಿಗಲಿ ಎಂದು ಇಷ್ಟಪಡುತ್ತಾರೆ. ಅದಕ್ಕಾಗಿ ತುಂಬಾ ಪ್ರಯತ್ನವನ್ನು ಪಡುತ್ತಾರೆ. ಸರ್ಕಾರಿ ನೌಕರಿ ಕೊಡಿಸುತ್ತೇನೆ ಎಂಬುವವರ ಮಾತನ್ನು ನಂಬಿ ವಂಚಿತರಾಗುತ್ತಾರೆ. ಇದೇ ರೀತಿಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕುಮಾರಸ್ವಾಮಿ ಲೇಔಟ್ ನಿವಾಸಿಯಾದ ಪತ್ರಕರ್ತ ಮಂಜುನಾಥ್ ಅವರು ವಿಧಾನಸೌಧ ನೌಕರರಿಂದ ವಂಚಿತರಾಗಿದ್ದಾರೆ.
ಈ ಸಂಬಂಧ ದ್ವಿತೀಯ ದರ್ಜೆ ಸಹಾಯಕಿ ಸೇರಿ ಇಬ್ಬರು ಸರಕಾರಿ ನೌಕರರನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ವಿಧಾನಸೌಧ ಅಬಿಯೋಜನಾ ಇಲಾಖೆಯ ದ್ವಿತೀಯ ದರ್ಜೆ ಸಹಾಯಕಿಯಾಗಿರುವ ಮತ್ತೀಕೆರೆಯ ಶ್ರೀಲೇಖಾ(35) ಮತ್ತು ವಿಕಾಸಸೌಧದ ಗುತ್ತಿಗೆ ನೌಕರ ಸಂಪತ್ ಕುಮಾರ್(26) ಬಂಧಿತ ಆರೋಪಿಗಳಾಗಿದ್ದು, ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷೆ ರಾಧಾ ಉಮೇಶ್ ಎಂಬಾಕೆ ತಲೆ ಮರೆಸಿಕೊಂಡಿದ್ದಾಳೆ. ಆರೋಪಿಗಳು 1.61 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂದು ಕುಮಾರಸ್ವಾಮಿ ಲೇಔಟ್ ನಿವಾಸಿಯಾಗಿರುವ ಪತ್ರಕರ್ತ ಮಂಜುನಾಥ್ ಅವರು ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದರು.
ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷೆ ಎಂದು 2019ರಲ್ಲಿ ಗುರುತಿಸಿಕೊಂಡಿದ್ದ ರಾಧಾ ಉಮೇಶ್ ಅವರು ಮಂಜುನಾಥ್‌ರನ್ನು ವಂಚಿಸಿದ್ದಾರೆ. ‘ನನಗೆ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಪರಿಚಯವಿದೆ.ಸರಕಾರಿ ನೌಕರಿ ನಾನು ಮಾಡಿಸಿ ಕೊಡುವೆ ಎನ್ನುವ ರಾಧಾ ರಮೇಶ್‌ರ ಮಾತನ್ನು ಮಂಜುನಾಥ್ ನಂಬಿಕೊಂಡಿದ್ದರು. ತಮ್ಮ ಸಹೋದರನಿಗೆ ಸಚಿವಾಲಯದಲ್ಲಿ ದಿನಗೂಲಿ ನೌಕರರ ಏಜೆನ್ಸಿ ಕೊಡಿಸುವಂತೆ ಕೋರಿದ್ದರು. ಅದಕ್ಕಾಗಿ ರಾಧಾ ಉಮೇಶ್ ನಾಲ್ಕು ಕಂತುಗಳಲ್ಲಿ 15 ಲಕ್ಷ ರೂ. ಪಡೆದುಕೊಂಡಿದ್ದಾರೆ.
ಮತ್ತೊಂದು ಕಡೆ, ಸಚಿವಾಲಯದ ಒಳಾಡಳಿತ ಇಲಾಖೆಯಲ್ಲಿ ನೇರ ನೇಮಕಾತಿ ಮೂಲಕ ಕಿರಿಯ ಸಹಾಯಕರು, ಹಿರಿಯ ಸಹಾಯಕರು ಮತ್ತು ಅಧೀಕ್ಷಕರ ಹುದ್ದೆಗಳ ನೇಮಕಾತಿಗಳನ್ನು ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದ ದ್ವಿತೀಯ ದರ್ಜೆ ಸಹಾಯಕಿ ಶ್ರೀಲೇಖಾ ಅವರು 1 ಕೋಟಿಗೂ ಹೆಚ್ಚು ಹಣವನ್ನು ಮಂಜುನಾಥ್‌ರಿಂದ ಪಡೆದಿದ್ದರು ಎನ್ನಲಾಗಿದೆ. ಈ ರೀತಿಯಾಗಿ ಪತ್ರಕರ್ತರೊಬ್ಬರಿಗೆ ವಿಧಾನಸೌಧ ನೌಕರರು ವಂಚಿಸಿದ್ದಾರೆ.













