ವಾಕಿಂಗ್ ಸಪೋರ್ಟ್ ಹಿಡಿದು ಕೂತಿದ್ದ ಮಹಿಳೆ ಮೇಲೆ ಏಕಾಏಕಿ ಚಿರತೆ ದಾಳಿ | ಮುಂದಾಲೋಚನೆಯಿಂದ ತನ್ನ ವಾಕಿಂಗ್ ಸಪೋರ್ಟರನ್ನೇ ಅಸ್ತ್ರ ಮಾಡಿಕೊಂಡು ಹೋರಾಡಿದ ಮಹಿಳೆ !!

ಕಾಡು ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ನಡೆಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಕೆಲವು ಕಡೆಗಳಲ್ಲಿ ಕಾಡುಪ್ರಾಣಿಗಳು ಊರಿಗೆ ಹೆಜ್ಜೆ ಇಡುತ್ತಿರುವುದು ಮಾಮೂಲಾಗಿ ಹೋಗಿದೆ. ಇದರಿಂದ ಕಾಡಿನಂಚಿನಲ್ಲಿರುವ ಜನರು ರಾತ್ರಿ ಹೊತ್ತು ಹೊರಹೋಗಲು ಭೀತಿಗೊಳಗಾಗುತ್ತಿದ್ದಾರೆ.

ಇದಕ್ಕೆ ತಾಜಾ ಉದಾಹರಣೆಯಂತಿದೆ ಈ ಘಟನೆ. ಇತ್ತೀಚೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಚಿರತೆಯೊಂದು ರಾತ್ರಿ ವೇಳೆ ಊರಿಗೆ ನುಗ್ಗಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನಡೆದಿದ್ದು, ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮುಂಬೈನ ಗೋರೆಗಾವ್ ಬಳಿಯ ಆರೇ ಪ್ರದೇಶದಲ್ಲಿರುವ ವಿಸವ ವರ್ಕರ್ಸ್ ಕಾಲೊನಿಯ ನಿವಾಸಿಯೊಬ್ಬರು ಮನೆಯ ಮುಂದೆ ತಮ್ಮ ವಾಕಿಂಗ್ ಸಪೋರ್ಟ್ ಹಿಡಿದುಕೊಂಡು ಬಂದು ಕೂತಿದ್ದಾರೆ. ಆಗ ಹಿಂದಿನಿಂದ ಬಂದ ಚಿರತೆ ಅವರ ಮೇಲೆರಗಿದೆ. ಸಮಯಪ್ರಜ್ಞೆ ತೋರಿರುವ ಮಹಿಳೆಯು ತಕ್ಷಣ ತಮ್ಮ ವಾಕಿಂಗ್ ಸಪೋರ್ಟಿನಿಂದ ಚಿರತೆಗೆ ಹೊಡೆದು ಅದನ್ನು ಹಿಮ್ಮೆಟ್ಟಿಸಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಎಎನ್‌ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ.

55 ವರ್ಷ ವಯಸ್ಸಿನ ಈ ಮಹಿಳೆ ಚಿರತೆಯ ಹಲ್ಲೆಯಿಂದಾಗಿ ದೊಪ್ಪನೇ ನೆಲದ ಮೇಲೆ ಬಿದ್ದಿದ್ದಲ್ಲದೆ, ಚಿರತೆಯ ಹಲ್ಲೆಯಿಂದ ಗಾಯಗೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.