10 ತಿಂಗಳ ಜೈಲು ಶಿಕ್ಷೆ ತಪ್ಪಿಸಿಕೊಳ್ಳಲು 9 ವರ್ಷಗಳ ವನವಾಸ | ಕೊನೆಗೂ ಆರೋಪಿ ಅಂದರ್ !
ಕೇವಲ ಹತ್ತು ತಿಂಗಳ ಶಿಕ್ಷೆಗಾಗಿ ಕಳೆದ 9 ವರ್ಷಗಳಿಂದ ಅಪಘಾತ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬ್ಯಾಟರಾಯನಪುರ ಸಂಚಾರಿ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂಥೋನಿ ರಾಜ್(44) ಬಂಧಿತ ಆರೋಪಿ. 2010 ರಲ್ಲಿ ಟ್ರ್ಯಾಕ್ಟರ್ ಚಲಾಯಿಸ್ತಿದ್ದ ಆರೋಪಿ ಪಾದಚಾರಿಗಳಾದ ಗಂಡ, ಹೆಂಡತಿ ಮತ್ತು ಎಂಟು ವರ್ಷದ ಮಗುವಿಗೆ ಗುದ್ದಿದ್ದ. ಮಗು ಸ್ಥಳದಲ್ಲೇ ಸಾವನ್ನಪ್ಪಿತ್ತು. ಈ ಸಂಬಂಧ ಐಪಿಸಿ ಸೆಕ್ಷನ್ 279(ವೇಗ ವಾಹನ ಸವಾರಿ), 304 ಎ(ನಿರ್ಲಕ್ಷದಿಂದ ಸಾವು) ಅಡಿ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ 2012ರಲ್ಲಿ ಆರೋಪಿಗೆ 10 ತಿಂಗಳು 15 ದಿನಗಳ ಕಾಲ ಜೈಲು ಶಿಕ್ಷೆಯಾಗಿತ್ತು. ಅಂಥೋನಿ ರಾಜ್ ಅಷ್ಟರಲ್ಲಿ ತಲೆಮರೆಸಿಕೊಂಡಿದ್ದ. ಆತ ಸತತ 9 ವರ್ಷಗಳಿಂದ ಪೊಲೀಸರಿಗೆ ಸಿಗದೆ ಓಡಾಡುತ್ತಿದ್ದನು. ಇದೀಗ ಅಂಥೋನಿ ಸಿಕ್ಕಿದ್ದು, ಬ್ಯಾಟರಾಯನಪುರ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.
ಅತಿಯಾಗಿ ಮದ್ಯಪಾನ ಮಾಡುತ್ತಿದ್ದ ಅಂಥೋನಿ ರಿಹ್ಯಾಬಿಲಿಟೇಷನ್ ಸೆಂಟರ್ ನಲ್ಲಿದ್ದ. ಪೊಲೀಸರು ಕುಡುಕನ ಸೋಗಿನಲ್ಲಿ ರಿಹ್ಯಾಬಿಲಿಟೇಷನ್ ಸೆಂಟರ್ ನಿಂದಲೇ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ.