ಸ್ಟಂಟ್ ಮಾಡಲು ಹೋಗಿ
ಜೀವಂತ ಹಾವನ್ನೇ ನುಂಗಿದ ವ್ಯಕ್ತಿ!! ಮುಂದೆ ನಡೆದಿದ್ದು ಮಾತ್ರ ಅನಾಹುತ..

ಹಾವು ಕಡಿತದಿಂದ ಯಾರು ಬೇಕಾದರೂ ಸಾಯಬಹುದು. ವಿಷಯುಕ್ತ ಹಾವು ಕಚ್ಚಿದರೆ ಕ್ಷಣ ಮಾತ್ರದಲ್ಲಿ ಪ್ರಾಣಪಕ್ಷಿ ಹಾರಿ ಹೋಗುವ ಪ್ರಮೇಯವೇ ಹೆಚ್ಚು. ಹಾಗಾಗಿ ಹಾವಿನೊಂದಿಗೆ ಯಾವುದೇ ರೀತಿಯ ಹುಚ್ಚಾಟ ಮಾಡಬಾರದು.

ಆದರೆ ಇಲ್ಲೊಬ್ಬ ವ್ಯಕ್ತಿಯು ಜೀವಂತ ಹಾವನ್ನು ನುಂಗಿದ್ದಾನೆ. ಸಹಜವಾಗಿಯೇ ಇದು ಕೇಳಲು ವಿಚಿತ್ರವೆನಿಸುತ್ತದೆ, ಆದರೆ ಇದು ನಿಜವಾಗಿಯೂ ನಡೆದಿರುವ ಘಟನೆ. ಈ ರೀತಿ ಸ್ಟಂಟ್ ಮಾಡಲು ಹೋದ ಆ ವ್ಯಕ್ತಿ ಮಾತ್ರ ಭಾರೀ ಬೆಲೆ ತೆತ್ತಿದ್ದಾನೆ. ತಾನು ಮಾಡಿದ ಹುಚ್ಚಾಟಕ್ಕೆ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.

ಮೊದಲು ನಾಲಿಗೆ ಕಚ್ಚಿತು ನಂತರ ಗಂಟಲು ಕಚ್ಚಿತು

ಈ ಘಟನೆ ನಡೆದಿರುವುದು ರಷ್ಯಾದಲ್ಲಿ. ಹಾವು ನುಂಗುವ ಸಾಹಸ ಮಾಡಲು ಹೋದ ವ್ಯಕ್ತಿಯೊಬ್ಬ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಹಾವಿನ ಜೊತೆ ಚೆಲ್ಲಾಟವಾಡಲು ಹೋಗಿ ಪ್ರಾಣಕಳೆದುಕೊಂಡಿರುವ 55 ವರ್ಷದ ಕೃಷಿ ಕಾರ್ಮಿಕನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಆತ ಹಾವು ನುಂಗುತ್ತಿರುವುದು ಕಂಡುಬಂದಿದೆ. ವರದಿಗಳ ಪ್ರಕಾರ ಈತ ಹಾವು ನುಂಗಲು ಎರಡು ಬಾರಿ ಪ್ರಯತ್ನಿಸಿ ವಿಫಲನಾಗಿದ್ದ. ಅಷ್ಟಕ್ಕೆ ಸುಮ್ಮನಾಗದೆ ಮತ್ತೆ 3ನೇ ಬಾರಿ ಪ್ರಯತ್ನಿಸಿದಾಗ ಹಾವು ಆತನ ನಾಲಿಗೆಗೆ ಕಚ್ಚಿದೆ. ಇದರ ನಂತರವೂ ಆತ ತನ್ನ ಹುಚ್ಚಾಟವನ್ನು ನಿಲ್ಲಿಸಲಿಲ್ಲ. ಮತ್ತೆ ನುಂಗಲು ಪ್ರಯತ್ನಿಸಿದ ಆತನ ಕುತ್ತಿಗೆಗೆ ಹಾವು ಕಚ್ಚಿಬಿಟ್ಟಿದೆ.

ಉಸಿರಾಡಲು ಕಷ್ಟಪಟ್ಟು ಅಸುನೀಗಿದ ವ್ಯಕ್ತಿ

ಹಾವು ಕಚ್ಚಿದ ಕೆಲವು ಗಂಟೆಗಳ ನಂತರ ವ್ಯಕ್ತಿಯ ಆರೋಗ್ಯ ಸ್ಥಿತಿ ಹದಗೆಡಲು ಪ್ರಾರಂಭಿಸಿತು. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಹಾವು ಕಡಿತದಿಂದ ಆ ವ್ಯಕ್ತಿಗೆ ಅಲರ್ಜಿ ಉಂಟಾಯಿತು ಎಂದು ವೈದ್ಯರು ಹೇಳಿದ್ದಾರೆ. ನಾಲಿಗೆ ಮತ್ತು ಗಂಟಲಿನಲ್ಲಿ ತೀವ್ರವಾದ ಊತವಿತ್ತು. ವೈದ್ಯರ ಪ್ರಕಾರ, ವ್ಯಕ್ತಿಯು ಅನಾಫಿಲ್ಯಾಕ್ಟಿಕ್ ಆಘಾತವನ್ನು ಅನುಭವಿಸಿದ್ದನು. ಹಾವಿನ ಕಡಿತದಿಂದಾಗಿ ವ್ಯಕ್ತಿಯ ನಾಲಿಗೆ ತುಂಬಾ ಊದಿಕೊಂಡಿತ್ತು. ಇದರಿಂದ ಆ ವ್ಯಕ್ತಿಯು ಉಸಿರಾಡಲು ಕಷ್ಟಪಟ್ಟು ಸಾವನ್ನಪ್ಪಿದನು.

ಹಾವು ನುಂಗುವ ಅಭ್ಯಾಸ

ವರದಿಯ ಪ್ರಕಾರ ರಷ್ಯಾದ ಈ ಪ್ರದೇಶದಲ್ಲಿನ ಸ್ಥಳೀಯ ಜನರಲ್ಲಿ ಹಾವುಗಳನ್ನು ನುಂಗುವ‌ ಅಭ್ಯಾಸವಿದೆಯಂತೆ. ಇಲ್ಲಿ ಕಲ್ಲಂಗಡಿ ಬೆಳೆಯುವ ಪ್ರದೇಶಗಳಲ್ಲಿ Step Viper ಜಾತಿಯ ಹಾವು ಕಂಡುಬರುತ್ತದೆ. ಈ ಹಾವು ತುಂಬಾ ವಿಷಕಾರಿಯಲ್ಲವಂತೆ. ಆದರೆ ಇದು ಅನೇಕ ಬಾರಿ ಕಚ್ಚಿದರೆ ಮನುಷ್ಯರು ಬದುಕುವುದು ಕಷ್ಟವಂತೆ. ಹಾವು ಕಡಿತದಿಂದ ವ್ಯಕ್ತಿ ಸಾವನ್ನಪ್ಪಿದ ಬಳಿಕ ಇಲ್ಲಿನ ಸ್ಥಳೀಯ ಆಡಳಿತವು ಹಾವುಗಳನ್ನು ನುಂಗಬೇಡಿ ಎಂದು ಜನರಿಗೆ ಮನವಿ ಮಾಡಿದೆ. ಹಾವು ನುಂಗುವ ಅಭ್ಯಾಸ ನಿಲ್ಲಿಸಿ ಇಲ್ಲದಿದ್ದರೆ ಅದು ನಿಮ್ಮ ಜೀವಕ್ಕೆ ಮಾರಕವಾಗಬಹುದು ಎಂದು ಎಚ್ಚರಿಕೆ ನೀಡಿದೆ.

Leave A Reply

Your email address will not be published.