ಚಾರ್ಮಾಡಿ ಘಾಟ್ ನಲ್ಲಿ ಪಲ್ಟಿಯಾದ ಪೆಟ್ರೋಲ್ ಟ್ಯಾಂಕರ್ | ಪೆಟ್ರೋಲ್ ಸೋರಿಕೆ, ತಪ್ಪಿದ ಭಾರೀ ಅನಾಹುತ
ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರೊಂದು ಪಲ್ಟಿಯಾಗಿರುವ ಘಟನೆ ನಿನ್ನೆ ರಾತ್ರಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.
ಚಾರ್ಮಾಡಿ ಘಾಟಿಯ ಆಲೇಕಾನ್ ಸಮೀಪ ಈ ದುರ್ಘಟನೆ ನಡೆದಿದ್ದು, ಪೆಟ್ರೋಲ್ ಟ್ಯಾಂಕರ್‌ನಿಂದ ಪೆಟ್ರೋಲ್ ಸೋರಿಕೆಯಾಗಿದೆ.
ಮಂಗಳೂರಿನಿಂದ ಮಾಗುಂಡಿಗೆ ಸಾಗುತ್ತಿದ್ದ ಪೆಟ್ರೋಲ್ ಟ್ಯಾಂಕರ್ ಆಲೇಕಾನ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಟ್ಯಾಂಕರ್ ನಲ್ಲಿ 8000 ಲೀಟರ್ ಪೆಟ್ರೋಲ್ ಹಾಗೂ 4000 ಲೀಟರ್ ಡಿಸೇಲ್ ಸಂಗ್ರಹವಿತ್ತು. ಪೆಟ್ರೋಲ್ ಸೋರಿಕೆಯಾಗುತ್ತಿರುವ ಕಾರಣ ಬಣಕಲ್ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಚರಣೆ ನಡೆಸಿದ್ದಾರೆ.
ಪೆಟ್ರೋಲ್ ಟ್ಯಾಂಕರ್‌ನ ಎರಡು ಚಕ್ರಗಳು ಮಾತ್ರ ರಸ್ತೆ ಬದಿಯ ಹೊಂಡಕ್ಕೆ ಇಳಿದಿದೆ. ಹಾಗಾಗಿ, ಮತ್ತೊಂದು ಬದಿಯ ಎರಡೂ ಚಕ್ರಗಳು ನೆಲದಿಂದ ಮೇಲೆ ಎದ್ದಿವೆ. ಟ್ಯಾಂಕರ್ ನಿಂದ ಪೆಟ್ರೋಲ್ ಸೋರಿಕೆಯಾಗುತ್ತಿದೆ. ಒಂದು ವೇಳೆ ಟ್ಯಾಂಕರ್ ಘಾಟಿಯಲ್ಲಿ ಸಂಪೂರ್ಣ ಪಾತಾಳಕ್ಕೆ ಬಿದ್ದಿದ್ದರೆ ಭಾರೀ ಪ್ರಮಾಣದ ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.
ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.