ಪ್ರತಿದಿನ ಸ್ನಾನ ಮಾಡುವುದಿಲ್ಲ ಎಂದು ಪತ್ನಿಗೆ ತಲಾಖ್ ನೀಡಿದ ಪತಿ | ವಿಚ್ಛೇದನೆ ಪ್ರಶ್ನಿಸಿ ಠಾಣೆ ಮೆಟ್ಟಿಲೇರಿದ ಪತ್ನಿ
ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಗಾದೆಯೇ ಇದೆ. ಆದರೆ ಈಗ ಆ ಗಾದೆ ಬದಲಾಗಿ ಕೋರ್ಟ್ ಮೆಟ್ಟಿಲೇರುವ ತನಕ ಎಂಬಂತಾಗಿದೆ. ಯಾಕೆಂದರೆ ಈಗಿನ ಹಲವು ದಂಪತಿಗಳು ಸಣ್ಣ ಸಣ್ಣ ವಿಚಾರಕ್ಕೆ ಜಗಳ ಮಾಡಿಕೊಂಡು ವಿಚ್ಛೇದನದ ಹಾದಿ ತುಳಿಯುತ್ತಿದ್ದಾರೆ.
ಗಂಡ-ಹೆಂಡತಿಯ ಜಗಳ ವಿಚ್ಛೇದನ ಹಂತಕ್ಕೆ ತಲುಪಿ ಕೋರ್ಟ್ ಮೆಟ್ಟಿಲು ಏರಿದೆ ಎಂದರೆ ಅದಕ್ಕೆ ಬಲವಾದ ಕಾರಣ ಇರಲೇಬೇಕು. ಆದರೆ, ಉತ್ತರ ಪ್ರದೇಶದ ಅಲಿಗರ್ ನಲ್ಲಿ ಇದಕ್ಕೆ ತದ್ವಿರುದ್ಧವಾದ ಪ್ರಕರಣವೊಂದು ನಡೆದಿದೆ.
ತನ್ನ ಹೆಂಡತಿ ಪ್ರತಿ ನಿತ್ಯ ಸ್ನಾನ ಮಾಡುವುದಿಲ್ಲ. ಸ್ನಾನ ಮಾಡು ಅಂತಾ ಹೇಳಿದರೆ ಜಗಳಕ್ಕೆ ಬರುತ್ತಾಳೆ. ಹೀಗಾಗಿ ಅವಳ ಜೊತೆ ಇರಲು ಇಷ್ಟಪಡುವುದಿಲ್ಲ ಎಂದು ಮುಸ್ಲಿಂ ವ್ಯಕ್ತಿಯೋರ್ವ ಹೇಳಿದ್ದಾನೆ.
ಅಲಿಗರ್ ನ ಚಂದೌಸ್ ಗ್ರಾಮದ ಮುಸ್ಲಿಂ ವ್ಯಕ್ತಿ ಕ್ವಾರ್ಸಿ ಗ್ರಾಮದ ಯುವತಿ ಜೊತೆ ಕಳೆದ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದಾನೆ. ಈ ದಂಪತಿಗೆ ಒಂದು ವರ್ಷದ ಮಗು ಇದೆ. ಇದೀಗ ತನ್ನ ಪತ್ನಿಗೆ ತಲಾಖ್ ನೀಡಲು ಈತ ಬಯಸಿದ್ದಾನೆ. ಆದರೆ, ಪತ್ನಿಗೆ ಗಂಡನಿಂದ ವಿಚ್ಛೇದನ ಪಡೆಯಲು ಇಷ್ಟವಿಲ್ಲ. ಹೀಗಾಗಿ ತನ್ನ ದಾಂಪತ್ಯ ಉಳಿಸಿಕೊಳ್ಳುವ ಉದ್ದೇಶದಿಂದ ಆಕೆ ಮಹಿಳಾ ಆಯೋಗದ ಮೊರೆ ಹೋಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳಾ ಆಯೋಗವು ಈ ದಂಪತಿಗೆ ಆಪ್ತ ಸಮಾಲೋಚನೆ ನಡೆಸಿದೆ. ಈ ವೇಳೆ ಪತ್ನಿಗೆ ವಿಚ್ಛೇದನ ನೀಡಲು ಕಾರಣ ಏನು ಎಂಬುದನ್ನು ಪತಿ ಹೇಳಿಕೊಂಡಿದ್ದಾನೆ. ಆಕೆ ಪ್ರತಿ ನಿತ್ಯ ಸ್ನಾನ ಮಾಡುವುದಿಲ್ಲ. ಇದೇ ವಿಚಾರಕ್ಕೆ ನಿತ್ಯ ನಮ್ಮ ಮನೆಯಲ್ಲಿ ಜಗಳ ನಡೆಯುತ್ತಿದೆ. ಹೀಗಾಗಿ ಅವಳಿಗೆ ತಲಾಖ್ ನೀಡಲು ಮುಂದಾಗಿದ್ದೇನೆ ಎಂದು ಹೇಳಿದ್ದಾನೆ.
ದಿನವೂ ಸ್ನಾನ ಮಾಡುತ್ತಿಲ್ಲ ಎಂಬ ನೆಪವೊಡ್ಡಿ ಗಂಡ ತಲಾಖ್ ನೀಡಿರುವುದಾಗಿ ಮಹಿಳೆ ಪೊಲೀಸ್ ದೂರು ನೀಡಿದ್ದಾಳೆ. ಆ ದಂಪತಿಗೆ ನಾವೇ ಕೌನ್ಸಿಲಿಂಗ್ ಕೊಡಿಸುತ್ತಿದ್ದೇವೆ. ಅವರ ಪೋಷಕರ ಜೊತೆಯೂ ಈ ಬಗ್ಗೆ ಮಾತನಾಡಿದ್ದೇವೆ. ಆ ಮಹಿಳೆಗೆ ತನ್ನ ಗಂಡನ ಜೊತೆ ಬದುಕಬೇಕೆಂಬ ಆಸೆಯಿದೆ. ಹೀಗಾಗಿ ಅವರ ಮದುವೆಯನ್ನು ಉಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂತಹ ಸಣ್ಣ ಪುಟ್ಟ ವಿಷಯಕ್ಕೆ ಇಬ್ಬರ ನಡುವೆ ಜಗಳ ಆಗಾಗ ನಡೆಯುತ್ತಿತ್ತು. ಅವರಿಬ್ಬರಿಗೂ ಮಗು ಕೂಡ ಇದ್ದು, ವಿಚ್ಛೇದನವಾದರೆ ಆ ಮಗುವಿನ ಭವಿಷ್ಯ ಹಾಳಾಗಲಿದೆ ಎಂದು ಅವರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವೊಮ್ಮೆ ಕೌಟುಂಬಿಕ, ಮಾನಸಿಕ, ದೈಹಿಕ ಹಿಂಸೆಗಳು ಹೆಚ್ಚಾದಾಗ ತಮಗೆ ಮುಕ್ತಿ ಕೊಡಿಸಬೇಕೆಂದು ಕಾನೂನಿನ ಮೊರೆ ಹೋಗುವುದು ಸಾಮಾನ್ಯ. ಆದರೆ ಇತ್ತೀಚೆಗೆ ಗೊರಕೆ ಹೊಡೆಯುವುದಕ್ಕೆ, ಸ್ನಾನ ಮಾಡುವುದಿಲ್ಲ ಎಂಬ ನೆಪ ಇಟ್ಟುಕೊಂಡು ದಂಪತಿಗಳು ದೂರವಾಗುತ್ತಿರುವ ಘಟನೆಗಳು ಪದೇಪದೇ ಮರುಕಳಿಸುತ್ತಿದೆ.