ರಸ್ತೆ ಬದಿ ಮಲಗಿದ್ದ ಹಸುವನ್ನು ಕದ್ದು ಜೀಪಲ್ಲಿ ಕೊಂಡೊಯ್ದ ಕಳ್ಳರು | ಜೀಪಿನ ಹಿಂದೆ ಅಸಹಾಯಕತೆಯಿಂದ ಓಡಿದ ಕರು | ಮನಕಲಕುವ ದೃಶ್ಯ ಸಿಸಿ ಟಿವಿಯಲ್ಲಿ ಪತ್ತೆ
ರಸ್ತೆ ಬದಿ ಮಲಗಿದ್ದ ಹಸುವನ್ನು ಗೋಕಳ್ಳರು ಜೀಪಿನಲ್ಲಿ ತುಂಬಿಕೊಂಡು ಹೋಗುತ್ತಿದ್ದಂತೆ ಹಸುವಿನ ಕರು ಜೀಪ್ ಹಿಂದೆ ಅಸಹಾಯಕ ರೀತಿಯಲ್ಲಿ ಓಡಿದ ಹೃದಯ ಕಲಕುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಛತ್ರ ಮೈದಾನದಲ್ಲಿ ನಡೆದಿದೆ.
ಕಳೆದ ರಾತ್ರಿ ಜೀಪಿನಲ್ಲಿ ಬಂದ ದನಗಳ್ಳರು ರಸ್ತೆ ಬದಿ ಮಲಗಿದ್ದ ದನಗಳನ್ನು ಬಂದು ನೋಡಿ ತಮಗೆ ಬೇಕಾದ ಹಸುವನ್ನು ಎತ್ತಿ ಜೀಪಿನಲ್ಲಿ ತುಂಬಿಕೊಂಡಿದ್ದಾರೆ. ಈ ವೇಳೆ ಜೀಪಿನ ನಂಬರ್ ಪ್ಲೇಟ್ ಮೇಲೆ ಬಟ್ಟೆ ಹಾಕಿ ಮುಚ್ಚಿದ್ದಾರೆ. ಮೊದಲು ಬಂದು ಹಸುವನ್ನು ನೋಡಿದ ಕಳ್ಳರು ಒಂದು ಹಸುವನ್ನು ಜೀಪಿಗೆ ಜೋರಾಗಿ ನೂಕಿದ್ದಾರೆ.
ಆ ಹಸು ಎದ್ದು ಓಡಿದ ಮೇಲೆ ಮತ್ತೊಂದು ಹಸುವನ್ನು ಗಾಡಿಯಲ್ಲಿ ತುಂಬಿಕೊಂಡಿದ್ದಾರೆ. ಈ ವೇಳೆ, ಆ ಹಸುವಿನ ಕರು ಜೀಪಿನ ಹಿಂದೆ ಅಸಹಾಯಕನಂತೆ ಓಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕರುಣಾಜನಕ ದೃಶ್ಯವನ್ನ ಕಂಡ ಮಲೆನಾಡಿಗರು ಪೊಲೀಸರು ಗೋಕಳ್ಳರ ಹೆಡೆಮುರಿ ಕಟ್ಟಬೇಕೆಂದು ಆಗ್ರಹಿಸಿದ್ದಾರೆ.
ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಮೂಡಿಗೆರೆ ತಾಲೂಕಿನ ರೈತ ಮಹಿಳೆಯ ಒಂದು ಲಕ್ಷ ರೂ. ಬೆಲೆ ಬಾಳುವ ಎರಡು ಹಸುಗಳು ಕಳ್ಳತನವಾಗಿದ್ದವು. ಜೀವನಕ್ಕೆ ಆಧಾರವಾಗಿದ್ದ ಹಸುಗಳನ್ನು ಕಳೆದುಕೊಂಡ ಮಹಿಳೆ ಕಣ್ಣೀರಿಟ್ಟಿದ್ದಳು.
ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಬಳಿ ಕಾಡಿನಲ್ಲಿ ಹಸುವನ್ನು ಸಾಯಿಸಿ ಮಾಂಸವನ್ನ ಲಾಗೇಜ್ ಆಟೋದಲ್ಲಿ ತುಂಬಿಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸ್ಥಳಿಯರ ಕೈಗೆ ಸಿಕ್ಕಿಬಿದ್ದು ಒದೆ ತಿಂದಿದ್ದರು.
ಬೈಕಿನಲ್ಲಿ ಗೋಮಾಂಸ ಸಾಗಿಸುವಾಗ ದೂರದಲ್ಲಿದ್ದ ಯುವಕರ ಗುಂಪನ್ನು ಕಂಡು ಧರ್ಮದೇಟು ಗ್ಯಾರಂಟಿ ಎಂದು ರಸ್ತೆ ಬದಿಯೇ ಬೈಕ್ ಬಿಟ್ಟು ಕಾಡಿನಲ್ಲಿ ಕಣ್ಮರೆಯಾಗಿದ್ದರು. ಮಲೆನಾಡಲ್ಲಿ ಇತ್ತೀಚಿಗೆ ಇಂತಹ ಪ್ರಕರಣಗಳು ನಡೆಯತ್ತಲೇ ಇದೆ. ಹಾಗಾಗಿ, ಪೊಲೀಸರು ದನಗಳ್ಳರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.