ಪುತ್ತೂರು : ರೆಸ್ಟೋರೆಂಟ್ನಲ್ಲಿ ಯುವತಿ ಹಾಗೂ ಇಬ್ಬರು ಯುವಕರಿದ್ದ ಪ್ರಕರಣ | ಯುವತಿಯಿಂದ ಐವರ ವಿರುದ್ದ ದೂರು,ಇಬ್ಬರ ಬಂಧನ
ಪುತ್ತೂರು: ಬೆಂಗಳೂರಿನ ಹಿಂದೂ ಯುವತಿ, ಯುವಕ ಮತ್ತು ಮುಸ್ಲಿಂ ಧರ್ಮದ ಯುವಕ ಬೈಪಾಸ್ ರಸ್ತೆಯ ಪ್ರತಿಷ್ಠಿತ ಹೊಟೇಲೊಂದರಲ್ಲಿ ಕಳೆದ ಮೂರು ದಿನಗಳಿಂದ ರೂಮ್ ಮಾಡಿ ತ೦ಗಿದ್ದ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ ಮತ್ತು ಸ್ಥಳಕ್ಕೆ ತೆರಳಿದ ಪೊಲೀಸರು ಹೊಟೇಲ್ ರೆಸ್ಟೋರೆಂಟ್ನಲ್ಲಿದ್ದ ಮೂವರನ್ನು ಠಾಣೆಗೆ ಕರೆದೊಯ್ದ ಘಟನೆ ಸೆ.20ರಂದು ಸಂಜೆ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಐವರ ವಿರುದ್ದ ದೂರು ನೀಡಿದ್ದು ,ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ರೂಮ್ವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂ ಯುವತಿ ಪುತ್ತೂರಿನ ಬೈಪಾಸ್ ರಸ್ತೆಯ ಹೋಟೆಲ್ ರೆಸ್ಟೋರೆಂಟ್ನಲ್ಲಿ ಕಳೆದ ಮೂರು ದಿನಗಳಿಂದ ಈ ತಂಗಿದ್ದು, ಅದೇ ರೂಮ್ನಲ್ಲಿ ಓರ್ವ ಹಿಂದೂ ಯುವಕ ಮತ್ತು ಮುಸ್ಲಿಂ ಯುವಕನೋರ್ವ ಜನ ಇರುವ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹೋಟೆಲ್ಗೆ ತೆರಳಿದಾಗ ಯುವತಿ ಮತ್ತು ಇಬ್ಬರು ಯುವಕರು ಅಲ್ಲಿನ ರೆಸ್ಟೋರೆಂಟ್ನಲ್ಲಿ ಉಪಹಾರ ಸೇವಿಸುತ್ತಿದ್ದರು.
ಇದೇ ಸಂದರ್ಭ ಪೊಲೀಸರೂ ಸ್ಥಳಕ್ಕೆ ಆಗಮಿಸಿ ಯುವತಿ ಮತ್ತು ಜೊತೆಗಿದ್ದ ಇಬ್ಬರು ಯುವಕರನ್ನು ಠಾಣೆಗೆ ಕರೆದೊಯ್ದಿದ್ದಾರೆ.ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಅವರು ಯುವತಿ ಸೇರಿದಂತೆ ಮೂವರನ್ನೂ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಯುವತಿ ನೀಡಿದ ದೂರಿನಲ್ಲಿ, ಪುತ್ತೂರು ನಗರ ಪೊಲೀಸರ ವಶದಲ್ಲಿದ್ದ ತನ್ನ ಮಾಲೀಕತ್ವದ ಕೆಎ 05 ಎನ್.ಬಿ 7355 ನೇ ಕಾರನ್ನು ಬಿಡಿಸಿಕೊಳ್ಳುವರೇ ತನ್ನ ಜೊತೆ ಕೆಲಸ ಮಾಡುತ್ತಿರುವ ಮಂಗಳೂರು ಉಳ್ಳಾಲ ನಿವಾಸಿ ಯು.ಕೆ ಮಹಮ್ಮದ್ ಅರಾಫತ್ ಮತ್ತು ಬೆಂಗಳೂರು ಕೊಟ್ಟಿಗೇರಿ ನಿವಾಸಿ ಶಿವ ಎಂಬವರ ಜೊತೆ ಬಾಡಿಗೆ ವಾಹನವೊಂದರಲ್ಲಿ ದಿನಾಂಕ: 17.09.2021 ರಂದು ರಾತ್ರಿ ಬೆಂಗಳೂರಿನಿಂದ ಜೊತೆಯಲ್ಲಿ ಹೊರಟವರು ದಿನಾಂಕ: 18.09.2021 ರಂದು ಬೆಳಿಗ್ಗೆ ಪುತ್ತೂರು ತಲುಪಿ ಪುತ್ತೂರು ಕಸಬಾ ಗ್ರಾಮದಲ್ಲಿರುವ ಆಶ್ಮಿ ಲಾಡ್ಜ್ ನಲ್ಲಿ ಮೂವರು ತಂಗಿದ್ದು, ಈ ದಿನ ದಿನಾಂಕ: 20.09.2021 ರಂದು 18.55 ಗಂಟೆಗೆ ಸದ್ರಿ ಲಾಡ್ಜ್ ನಲ್ಲಿ ಮೂರು ಜನರು ಜೊತೆಯಲ್ಲಿ ಊಟ ಮಾಡಿಕೊಂಡಿದ್ದ ಸಮಯ ಸದ್ರಿ ಲಾಡ್ಜ್ ನ ಹೊರಗಡೆ ಸುಮಾರು 10 ಜನರು ನಿಂತುಕೊಂಡಿದ್ದವರ ಪೈಕಿ 4-5 ಮಂದಿ ಫಿರ್ಯಾದಿದಾರರ ಬಳಿಗೆ ಬಂದು ಫಿರ್ಯಾದಿದಾರರ ಹಾಗೂ ಜೊತೆಯಲ್ಲಿದ್ದವರ ಹೆಸರು ವಿಳಾಸ ಕೇಳಿ ಆ ಬಳಿಕ ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿದಾರರ ಜೊತೆ ಇದ್ದ ಶಿವ ಎಂಬವರಿಗೆ ಕೈಯಿಂದ ಹೊಡೆದಿರುತ್ತಾರೆ. ಅಲ್ಲದೇ ಸದ್ರಿ ವ್ಯಕ್ತಿಗಳು ಫಿರ್ಯಾದುದಾರರ ಹಾಗೂ ಜೊತೆಯಲ್ಲಿದ್ದವರ ಭಾವಚಿತ್ರವನ್ನು ತೆಗೆದು ಅವಮಾನ ಪಡಿಸಿದ್ದಾರೆ ಎಂದು ದೂರು ನೀಡಲಾಗಿದೆ.